More

    ಇಸಾಮುದ್ರದಲ್ಲಿ ಸಿದ್ದೇಶ್ವರ ರಥೋತ್ಸವ

    ಭರಮಸಾಗರ: ಸಮೀಪದ ಇಸಾಮುದ್ರ ಗ್ರಾಮದಲ್ಲಿ ಶುಕ್ರವಾರ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಅರ್ಚಕರು ಧಾರ್ಮಿಕ ಕಾರ್ಯ ಮುಗಿಸಿದ ನಂತರ ದೇಗುಲ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು.

    ಅಲಂಕೃತ ಅಡ್ಡಪಲ್ಲಕ್ಕಿ ಮೂಲಕ ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಕರೆತಂದು ಮಹಾರಥಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮುಕ್ತಿಬಾವುಟ ಹಾಗೂ ಹೂಮಾಲೆಗಳನ್ನು ಹರಾಜು ಮಾಡಲಾಯಿತು.

    ಸೂರ್ಯ ಅಸ್ತಂಗತವಾಗಲು ಆರಂಭವಾದಂತೆ ರಥ ಪೂರ್ವದಿಕ್ಕಿನ ಪಾದಕಟ್ಟೆಯ ಕಡೆ ಸಾಗಿತು. ಭಕ್ತರು ಜೈಕಾರಗಳೊಂದಿಗೆ ಕೈ ಮುಗಿದರು. ಪಾದಕಟ್ಟೆಯಿಂದ ಪುನಃ ಮೂಲ ಸ್ಥಾನಕ್ಕೆ ತೇರನ್ನು ಎಳೆದು ತರಲಾಯಿತು. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕೋಲು ಮೇಳ, ಭಜನೆ, ಮಂಗಳ ವಾದ್ಯಗಳು ಉತ್ಸವಕ್ಕೆ ಮೆರಗು ತಂದವು.

    ಸಮಿತಿ ನಿರ್ದೇಶಕ ಡಿ.ಎಂ.ಶಾಂತಕುಮಾರ್, ಡಿ.ವಿ ಚನ್ನಬಸಪ್ಪ, ಎಚ್.ಸಿ.ಕರಿಬಸಪ್ಪ, ಎಸ್.ಎಚ್.ಗುರುಮೂರ್ತಿ, ಸಿ.ಜಿ.ಮಂಜುನಾಥ್, ಎಂ.ಬಿ.ಶಿವರಾಜಪಾಟೀಲ್, ಕೆ.ಆರ್.ಮುರುಗೇಶ್, ಕನ್ವೀನರ್ ಡಿ.ಎಸ್.ರುದ್ರಮುನಿ ಇದ್ದರು.

    ಮಾ.1ರಂದು ಜಾತ್ರೋತ್ಸವಕ್ಕೆ ತೆರೆ: ಫೆ.24-ಮದಲಿಂಗಶಾಸ್ತ್ರ, 25-ಕುದುರೆ ಉಚ್ಛಾಯ, 26-ಆನೆ ಉಚ್ಛಾಯ ಸೇವೆ ನೆರವೇರಿದವು. ಫೆ.29-ಪಾನಕದ ಗಾಡಿ, ಮಕ್ಕಳ ಜವಳ, ಬಾಯಿ ಬೀಗ ಹಾಗೂ ದೇವಸ್ಥಾನದ ಆವರಣದಲ್ಲಿ 8ನೇ ವರ್ಷದ ಸಾಮೂಹಿಕ ಉಚಿತ ವಿವಾಹ, ಅನ್ನ ಸಂತರ್ಪಣೆ ನಡೆಯಲಿವೆ. ಮಾ.1 ಓಕುಳಿ, ಗಂಗಾಪೂಜೆ, ಸ್ವಾಮಿಯನ್ನು ಗುಡಿತುಂಬಿಸುವುದು, ಮಹಾಮಂಗಳಾರತಿ , ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವ ತೆರೆಕಾಣಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts