More

    ಸಂತ ಸೇವಾಲಾಲ್ ಮಹಾರಾಜ್‌ಕೀ ಜೈ..

    ಸಂತ ಸೇವಾಲಾಲ್ ಜಯಂತಿ ಆಚರಣೆ ಭಾವಚಿತ್ರಕ್ಕೆ ಹೂಗಳ ಸಮರ್ಪಣೆ

    ಬಳ್ಳಾರಿ: ಸಂತ ಸೇವಾಲಾಲ್ ಅವರು ಧನಾತ್ಮಕ ಚಿಂತನೆಗಳಿಂದ ಮೌಢ್ಯಗಳ ಬಗ್ಗೆ ಅರಿವು ಮೂಡಿಸಿದವರು. ಸಮಾಜ ಸುಧಾರಕರಾಗಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡುತ್ತಿದರು ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತಾ ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ದಂಪತಿ ಮಗನಾಗಿ ಜನ್ಮತಾಳಿದ ಸಂತ ಸೇವಾಲಾಲರು ಅನೇಕ ಪವಾಡಗಳನ್ನು ನಡೆಸಿದ್ದಾರೆ. ಒಬ್ಬ ಗೋಪಾಲಕನಾಗಿ ಜೀವನದ ಅನುಭವವನ್ನು ತತ್ವದ ಮೂಲಕ ಜನರಲ್ಲಿನ ಅಜ್ಞಾನ ದೂರ ಮಾಡಿದವರು. ಅಷ್ಟೇ ಅಲ್ಲದೆ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿದೀಪವಾಗಬೇಕು ಎಂದು ಸಾರಿದವರು ಎಂದರು.

    ಸೇವಾಲಾಲರು ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವೆ ಮೂಡಲು ಪ್ರೇರೇಪಿಸಿದರು. ಸಮಾಜದ ಜನರ ಕಷ್ಟಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು. ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ಹೆಮ್ಮೆಯ ವಿಚಾರ. ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.

    ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ದಾಖಲಾತಿ ವಿಭಾಗದ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಗುರುನಾಥ ಬಿ.ಚವ್ಹಾಣ್ ಮಾತನಾಡಿ, ಸೇವಾಲಾಲರು ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು. ಅಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಅದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ, ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಂತೆ ತಿಳಿಸಿದವರು ಎಂದರು.

    ಪಿಎಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ.ವಸಂತ್ ಕುಮಾರ್ ತಂಡ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಪಾಲಿಕೆ ಉಪ ಮೇಯರ್ ಬಿ.ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ವೇದಾವತಿ.ಕೆ., ತಾರಾನಾಥ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ರವಿ ಬಿ.ಚವ್ಹಾಣ್ ಇತರರಿದ್ದರು.

    ಸಂಭ್ರಮದ ಮೆರವಣಿಗೆ
    ಬಳ್ಳಾರಿಯಲ್ಲಿ ಸಂತ ಸೇವಾಲಾಲ್ ಜಯಂತಿ ನಿಮಿತ್ತ ಸಂಭ್ರಮ, ಸಡಗರದಿಂದ ಮೆರವಣಿಗೆ ನಡೆಸಲಾಯಿತು. ನಗರದ ಡಾ.ರಾಜಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತಾ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳು, ಲಂಬಾಣಿ ಕಸೂತಿಯ ವೇಷ ಧರಿಸಿದ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು. ಮೆರವಣಿಗೆಯು ಮುನ್ಸಿಪಲ್ ಮೈದಾನದಿಂದ ಆರಂಭವಾಗಿ ಇಂದಿರಾ ವೃತ್ತ, ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ ಪೊಲೀಸ್ ಠಾಣೆ, ತೇರು ಬೀದಿ, ಎಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವಾಲ್ಮೀಕಿ ಭವನ ತಲುಪಿ ಸಂಪನ್ನಗೊಂಡಿತು.

    ಸಂತ ಸೇವಾಲಾಲ್ ಮಹಾರಾಜ್‌ಕೀ ಜೈ..
    ಬಳ್ಳಾರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಗುರುವಾರ ಬೃಹತ್ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts