More

    ಅಗಿದು ಬಿಸಾಕುವ ಚೂಯಿಂಗ್​ ಗಮ್​ನಿಂದಲೇ ನಗರ ಸಿಂಗಾರ: ಹೇಗಿದೆ ನೋಡಿ ಚೂಯಿಂಗ್​ ಗಮ್​ ಮ್ಯಾನ್​ನ ಕರಾಮತ್ತು

    ಲಂಡನ್​: ಆಹಾರವೇ ಒಂದು ಕಲೆ ಎಂದು ಹಿರಿಯರು ಹೇಳುತ್ತಾರೆ. ಇದೇ ಆಹಾರ ಪೂರ್ತಿ ನಗರವನ್ನೇ ಸಿಂಗರಿಸುವಂತಿದ್ದರೆ? ಅದರಲ್ಲೂ ನಾವು ಅಗಿದು ಬಿಸಾಕುವ ಚೂಯಿಂಗ್​ ಗಮ್​ ನಮ್ಮ ನಗರದ ಫುಟ್​ಪಾತ್​, ರಸ್ತೆಗಳ ಮೇಲೆ ವರ್ಣರಂಜಿತವಾಗಿ ಕಂಗೊಳಿಸುತ್ತಿದ್ದರೆ? ಹೌದು! ಲಂಡನ್​ನ ಬೆನ್​ ವಿಲ್ಸನ್​ ಹೆಸರಿನ ವ್ಯಕ್ತಿ ಕಸದಂತಿರುವ ಚೂಯಿಂಗ್​ ಗಮ್​ನಿಂದ ನಗರ ಸಿಂಗಾರ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ.

    ನಾವೆಲ್ಲ ಚೂಯಿಂಗ್​ ಗಮ್​ ಖರೀದಿಸುವುದು ಕೆಲ ನಿಮಿಷಗಳ ಕಾಲ ಅಗಿದು ಬಿಸಾಕುವುದಕ್ಕೆ. ಅದು ನಿಮಷದ ಕಾಲ ನಮ್ಮ ನಾಲಿಗೆಗೆ ರುಚಿ ನೀಡುವ ತಿಂಡಿಯಷ್ಟೇ. ಅಗಿದಾದ ಮೇಲೆ ಅದೊಂದು ಕಸ. ಆದರೆ ಲಂಡನ್​ನ ಬೆನ್​ ವಿಲ್ಸನ್​ ಇದೇ ಚೂಯಿಂಗ್​ ಗಮ್​ನನ್ನು ತನ್ನ ಕಲೆಯ ಪ್ರದರ್ಶನಕ್ಕೆಂದು ಬಳಸಿಕೊಳ್ಳುತ್ತಿದ್ದಾನೆ. ಚಿತ್ರ ಕಲಾವಿದನಾಗಿರುವ ಈತ ತನಗೆ ರಸ್ತೆ, ಫುಟ್​ಪಾತ್​ಗಳ ಮೇಲೆ ಕಾಣುವ ಪ್ರತಿ ಚೂಯಿಂಗ್​ ಗಮ್​ನ ಮೇಲೆಯೂ ಚಿತ್ರ ಬರೆಯುತ್ತಾನೆ. ದಾರಿ ಮೇಲೆ ಯಾರೋ ಅಗಿದು ಬಿಸಾಕಿರುವ ಚೂಯಿಂಗ್​ ಗಮ್​ನ ಮೇಲೆ ಈತ ಬರೆಯುವ ಚಿತ್ರಗಳು ದಾರಿ ಹೋಕರೆಲ್ಲ ಒಮ್ಮೆಯಾದರೂ ನಿಂತು ನೋಡುವಂತೆ ಮಾಡುತ್ತವೆ. ಚೂಯಿಂಗ್​ ಗಮ್​ ಇರುವ ಆಕೃತಿಗೆ ತಕ್ಕಂತೆ ಚಿತ್ರವನ್ನು ಬರೆದು ಜನರನ್ನು ಆಕರ್ಷಿಸುವುದು ಈತನಿಗೆ ಇಷ್ಟದ ಕೆಲಸವಾಗಿಬಿಟ್ಟಿದೆಯಂತೆ.

    ಬೆನ್​ ವಿಲ್ಸನ್​ ಸುಮಾರು 15 ವರ್ಷಗಳಿಂದ ಚೂಯಿಂಗ್​ ಗಮ್​ನಲ್ಲಿ ತನ್ನ ಕಲೆಯ ಪ್ರದರ್ಶನ ಆರಂಭಿಸಿದ್ದಾನೆ. ವಿಶೇಷವೆಂದರೆ ಈತ ರಚಿಸಿರುವ ಯಾವುದೇ ಕಲಾಕೃತಿಯಲ್ಲಿಯೂ ಕೂಡ ತನ್ನ ಹೆಸರನ್ನಾಗಲೀ ಅಥವಾ ಸಹಿಯನ್ನಾಗಲಿ ಹಾಕಿಲ್ಲವಂತೆ. ಈತನ ಈ ಪ್ರತಿಭೆ ಕಂಡು ಲಂಡನ್​ನ ಜನರು ಈತನನ್ನು, ‘ದಿ ಚೂಯಿಂಗ್​ ಗಮ್​ ಮ್ಯಾನ್​’ ಎಂಬ ಹೆಸರಿಟ್ಟಿದ್ದಾರಂತೆ.

    ಕಳೆದ ಕೆಲ ತಿಂಗಳುಗಳ ಹಿಂದ ತನ್ನ ಎಲ್ಲ ಕಲಾಕೃತಿಗಳ ಫೋಟೋ ಹೊಂದಿರುವ ಪುಸ್ತಕವೊಂದನ್ನು ಪ್ರಕಟಿಸುವ ಸಲುವಾಗಿ ಬೆನ್​ ವಿಲ್ಸನ್​ ಜನರಿಂದ ಹಣ ಸಂಗ್ರಹಿಸಲು ಆರಂಭಿಸಿದನಂತೆ. ನಿರೀಕ್ಷೆಗೂ ಮೀರಿದಂತೆ ಅಗತ್ಯಕ್ಕೂ ಹೆಚ್ಚಿನ ಹಣ ಆತನ ಪ್ರೋತ್ಸಾಹಕ್ಕೆಂದು ಹರಿದುಬಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಅದೇನೆ ಇರಲಿ ಅಲ್ಲಲ್ಲಿ ಕಸವಾಗಿ ಬೀಳುವ ಚೂಯಿಂಗ್​ ಗಮ್​ನ್ನು ಈ ರೀತಿಯಲ್ಲಿಯೂ ಬಳಸಬಹುದು ಎಂದು ತೋರಿಸಿಕೊಟ್ಟ ಕಲಾವಿದನಿಗೆ ಎಲ್ಲರೂ ಮನಸೋತಿರುವುದಂತೂ ಸತ್ಯ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts