More

    ಬಿಇಒ ಕಚೇರಿಗೆ ಹೊಸ ಕಳೆ

    ಅನ್ಸಾರ್ ಇನೋಳಿ ಉಳ್ಳಾಲ

    ಕರೊನಾ ಸಂದಿಗ್ಧ ಸ್ಥಿತಿಯಲ್ಲಿ ಶಾಲೆಗಳು ಇನ್ನೂ ಆರಂಭಗೊಂಡಿಲ್ಲ. ಇಂಥ ಸಂದರ್ಭವನ್ನೇ ಬಳಸಿಕೊಂಡು ಚಿತ್ರಕಲಾ ಶಿಕ್ಷಕರು ಕೈಯಲ್ಲಿ ಪೇಂಟ್, ಬ್ರಷ್ ಹಿಡಿದು ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸೌಂದರ್ಯ ವರ್ಧಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

    ಮಾರ್ಚ್‌ನಲ್ಲಿ ಮುಚ್ಚಲ್ಪಟ್ಟ ಪ್ರಾಥಮಿಕ ಶಾಲೆಗಳು ಇಂದಿಗೂ ಸರಿಯಾಗಿ ಆರಂಭಗೊಂಡಿಲ್ಲ. ಆರಂಭದ ದಿನಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು, ಕೆಲವೊಂದು ಖಾಸಗಿ ಶಾಲೆಗಳ ಶಿಕ್ಷಕರಂತೂ ಸಿಕ್ಕಸಿಕ್ಕ ಕೆಲಸಗಳತ್ತ ವಲಸೆ ಹೋಗಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು, ಸಿಬ್ಬಂದಿಯನ್ನು ಕರೊನಾ ವಾರಿಯರ್‌ಗಳಾಗಿ ಕೆಲಸಕ್ಕೆ ನಿಯೋಜಿಸಲಾಗಿತ್ತು.

    ಈ ವರ್ಷ ಕರೊನಾ ಕಳೆದ ವರ್ಷದಂತೆ ಜೋರಾಗಿ ಕಾಡದಿದ್ದರೂ, ಶಾಲೆಗಳ ಆರಂಭಕ್ಕೆ ಅನುಮತಿ ಸಿಕ್ಕಿಲ್ಲ. ಇದರಿಂದ ಶಿಕ್ಷಕರು ಮಕ್ಕಳಿಗೆ ನೇರವಾಗಿ ಪಾಠ ಮಾಡುವ ಅವಕಾಶ ಸಿಕ್ಕಿಲ್ಲ. ಅಂತರ್ಜಾಲದಲ್ಲಿ ಪಾಠ ನಡೆಯುತ್ತಿದ್ದರೂ, ಅದರಿಂದ ದೈಹಿಕ ಶಿಕ್ಷಣ ಶಿಕ್ಷಕರು, ಕಲಾ ಶಿಕ್ಷಕರಿಗೆ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣ ಇಲಾಖೆ ರಜೆಯ ಲಾಭ ಪಡೆಯಲು ಮುಂದಾಗಿದೆ.

    ಅದರಂತೆ ಕಚೇರಿ ಸಹಿತ ಇಲಾಖೆಯ ಸಂಪೂರ್ಣ ಆವರಣವನ್ನು ಸುಂದರವಾಗಿ ಕಾಣಿಸುವಂತೆ ಮಾಡಲು ಯೋಚಿಸಿದ್ದು ಅದರ ಜವಾಬ್ದಾರಿ ಕಲಾ ಶಿಕ್ಷಕರ ಹೆಗಲಿಗೇರಿಸಲಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ನಾಲ್ಕು ದಿನಗಳಿಂದ ಕಲಾ ಶಿಕ್ಷಕರಾದ ಬಿ.ಎಂ.ರಫೀಕ್ ತುಂಬೆ, ಮುರಳೀಧರ ಆಚಾರ್ಯ, ರೂಪಾ ಸಾಂವಕರ್, ವಿದ್ಯಾ ತಲಪಾಡಿ, ನಳಿನಾಕ್ಷಿ ಬಜ್ಪೆ, ಬಿ.ಲಲಿತಾ, ಕಸ್ತೂರಿ, ಹರೀಶ್ ಆಚಾರ್ ಕಚೇರಿ ಒಳಭಾಗ ಮತ್ತು ಹೊರಭಾಗದ ಗೋಡೆಗಳು, ಆವರಣ ಗೋಡೆಗಳಿಗೆ ಬಣ್ಣ ಬಳಿದು ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದಾರೆ.
    ಗೋಡೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳು, ಕರಾವಳಿ ಭಾಗದ ಸಂಸ್ಕೃತಿ ಭೂತಕೋಲ, ಹುಲಿ ಕುಣಿತ, ಕಂಬಳ, ಯಕ್ಷಗಾನ, ಮೀನುಗಾರಿಕೆಗೆ ಸಂಬಂಧಿಸಿದ ಚಿತ್ರಗಳು, ಕೇರಳ, ಅಸ್ಸಾಂ, ಗುಜರಾತ್ ಸಹಿತ ಇತರ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ನೃತ್ಯ ಕಲೆಗೆ ಸಂಬಂಧಿಸಿದ ಚಿತ್ರಗಳನ್ನೂ ಬಿಡಿಲಾಗುತ್ತಿದೆ. ಇದರಿಂದ ಹಲವು ಸಮಯಗಳ ಬಳಿಕ ಶಿಕ್ಷಣಾಧಿಕಾರಿ ಕಚೇರಿ ಹೊಸತನದ ಗತ್ತಿನಲ್ಲಿ ಮೆರೆಯಲಿದೆ.

    ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಎಲ್ಲ ಶಾಲೆ, ಶಿಕ್ಷಣಾಧಿಕಾರಿ ಕಚೇರಿಯನ್ನು ಶೈಕ್ಷಣಿಕವಾಗಿ ಆಕರ್ಷಿಸುವಂತೆ ಮಾಡುವ ಉದ್ದೇಶದಿಂದ ಸೃಜನಶೀಲ ಶಿಕ್ಷಕರ ಸಹಕಾರ ಪಡೆಯಲಾಗಿದೆ. ಬೇಕಾದ ವಸ್ತುಗಳಿಗೆ ಹಣಕಾಸಿನ ವ್ಯವಸ್ಥೆಯನ್ನು ಶಿಕ್ಷಕರೇ ಮಾಡಿದ್ದಾರೆ.
    ರಾಜೇಶ್ವರಿ ಕೆ. ಕ್ಷೇತ್ರ ಶಿಕ್ಷಣಾಧಿಕಾರಿ

    ಮಂಗಳೂರು ದಕ್ಷಿಣ ವಲಯ ಚಿತ್ರಕಲಾ ಶಿಕ್ಷಕರು ಶಿಕ್ಷಣಾಧಿಕಾರಿ ಕಚೇರಿಯ ಗೋಡೆ, ಆವರಣ ಗೋಡೆಯಲ್ಲಿ ಚಿತ್ರ ಬಿಡಿಸಿ ಸೌಂದರ್ಯಗೊಳಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ, ಸಂಪನ್ಮೂಲ ವ್ಯವಸ್ಥೆ ಮಾಡಿದಲ್ಲಿ ಈ ಕಚೇರಿ ಮಾತ್ರವಲ್ಲದೆ ಇತರ ಶಾಲೆಗಳನ್ನೂ ಸುಂದರಗೊಳಿಸಲು ನಾವು ಸಿದ್ಧರಿದ್ದೇವೆ.
    ಬಿ.ಎಂ.ರಫೀಕ್ ತುಂಬೆ, ಚಿತ್ರಕಲಾ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts