More

    ಐಸಿಸಿ ಸಭೆ ನಿರ್ಣಯದಂತೆ ಕಾಲುವೆಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ ಗೌಡ ಒತ್ತಾಯ

    ಬಳ್ಳಾರಿ: ಐಸಿಸಿ ಸಭೆಯಲ್ಲಿ ನಿರ್ಣಯದಂತೆ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ಟಿಬಿ ಡ್ಯಾಂ ಹತ್ತಿರ ರೈತರೊಂದಿಗೆ ಜು.19ರಂದು ಹೋರಾಟ ನಡೆಸಲಾಗುವುದು ಎಂದು ತುಂಗಭದ್ರಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಹೇಳಿದರು.

    ಉತ್ತಮ ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, 47 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರ ಬೆನ್ನಲ್ಲೇ 58 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡುಪಟ್ಟು ಹೆಚ್ಚು ನೀರು ಇದೆ. ಜು.12ರಂದು ನಾಲ್ಕು ಜಿಲ್ಲೆಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳೊಂದಿಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದು, ಕಾಮಗಾರಿಗಳ ನೆಪ ಹೇಳದೆ ಸಭೆಯ ನಿರ್ಣಯದಂತೆ ಜು.18ರಿಂದ ನೀರು ಹರಿಸಬೇಕು. ಇದರಿಂದ ರೈತರಿಗೆ ಸಸಿಮಡಿ ನಾಟಿ, ಬಿತ್ತನೆಗೆ ಸಹಕಾರಿಯಾಗಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಲ್‌ಎಲ್ ಕಾಲುವೆಯ ಕಂಪ್ಲಿ ತಾಲೂಕಿನ ರಾಮಸಾಗರದಲ್ಲಿ ಮಾತ್ರ ಕಾಮಗಾರಿ ನಡೆಯುತ್ತಿದೆ. ಆದರೆ, ಎಚ್‌ಎಲ್‌ಸಿಯಲ್ಲಿ ಯಾವುದೇ ಕಾಮಗಾರಿಗಳಿಲ್ಲ. ಎಚ್‌ಎಲ್‌ಸಿಗೆ ನೀರು ಹರಿಸಬಹುದಾಗಿದ್ದು, ತಡೆ ನೀಡಬಾರದು. ಆಂಧ್ರದ ಚಿಂತಾಗುಂಟಾ ಗ್ರಾಮದ ಬಳಿ ಕಾಮಗಾರಿ ನಡೆಯುತ್ತಿರುವುದರಿಂದ ಆಂಧ್ರದ ಅಧಿಕಾರಿಗಳು ಜು.22ರ ಬಳಿಕ ನೀರು ಹರಿಸುವಂತೆ ಕೋರಿದ್ದಾರೆ. ಆದರೆ, ನಮಗೆ ಸಭೆಯ ನಿರ್ಣಯದಂತೆ ಆಂಧ್ರದ ಗಡಿ ಭಾಗದ 131 ಕಿಮೀವರೆಗೆ ನೀರು ಹರಿಸಿ, ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ರಂಜಾನ್ ಸಾಬ್, ವೀರೇಶ್‌ಗೌಡ, ವೀರಭದ್ರರಾವ್, ಭೀಮಾನಗೌಡ, ಶ್ರೀಧರ್, ಗೋವಿಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts