More

    ಕೈಗಾರಿಕಾ ಹಬ್ ಆಗಲಿದೆ ಬೆಳ್ಳೂರು

    ಕೆ.ಎನ್.ರಾಘವೇಂದ್ರ ಮಂಡ್ಯ
    ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯಲ್ಲಿ ಕೈಗಾರಿಕಾ ಸ್ಥಾಪನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ರೂಪಿಸಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ.

    ಆರ್ಥಿಕಾಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶದ ಉದ್ದೇಶದೊಂದಿಗೆ ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ 1,277.02 ಎಕರೆ ಜಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಪ್ರದೇಶಾಭಿವೃದ್ಧಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಆ.14ರಂದು ನೋಟಿಫಿಕೇಷನ್ ಕೂಡ ಹೊರಡಿಸಲಾಗಿದ್ದು, ಆ.25ರಂದು ರೈತರಿಗೂ ನೋಟಿಸ್ ನೀಡಲಾಗಿದೆ. ಈ ನಡುವೆ ಕೃಷಿಗೆ ಯೋಗ್ಯವಾಗಿರುವ ಭೂಮಿಯನ್ನು ವಶಪಡಿಸಿಕೊಳ್ಳುವುದು ಬೇಡ ಎನ್ನುವ ಕೂಗು ಕೇಳಿಬರುತ್ತಿದೆ.

    ಆ.25ರಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೈಸೂರು ವಿಶೇಷ ಭೂಸ್ವಾಧೀನಾಧಿಕಾರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಬೆಳ್ಳೂರು ಹೋಬಳಿಯ ಚೆನ್ನಾಪುರ, ಬೀಚನಹಳ್ಳಿ, ಹಟ್ನ, ಬಿಳಗುಂದ ವ್ಯಾಪ್ತಿಯಲ್ಲಿ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.
    ಈ ಸಂಬಂಧ ಪ್ರಾರಂಭಿಕ ಅಧಿಸೂಚನೆ ಪ್ರಕಟಣೆಯನ್ನು ಸಾರ್ವಜನಿಕರ ತಿಳಿವಳಿಕೆಗೆ ನೀಡಲು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಸೂಚಿಸಿದ್ದಾರೆ. 1,277.02 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ಜಿಲ್ಲೆಯ ಪಾಲಿಗೆ ಅದರಲ್ಲಿಯೂ ನಾಗಮಂಗಲ ತಾಲೂಕಿಗೆ ದೊಡ್ಡ ಕೊಡುಗೆ ಸಿಕ್ಕಂತಾಗುತ್ತದೆ. ಕೈಗಾರಿಕೆಗಳ ಆಗಮನದಿಂದ ಆರ್ಥಿಕಾಭಿವೃದ್ಧಿ ಜತೆಗೆ ಸ್ಥಳೀಯರಿಗೂ ಉದ್ಯೋಗಾವಕಾಶ ಸಿಗಲಿದೆ. ಈ ಮೂಲಕ ಬೆಳ್ಳೂರು ಕೈಗಾರಿಕಾ ಹಬ್ ಆಗಿ ಹೊರಹೊಮ್ಮಲಿದೆ.

    ಇನ್ನು ಭೂ ಸ್ವಾಧೀನ ಪ್ರಕಿಯೆಗೆ ಚಾಲನೆ ನೀಡಬೇಕಿದೆ. ಇಲ್ಲಿ 425.35 ಎಕರೆ ಜಮೀನು ಸರ್ಕಾರಕ್ಕೆ ಸೇರಿದೆ. ಉಳಿದಂತೆ 851.7 ಎಕರೆ ಜಮೀನನ್ನು ಖರೀದಿಸಬೇಕಿದೆ. ಎಲ್ಲ ಪ್ರಕಿಯೆ ಪೂರ್ಣಗೊಳಿಸಿ ಪ್ರದೇಶಗಳ ಅಭಿವೃದ್ಧಿಪಡಿಸಲು ಸುಮಾರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಆ ಬಳಿಕ ಕರ್ನಾಟಕ ಸೇರಿ ಬೇರೆ ರಾಜ್ಯದ ಕೈಗಾರಿಕೋದ್ಯಮಗಳಿಗೆ ಅವಕಾಶ ಸಿಗಲಿದೆ. ಅಂತೆಯೇ ಪ್ರದೇಶಾಭಿವೃದ್ಧಿಯಿಂದ ಸ್ಥಳೀಯ ಜಮೀನಿಗೆ ಉತ್ತಮ ಬೆಲೆಯೂ ಸಿಗಲಿದೆ. ಇತರ ಸೌಲಭ್ಯವೂ ಒದಗಿ ಬರಲಿದೆ. ಇನ್ನು ಬೆಂಗಳೂರು, ತುಮಕೂರು, ಹಾಸನ, ಮಂಗಳೂರು ಜಿಲ್ಲೆಗಳಿಗೂ ಸಂಪರ್ಕವಿರುವ ಸ್ಥಳವಾಗಿರುವುದರಿಂದ ಮುಂದಿನ ದಿನದಲ್ಲಿ ಬೇಡಿಕೆಯೂ ಹೆಚ್ಚುವುದರಲ್ಲಿ ಅನುಮಾನವಿಲ್ಲ.

    ರಾಜಕೀಯದ ಕೆಸರು: ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ರಾಜಕೀಯ ಪ್ರಾರಂಭವಾಗಿದೆ. ಒಂದೆಡೆ ಭೂಮಿಗೆ ಉತ್ತಮ ಬೆಲೆ ಸಿಗುವುದರಿಂದ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ ಎನ್ನುವುದು ಇದೆ. ಜತೆಗೆ ಸಣ್ಣ ಪ್ರಮಾಣದಲ್ಲಿ ಜಮೀನು ಹೊಂದಿರುವವರು ಮಾರಾಟ ಮಾಡಲು ಸಹಕಾರ ನೀಡುತ್ತಿದ್ದಾರೆ. ಆದರೆ ಇನ್ನೊಂದೆಡೆ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಅವಕಾಶ ಕಲ್ಪಿಸುವುದು ಬೇಡ ಎಂದು ರೈತರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸವೂ ನಡೆಯುತ್ತಿದೆ.

    ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಜೆಡಿಎಸ್‌ನ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಪ್ರಣಾಳಿಕೆಯಲ್ಲಿ ಇದೇ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಅಂದು 300 ರಿಂದ 400 ಎಕರೆ ಪ್ರದೇಶದಲ್ಲಿ ಮಾತ್ರ ಕೈಗಾರಿಕೆ ಸ್ಥಾಪನೆ ಮಾಡುವುದೆಂದು ಹೇಳಲಾಗಿತ್ತು. ಅದರಂತೆಯೇ ಎಚ್‌ಡಿಕೆ ಸಿಎಂ ಆದ ವೇಳೆ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ಕೊಡಿಸುವಲ್ಲಿ ಸ್ಥಳೀಯ ಶಾಸಕ ಸುರೇಶ್‌ಗೌಡ ಯಶಸ್ವಿಯಾಗಿದ್ದರು. ಜತೆಗೆ ಬಜೆಟ್‌ನಲ್ಲಿಯೂ ಯೋಜನೆ ಘೋಷಣೆಯಾಗಿತ್ತು. ನಂತರ ಸರ್ಕಾರ ಉರುಳಿದ ಪರಿಣಾಮ ಯೋಜನೆ ಸ್ಥಗಿತವಾಗಿತ್ತು. ಇದೀಗ ರಾಜ್ಯ ಸರ್ಕಾರ ಏಕಾಏಕಿ 1,277.02 ಎಕರೆ ಭೂಮಿ ಸ್ವಾಧೀನಕ್ಕೆ ಸೂಚನೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

    ಒಟ್ಟಾರೆ ಜಿಲ್ಲೆ ಮತ್ತು ನಾಗಮಂಗಲ ತಾಲೂಕಿಗೆ ಇದೊಂದು ಉತ್ತಮ ಯೋಜನೆ ಎನ್ನಿಸುತ್ತಿದೆ. ಭೂಮಿ ಖರೀದಿಸುತ್ತಿರುವ ಗ್ರಾಮಗಳಿಗೆ ಅನನುಕೂಲ ಎನ್ನುವಂತೆಯೂ ಆಗಿದೆ. ಈ ಬಗ್ಗೆ ರೈತರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಯಾವ ತೀರ್ಮಾನಕ್ಕೆ ಬರುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

    ಜಿಲ್ಲೆಯಲ್ಲಿ 7685 ಕೈಗಾರಿಕೆಗಳು: ಜಿಲ್ಲೆಯಲ್ಲಿ ಪ್ರಸ್ತುತ 7685 ಕೈಗಾರಿಕೆಗಳಿವೆ. ಇದರಲ್ಲಿ ಸುಮಾರು 28 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಅಂತೆಯೇ, ಶುಗರ್ ಕಾರ್ಖಾನೆ, ಪವರ್‌ಸೆಲ್, ಆಗ್ರೋ, ಗಾರ್ಮೆಂಟ್ಸ್ ಸೇರಿ 12 ಬೃಹತ್ ಕೈಗಾರಿಕೆಗಳಿವೆ. ಇದರಲ್ಲಿ ಅಂದಾಜು 7 ಸಾವಿರ ಜನರು ದುಡಿಯುತ್ತಿದ್ದಾರೆ. ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ತೊಂದರೆಯಿಂದಾಗಿ ಅನೇಕ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಆದರೆ, ಈ ರೀತಿ ಮುಚ್ಚಿರುವ ಕೈಗಾರಿಕೆಗಳಿಗೆ ನಿರ್ದಿಷ್ಟ ಸಂಖ್ಯೆ ಇಲ್ಲ.

    ಮಾ.23ರಿಂದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಯಲ್ಲಿ 1750 ಕೋಟಿ ರೂ. ಬಂಡವಾಳ ಹೂಡಿಕೆಗೆ ವಿವಿಧ ಉದ್ಯಮಗಳು ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿವೆ. ಈ ಪೈಕಿ ಮಂಡ್ಯ ಜಿಲ್ಲೆಯಲ್ಲಿ 125.11 ಕೋಟಿ ರೂ.ನಲ್ಲಿ ಕೈಗಾರಿಕೆ ಸ್ಥಾಪನೆಗೆ ಆರು ಸಂಸ್ಥೆಗಳು ಉತ್ಸಾಹ ತೋರಿವೆ. ಇದು ಯಶಸ್ವಿಯಾದರೆ ಜಿಲ್ಲೆಯಲ್ಲಿ ಸುಮಾರು 240 ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.

    ಜಮೀನಿನ ಅಂಕಿ ಅಂಶ(ಎಕರೆ ಮತ್ತು ಗುಂಟೆಗಳಲ್ಲಿ)
    ಗ್ರಾಮ ಖರಾಬು ಖರೀದಿ ಒಟ್ಟು
    ಚೆನ್ನಾಪುರ 4.03 10.05 14.08
    ಬೀಚನಹಳ್ಳಿ 109.02 162.37 271.39
    ಹಟ್ನ 99.19 330.07 429.27
    ಬಿಳಗುಂದ 213.10 347.38 561.08
    ಒಟ್ಟು 425.35 851.07 1277.02

    ನಾಗಮಂಗಲ ತಾಲೂಕಿನಲ್ಲಿ 300 ರಿಂದ 400 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕೆಂಬುದು ನಮ್ಮ ಪ್ರಣಾಳಿಕೆಯಲ್ಲಿಯೂ ಇತ್ತು. ಅದರಂತೆ ಮೈತ್ರಿ ಸರ್ಕಾರ ಬಂದಾಗ ಅನುಮೋದನೆಯೂ ಸಿಕ್ಕಿದೆ. ಇದಕ್ಕೆ ಕಾರಣ ಒಟ್ಟು ಜಮೀನಿನಲ್ಲಿ ಅರ್ಧದಷ್ಟು ಜಮೀನು ಸರ್ಕಾರದ್ದೇ ಆಗಿತ್ತು. ಇದೀಗ ಸಾವಿರಾರೂ ಎಕರೆ ಭೂಮಿ ವಶಪಡಿಕೊಳ್ಳಲಾಗುತ್ತಿದೆ. ಜತೆಗೆ ಈ ಯಾವುದೇ ಪ್ರಕ್ರಿಯೆಯೂ ನನ್ನ ಗಮನಕ್ಕೆ ಬಂದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಜಮೀನು ವಶಪಡಿಸಿಕೊಳ್ಳಲು ನನ್ನ ವಿರೋಧವಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ. ವರಿಷ್ಠರೊಂದಿಗೆ ಮತ್ತು ಸ್ಥಳೀಯರೊಂದಿಗೆ ಚರ್ಚಿಸಿ ಹೋರಾಟ ರೂಪಿಸಲಾಗುವುದು.
    ಸುರೇಶ್‌ಗೌಡ, ನಾಗಮಂಗಲ ಶಾಸಕ

    ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಸೂಚನೆ ನೀಡಲಾಗಿದೆ. ಪ್ರದೇಶಾಭಿವೃದ್ಧಿಯಾಗಿ ಕೈಗಾರಿಕೆಗಳ ಸ್ಥಾಪನೆಯಾದರೆ ಆರ್ಥಿಕಾಭಿವೃದ್ಧಿಯಾಗಲಿದೆ. ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗಲಿದೆ. ಇನ್ನು ಸ್ವಾಧೀನಪಡಿಸಿಕೊಂಡ ಜಮೀನಿಗೆ ಮಂಡಳಿಯಿಂದ ಉತ್ತಮ ಬೆಲೆ ನೀಡಲಾಗುತ್ತದೆ.
    ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ

    ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದಂತೆ ನೋಟಿಫಿಕೇಷನ್ ಆಗಿದೆ. ಅಂತೆಯೇ ಭೂ ಸ್ವಾಧೀನ ಪ್ರಕಿಯೆಗೆ ಚಾಲನೆ ನೀಡಬೇಕಿದೆ. ಭೂಮಿಯನ್ನು ಖರೀದಿಸಿ ಅಭಿವೃದ್ಧಿಪಡಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ನಂತರ ಕೈಗಾರಿಕೆ ಸ್ಥಾಪನೆಯಾಗಲಿದೆ. ಇದರಿಂದಾಗಿ ಯುವಸಮೂಹಕ್ಕೆ ಉದ್ಯೋಗಾವಕಾಶ ಸಿಗಲಿದೆ.
    ಎಂ.ಎನ್.ಮುರುಳೇಶ್, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts