More

    ಧನ್ವಂತರಿ: ಮನೆಯಂಗಳದ ಸಂಜೀವಿನಿ ಭದ್ರಮುಷ್ಟಿ

    ಧನ್ವಂತರಿ: ಮನೆಯಂಗಳದ ಸಂಜೀವಿನಿ ಭದ್ರಮುಷ್ಟಿ

    ಇಲ್ಲಿಯವರೆಗೆ ಮನೆಯಂಗಳದಲ್ಲಿದ್ದರೂ ಗೊತ್ತಿರದಿದ್ದ, ಆದರೆ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಔಷಧೀಯ ಸಸ್ಯ ಭದ್ರಮುಷ್ಟಿ. ಇತ್ತೀಚೆಗೆ ಸುದ್ದಿಗೆ ಬರಲು ಕಾರಣ ಇದಕ್ಕಿರುವ ವೈರಸ್ ನಿರೋಧಕ ಮತ್ತು ರೋಗನಿರೋಧಕ ಗುಣ. ಮಣ್ಣಿನ ಅಂಗಳವಿರುವ ಮನೆಮಂದಿಗೆ ಇದು ಹುಟ್ಟುತ್ತದೆ ಎಂಬುದೇ ತಲೆನೋವಾಗಿರುತ್ತದೆ. ಏಕೆಂದರೆ ಇದನ್ನು ಕಿತ್ತಾಗ ಬೇರು ಮಾತ್ರ ಬರುವುದೇ ಇಲ್ಲ. ಹಾಗಾಗಿ ಮತ್ತೆ ಚಿಗುರುತ್ತದೆ. ಹೀಗೆ ನೆಲದಲ್ಲಿ ಇದರ ಗಡ್ಡೆಯು ಭದ್ರವಾಗಿರುವ ಕಾರಣದಿಂದಲೇ ಇದಕ್ಕೆ ಭದ್ರಮುಷ್ಟಿ ಎಂದು ಕರೆಯುವುದು. ಆದರೆ ಇದನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಭದ್ರವಾಗಿ ನೆಲೆಯೂರಿದ ಕೆಲವು ರೋಗಗಳನ್ನು, ಸೂಕ್ಷಾ್ಮಣು ಜೀವಿಗಳನ್ನು ಬೇರುಸಹಿತ ಕೀಳುವ ಶಕ್ತಿ ಇದಕ್ಕಿದೆ.

    ಆಯುರ್ವೆದ ಗ್ರಂಥಗಳು ಇದರ ಗುಣಗಳ ಬಗ್ಗೆ ತುಂಬ ಹೊಗಳಿವೆ. ಇತ್ತೀಚಿನ ಸಂಶೋಧನೆಗಳೂ ಇದಕ್ಕೆ ವೈರಸ್, ಬ್ಯಾಕ್ಟೀರಿಯಾ ಮುಂತಾದ ಸೂಕ್ಷಾ್ಮಣು ಜೀವಿಗಳನ್ನು ನಾಶಪಡಿಸುವ ಗುಣ, ದೇಹದಲ್ಲಿನ ವಿಷಾಂಶವನ್ನು ಕಡಿಮೆ ಮಾಡುವ ಮತ್ತು ರೋಗನಿರೋಧಕ ಗುಣಗಳಿವೆ ಎಂಬುದನ್ನು ಸಾಬೀತುಪಡಿಸಿವೆ. ಇನ್ನೂ ವಿಶೇಷವೆಂದರೆ ಮದ್ದಿಲ್ಲದ, ನಿಯಂತ್ರಿಸಲಾಗದ ವೈರಸ್ ಆದ ಹೆಪಟೈಟಿಸ್-ಬಿಯನ್ನು ತಕ್ಕ ಮಟ್ಟಿಗೆ ಹತೋಟಿಯಲ್ಲಿಡುವ ಶಕ್ತಿ ಇದಕ್ಕಿದೆ ಎಂದು ಸಂಶೋಧನೆಯೊಂದು ಹೇಳುತ್ತದೆ. ಅಂದರೆ ಇದರ ಸಾಮರ್ಥ್ಯ ಏನೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.

    ಇದಕ್ಕೆ ತಂಪುಗುಣವಿದೆ. ಜ್ವರವನ್ನು ಕಡಿಮೆ ಮಾಡುವ ಗುಣವಿದೆ. ಬಹುತೇಕ ಜನರಿಗೆ ಜ್ವರ ಬಂದಾಗ ತೆಗೆದುಕೊಂಡ ಔಷಧಿಗಳ ಕಾರಣದಿಂದ ಆಗುವ ಉಷ್ಣದಿಂದ ತೊಂದರೆಯಾಗುತ್ತದೆ. ಆಗ ಇದರ ಕಷಾಯವನ್ನು ಕುಡಿಯುವುದರಿಂದ ದೇಹ ತಂಪಾಗುತ್ತದೆ, ಚೆನ್ನಾಗಿ ಬೆವರಿ ಜ್ವರ ಕಡಿಮೆಯಾಗುತ್ತದೆ. ಇದರ ಗುಣ ತಂಪಾಗಿದ್ದರೂ ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ; ಮುಟ್ಟಿನ ಸಮಯದ ರಕ್ತಸ್ರಾವ ಚೆನ್ನಾಗಿ ಆಗುವಂತೆ ಮಾಡುತ್ತದೆ; ಚೆನ್ನಾಗಿ ಬೆವರು ಬರುವಂತೆ ಮಾಡುತ್ತದೆ. ಆಮಶಂಕೆ ಅಥವಾ ಪದೇಪದೆ ಭೇದಿಯಾಗುವ ಸಮಸ್ಯೆ ಇರುವವರಿಗೆ ಇದು ಅತ್ಯಂತ ಲಾಭದಾಯಕವಾದದ್ದು. ಜೀರ್ಣಶಕ್ತಿಯನ್ನು ಹೆಚ್ಚಿಸಿ, ಮಲ ಸರಿಯಾಗಿ ಅಗುವಂತೆ ಮಾಡಿ ಮೂಲದಿಂದಲೇ ಸಮಸ್ಯೆಗೆ ಪರಿಹಾರ ಕೊಡುತ್ತದೆ. ಅರ್ಧ ಚಮಚ ಭದ್ರಮುಷ್ಟಿ ಮತ್ತು ಒಣಶುಂಠಿ ಪುಡಿಗಳನ್ನು ಸಮ ಪ್ರಮಾಣದಲ್ಲಿ ಮಜ್ಜಿಗೆಗೆ ಸೇರಿಸಿ ದಿನಕ್ಕೆರಡು ಬಾರಿ ಸೇವನೆ ಮಾಡಿದರೆ ಆಮಶಂಕೆಯ ಸಮಸ್ಯೆ ಕಡಿಮೆಯಾಗುತ್ತದೆ. ವಾಂತಿ ಮತ್ತು ಭೇದಿ ಒಟ್ಟಿಗೆ ಆಗುತ್ತಿದ್ದರೂ ಶುಂಠಿ ಮತ್ತು ಇದರ ಕಷಾಯವನ್ನು ಮಾಡಿ ಕುಡಿಯುತ್ತಿದ್ದರೆ ಸರಿಯಾಗುತ್ತದೆ.

    ಜ್ವರ ಮತ್ತು ಭೇದಿ ಒಟ್ಟಿಗೆ ಇದ್ದರೆ ಭದ್ರಮುಷ್ಟಿ ಅತ್ಯುತ್ತಮವಾದ ಔಷಧ. ಚಿಕ್ಕ ಮಕ್ಕಳಿಗೂ ಇದನ್ನು ಕೊಡಬಹುದು. ಹೊಟ್ಟೆ ತೊಳಸುವುದು ಮತ್ತು ಬಾಯಿ ರುಚಿ ಇಲ್ಲದಂತಾಗಿದ್ದರೆ ನಾಲ್ಕು ಚಿಟಿಕೆ ಭದ್ರಮುಷ್ಟಿಯ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಉಷ್ಣವಾಗಿ ಮೂತ್ರದ ಪ್ರಮಾಣ ಕಡಿಮೆಯಾಗಿ ಉರಿಮೂತ್ರವಾಗುತ್ತಿದ್ದರೆ ಭದ್ರಮಷ್ಟಿ ಮತ್ತು ಲಾವಂಚವನ್ನು ಮೂರು ಮೂರು ಗ್ರಾಂನಷ್ಟು ಹಾಕಿ ಕಷಾಯ ಮಾಡಿ ಸೇವನೆ ಮಾಡಿದರೆ ತಂಪಾಗಿ, ಮೂತ್ರದ ಪ್ರಮಾಣ ಹೆಚ್ಚಾಗಿ ಸಮಸ್ಯೆ ನಿವಾರಣೆಯಾಗುತ್ತದೆ. ತಾಯಿಹಾಲನ್ನು ಹೆಚ್ಚಿಸುವ ಗುಣವೂ ಇದಕ್ಕಿದೆ. ಜತೆಗೆ ಇದು ತಾಯಿಹಾಲನ್ನು ಶುದ್ಧವಾಗಿಸುತ್ತದೆ. ಹೀಗಾಗಿ ಹಾಲುಣಿಸುವ ತಾಯಿಯು ದಿನಕ್ಕೆ ನಾಲ್ಕು ಚಿಟಿಕೆ ಇದರ ಪುಡಿಯನ್ನು ಹಾಲು ಅಥವಾ ಬಿಸಿನೀರಿನಲ್ಲಿ ಕುಡಿದರೆ ಹಾಲು ಶುದ್ಧವಾಗಿ ಮಗುವಿನ  ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ; ಭೇದಿ ಸರಿಯಾಗುತ್ತದೆ; ರಕ್ತ ಶುದ್ಧಿಯಾಗುತ್ತದೆ.

    ಹೊಟ್ಟೆಯಲ್ಲಿನ ಕ್ರಿಮಿಗಳನ್ನು ನಾಶಪಡಿಸುವ ಗುಣವೂ ಇದಕ್ಕಿದೆ. ಇದರ ಸೇವನೆಯಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ರಕ್ತಶುದ್ಧಿಯಾಗುವ ಕಾರಣ ಗಾಯಗಳು ಬೇಗ ಗುಣವಾಗುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ, ನೆಲನೆಲ್ಲಿ, ಶುಂಠಿಗಳ ಜತೆ ಇದನ್ನೂ ಹಾಕಿ ಕಷಾಯ ಮಾಡಿ ಕೆಲವು ದಿನಗಳ ಕಾಲ ಸೇವಿಸಬೇಕು. ಇದು ಎಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts