More

    ಸೀಲ್ ಡೌನ್ ಚರ್ಚೆ ಆಗಿಲ್ಲ; ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ

    ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ವಿಶೇಷ ನಿಗಾ

    ಬಳ್ಳಾರಿ: ರಾಜ್ಯದಲ್ಲಿ ಸೀಲ್ ಡೌನ್ ಜಾರಿ ಬಗ್ಗೆ ಇದುವರೆಗೆ ಯಾವುದೇ ಚರ್ಚೆಯಾಗಿಲ್ಲ, ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪ ಆಗಿಲ್ಲ. ಬೆಂಗಳೂರಿನಲ್ಲಿ ಜಾರಿ ಬಗ್ಗೆ ಮಾಹಿತಿ ಇಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

    ನಗರದಲ್ಲಿ ಶುಕ್ರವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಜತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಮೈಸೂರು ಜಿಲ್ಲೆಯಲ್ಲಿ 37 ಕರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸಂಬಂಧಿಸಿದಂತೆ 26 ಪ್ರಕರಣಗಳಿವೆ. ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಚೀನಾದಿಂದ ಸೆಮಿ ಲಿಕ್ವಿಡ್ ಕಂಟೇನರ್ ಬಂದಿತ್ತು. ಇದರಲ್ಲಿ ವೈರಸ್ ಇತ್ತು ಎಂದು ಹೇಳಲಾಗುತ್ತಿದೆ. ಈಗದನ್ನು ಪರೀಕ್ಷೆಗೆಂದು ಪುಣೆಗೆ ಕಳುಹಿಸಲಾಗಿದ್ದು, ವರದಿ ಬಂದಿಲ್ಲ. ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಜಪಾನ್‌ದಿಂದ ಮೂವರು ಹಾಗೂ ದೆಹಲಿಯಿಂದ ಒಬ್ಬ ತಂತ್ರಜ್ಞರು ಬಂದಿದ್ದರು. ಈ ಬಗ್ಗೆ ಜಪಾನ್ ದೇಶಕ್ಕೆ ಮಾಹಿತಿ ನೀಡಲಾಗಿದೆ.

    ರಾಜ್ಯದಲ್ಲಿ 10 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ. 16,334 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಗಮನ ಇರಿಸಲಾಗಿದೆ. ದೆಹಲಿಯಿಂದ ಬಂದಿರುವವರ ಪೈಕಿ 40 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ 1804 ಪ್ರಥಮ ಹಾಗೂ 5533 ಜನ ದ್ವಿತೀಯ ಹಂತದ ಸಂಪರ್ಕಿತರ ಮೇಲೆ ನಿಗಾ ವಹಿಸಲಾಗಿದೆ ಎಂದರು.

    ಏ.13ರೊಳಗೆ ರಾಜ್ಯಕ್ಕೆ ಒಂದು ಲಕ್ಷ ರ‌್ಯಾಪಿಡ್ ಟೆಸ್ಟ್ ಕಿಟ್‌ಗಳು ಬರಲಿವೆ. ಉತ್ತರ ಕರ್ನಾಟಕದ 13 ಜಿಲ್ಲೆಗಳ ಪೈಕಿ ಕಲಬುರಗಿ ಹಾಗೂ ಬಳ್ಳಾರಿಯಲ್ಲಿ ಮಾತ್ರ ಕರೊನಾ ಪರೀಕ್ಷಾ ಪ್ರಯೋಗಾಲಯ ಇವೆ. ಈ ಭಾಗಕ್ಕೆ ಇನ್ನೂ ಎರಡು ಪ್ರಯೋಗಾಲಯಗಳನ್ನು ಮಂಜೂರು ಮಾಡಬೇಕೆಂದು ಕೇಂದ್ರಕ್ಕೆ ಕೋರಲಾಗಿದೆ.

    10 ಲಕ್ಷ ಪಿಪಿಇ ಕಿಟ್, 18.33 ಲಕ್ಷ ಎನ್-95 ಮಾಸ್ಕ್, 54 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ, ವೆಂಟಿಲೇಟರ್‌ಗಳ ಖರೀದಿಗೆ ಆದೇಶ ನೀಡಲಾಗಿದೆ. ಈ ವಸ್ತುಗಳ ಖರೀದಿಯಲ್ಲಿ ಸಚಿವರ ಯಾವುದೇ ಪಾತ್ರ ಇಲ್ಲ. ಐಎಎಸ್ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಐಸಿಎಂಆರ್ ಮಾರ್ಗಸೂಚಿಯಂತೆ ಖರೀದಿ ಪ್ರಕ್ರಿಯೆ ನಡೆದಿದೆ. ನಾನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts