More

    ಕ್ಷಯ ನಿರ್ಮೂಲನೆಗೆ ಸಹಕಾರ ಅಗತ್ಯ- ಡಿಎಚ್‌ಒ ಡಾ.ಜನಾರ್ದನ್ ಅಭಿಮತ

    ಬಳ್ಳಾರಿ: ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಒಂದು ಲಕ್ಷ ಜನಸಂಖ್ಯೆಗೆ ಅನುಗುಣವಾಗಿ 192 ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ದನ್ ಹೇಳಿದರು.

    ನಗರದ ಡಾ.ರಾಜ್‌ಕುಮಾರ್ ರಸ್ತೆಯ ಜಿಲ್ಲಾಸ್ಪತ್ರೆಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2025ಕ್ಕೆ ಭಾರತ ದೇಶವನ್ನು ಕ್ಷಯ ಮುಕ್ತ ಮಾಡಲು ಪಣತೊಟ್ಟಿರುವುದರಿಂದ ದೇಶದ ಎಲ್ಲ ನಾಗರಿಕರು ಕೈಜೋಡಿಸಬೇಕು. ಟಿ.ಬಿ.ಯನ್ನು ಸೋಲಿಸಿ ದೇಶವನ್ನು ಗೆಲ್ಲಿಸಬೇಕು ಎಂದರು.

    ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದೆ. ಸಂಜೆ ವೇಳೆ ಜ್ವರ ಬರುವುದು, ರಾತ್ರಿ ವೇಳೆ ಬೆವರುವುದು. ಎದೆ ನೋವು ಕೆಲವೊಮ್ಮೆ ಕಫದ ಜತೆಗೆ ರಕ್ತ ಬೀಳುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚಾಗದೆ ಇರುವುದು, ಚಿಕಿತ್ಸೆಯಿಂದ ನಿಯಂತ್ರಣಕ್ಕೆ ಬಾರದ ಅತಿಸಾರ ಭೇದಿ, ಕುತ್ತಿಗೆ ಭಾಗದಲ್ಲಿ ಗಡ್ಡೆ ಮೊದಲಾವು ಕ್ಷಯದ ಲಕ್ಷಣಗಳು. ಇವುಗಳು ಕಂಡು ಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ವಿ. ಮಾತನಾಡಿ, ಪ್ರತಿ ಮಾಸಿಕ ಸಭೆಯಲ್ಲಿ ಕ್ಷಯರೋಗಿಗಳ ಪತ್ತೆ, ಚಿಕಿತ್ಸೆ ಹಾಗೂ ಮರಣ ಹೊಂದಿರುವ ಶೇಕಡವಾರು ಕಡಿಮೆಗೊಳಿಸಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮಾರ್ಗದರ್ಶನ ನೀಡುತ್ತಿರುವುದರಿಂದ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಸಿಕೊಂಡು ಹೋಗಲು ಸಹಕಾರಿಯಾಗಿದೆ ಎಂದರು.

    ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಪಂಪಾಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಸಂಖ್ಯೆ ಹೆಚ್ಚಾಗಿದ್ದು, ಕ್ಷಯರೋಗಕ್ಕೆ ತುತ್ತಾಗುವ ದುರ್ಬಲ ವರ್ಗದ ಜನರೆಂದು ಕೇಂದ್ರ ಕ್ಷಯ ವಿಭಾಗದಿಂದ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆಯಡಿ ಅಳವಡಿಸಲಾಗಿದೆ. ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಯಾವುದಾದರೂ ಸಂಘ-ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠ್ಠಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಾಕುಮಾರಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ವೀರೇಶ್ ಎಚ್. ಇತರರು ಇದ್ದರು.

    ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜಿಲ್ಲಾಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಚಾಲನೆ ನೀಡಿದರು. ಜಿಲ್ಲಾ ಆಸ್ಪತ್ರೆ ಅವರಣದಿಂದ ಆರಂಭವಾದ ಜಾಥಾ ಡಿಸಿ ಕಚೇರಿ ಆವರಣದ ತನಕ ಬಂದು ಮತ್ತೆ ಜಿಲ್ಲಾ ಆಸ್ಪತ್ರೆಯವರೆಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts