More

    ಬಿಜಿಎಂಎಲ್ ನಿವೃತ್ತ ನೌಕರರಿಗೆ ಹಕ್ಕುಪತ್ರ ಶ್ರೀಘ್ರ

    ​ವ್ಯವಸ್ಥಾಪಕ ನಿರ್ದೇಶಕಿ ಫರೀದಾ.ಎಂ.ನಾಯಕ್​ ಭರವಸೆ

    ಕೆಜಿಎಫ್​: ಈ ಹಿಂದೆ 2001ರಲ್ಲಿ ಚಿನ್ನದ ಗಣಿ ಮುಚ್ಚುವ ವೇಳೆ ಎಸ್​ಟಿಬಿಪಿ ಯೋಜನೆಯಡಿ ಮುಂಗಡವಾಗಿ ಹಣ ಪಾವತಿಸಿದ್ದ 2,800 ಬಿಜಿಎಂಎಲ್​ ನೌಕರರಿಗೆ ಅ.2ರೊಳಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಬಿಜಿಎಂಎಲ್​ ವ್ಯವಸ್ಥಾಪಕ ನಿರ್ದೇಶಕಿ ಫರೀದಾ.ಎಂ.ನಾಯಕ್​ ಭರವಸೆ ನೀಡಿದರು.
    ನಗರದ ಸ್ವರ್ಣ ಭವನ್​ಗೆ ಸೋಮವಾರ ಭೇಟಿ ನೀಡಿ ಗಣಿ ಪ್ರದೇಶಗಳಲ್ಲಿನ ಮನೆಗಳ ನೋಂದಣಿಗೆ ಸಂಬಂಧಿಸಿದಂತೆ ಕೆಲ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಮಾತನಾಡಿದರು.
    ಎಸ್​ಟಿಬಿಪಿ ಯೋಜನೆಯ ನೌಕರರಿಗೆ ಮೊದಲಿಗೆ ಹಕ್ಕುಪತ್ರಗಳನ್ನು ನೀಡಲಾಗುವುದು. ಬಳಿಕ ನೌಕರರು ನಗರಸಭೆಯಿಂದ ತಮ್ಮ ಮನೆಗಳಿಗೆ ಸಂಬಂಧಿಸಿದಂತೆ ಪಿಐಡಿ ನಂಬರ್​ಗಳನ್ನು ಪಡೆದುಕೊಂಡು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.

    ಕ್ಯಾಬಿನೆಟ್​ ಅನುಮೋದನೆ ಅಗತ್ಯ
    ಬಿಜಿಎಂಎಲ್​ ಒಡೆತನಕ್ಕೆ ಸೇರಿರುವ ಎಲ್ಲ ಪ್ರದೇಶವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಗಣಿ ಮುಚ್ಚುವ ಸಮಯದಲ್ಲಿ ಎಸ್​ಟಿಬಿಪಿ ಯೋಜನೆಯಡಿ ನಿವೃತ್ತರಾಗಿರುವ ನೌಕರರಿಂದ ಹಣ ಪಡೆದುಕೊಂಡಿದ್ದು, ಅವರ ಹೆಸರಿಗೆ ಮನೆಗಳನ್ನು ವರ್ಗಾಯಿಸುವುದಕ್ಕೆ ಕ್ಯಾಬಿನೆಟ್​ ಅನುಮೋದನೆ ಸಿಕ್ಕಿದ್ದು, ಅದನ್ನು ಈಗ ಜಾರಿಗೊಳಿಸಲಾಗುತ್ತಿದೆ. ಇದರ ಹೊರತಾಗಿ ಬೇರೆ ಯಾವುದೇ ಹೊಸ ವಿಷಯವನ್ನು ಜಾರಿಗೊಳಿಸುವ ಮುನ್ನ ಕಡ್ಡಾಯವಾಗಿ ಕ್ಯಾಬಿನೆಟ್​ ಅನುಮೋದನೆ ಪಡೆದುಕೊಳ್ಳಬೇಕಾಗಿರುವುದು ಅಗತ್ಯ. ಕ್ಯಾಬಿನೆಟ್​ ಅನುಮೋದನೆ ಪಡೆದುಕೊಳ್ಳದ ಹೊರತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಫರೀದಾ.ಎಂ.ನಾಯಕ್​ ತಿಳಿಸಿದರು.

    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಬಿಜಿಎಂಎಲ್​ ನೌಕರರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮನೆಗಳ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಬಿಜಿಎಂಎಲ್​ ವ್ಯವಸ್ಥಾಪಕ ನಿರ್ದೇಶಕಿ ಫರೀದಾ ಎಂ.ನಾಯಕ್​ ಅವರೊಂದಿಗೆ ಸಮಾಲೋಚಿಸಿ, ಎಸ್​ಟಿಬಿಪಿ ಯೋಜನೆಯಡಿ ನಿವೃತ್ತರಾಗಿರುವ 2,800 ಮಂದಿಗೆ 2 ತಿಂಗಳೊಳಗೆ ಹಕ್ಕುಪತ್ರಗಳನ್ನು ನೀಡುವ ಕೆಲಸ ಮಾಡಲಾಗುತ್ತದೆ. ಈ ಹಕ್ಕುಪತ್ರಗಳು ಸಂಪೂರ್ಣವಾಗಿ ಡಿಜಿಟಲ್​ ಸ್ವರೂಪದ್ದಾಗಿದ್ದು, ನಕಲು ಮಾಡಲು ಸಾಧ್ಯವಾಗದಂತೆ ದೆಹಲಿಯಲ್ಲಿಯೇ ಮುದ್ರಿಸಿ, ವಿತರಿಸುವ ಕಾರ್ಯ ಮಾಡಲಾಗುತ್ತದೆ.
    ಜತೆಗೆ ನೌಕರರಿಗೆ ಪಾವತಿಯಾಗದೇ ಇರುವ 52 ಕೋಟಿ ರೂ.ಗಳ ಗ್ರಾಚ್ಯುಟಿ ಹಣ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುವುದಾಗಿ ಬಿಜಿಎಂಎಲ್​ ಎಂಡಿ ಭರವಸೆ ನೀಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲರೂ ನೌಕರರ ಪರ ಇದ್ದಾರೆ. ಎಸ್​ಟಿಬಿಪಿ ಯೋಜನೆಯಡಿ ನಿವೃತ್ತರಾದ ನೌಕರಲ್ಲದೆ ಗಣಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಉಳಿದ ಎಲ್ಲ ನೌಕರರ ಮನೆಗಳಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು.
    ಕೇಂದ್ರ ಸರ್ಕಾರದಿಂದ ಗಣಿ ಜಾಗವನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸುವ ಮುನ್ನ 2,800 ಮಂದಿಗೆ ಮನೆಗಳ ಹಕ್ಕುಪತ್ರಗಳನ್ನು ನೀಡಿದ ಹಾಗೆ ಉಳಿದವರಿಗೂ ಏನನ್ನಾದರೂ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
    ಪ್ರವಾಸಿ ತಾಣವಾಗಿ ಮಾರ್ಪಾಡು
    ಇದಲ್ಲದೇ ಬಿಜಿಎಂಎಲ್​ ಪ್ರದೇಶದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವುದು, ಚಿನ್ನದ ಗಣಿ ಪ್ರದೇಶದಲ್ಲಿ ಮಿಷನರಿಗಳಿರುವ ಜಾಗ, ಗಣಿ ಕಾರ್ಯ ನಡೆಯುತ್ತಿದ್ದ ಜಾಗಗಳನ್ನು ಪ್ರವಾಸೋದ್ಯಮ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸುವುದು ಹಾಗೂ ಬಿಜಿಎಂಎಲ್​ ಪ್ರದೇಶದಲ್ಲಿ ಮನೆಗಳನ್ನು ನಿಮಾರ್ಣ ಮಾಡಿಕೊಂಡಿರುವ ಜಾಗವನ್ನು ಸರ್ವೇ ಮಾಡಿಸಿ, ಚೆಕ್​ಬಂದಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.

    ಪ್ರತಿಭಟನೆಯ ಕಾವು
    ವಿವಿಧ ಸಂಘಟನೆಗಳ ಮುಖಂಡರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬಿಜಿಎಂಎಲ್​ ಎಂಡಿ ಫರೀದಾ.ಎಂ.ನಾಯಕ್​ ಅವರಿಗೆ ಮನವಿ ಸಲ್ಲಿಸಿದ್ದು, ಜತೆಗೆ ಬಿಜಿಎಂಎಲ್​ನಲ್ಲಿ ಕಳ್ಳತನವಾಗುತ್ತಿರುವುದು, ಬಿಜಿಎಂಎಲ್​ ಸಿಬ್ಬಂದಿ ಕಳ್ಳರೊಂದಿಗೆ ಶಾಮೀಲಾಗಿರುವ ಫೋಟೋಗಳು, ಬಿಜಿಎಂಎಲ್​ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳು ನಿಮಾರ್ಣವಾಗುತ್ತಿದ್ದರೂ ಭದ್ರತಾ ಸಿಬ್ಬಂದಿ ಮೂಕ ಪ್ರೇಕ್ಷಕರಂತಿರುವುದು ಸೇರಿ 35 ದಾಖಲೆ ಸಮೇತ ಫೋಟೋಗಳನ್ನು ಬಿಜಿಎಂಎಲ್​ ಎಂಡಿಗೆ ಸಲ್ಲಿಸಿದರು. ಕೆಲವು ಕಾರ್ಮಿಕ ಸಂಘಟನೆಗಳ ಮುಖಂಡರು ಐಷಾರಾಮಿ ಜೀವನ ನಡೆಸುತ್ತಿದ್ದು, ಕಾರ್ಮಿಕರ ಹಿತರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಅಧಿಕಾರಿಗಳು ನೇರವಾಗಿ ಕಾರ್ಮಿಕರನ್ನೇ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಬೇಕು ಎಂದು ಸ್ವರ್ಣ ಭವನದ ಹೊರಗೆ ಕೆಲ ನಿವೃತ್ತ ಕಾರ್ಮಿಕರು ಘೋಷಣೆಗಳನ್ನು ಕೂಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts