More

    ಬಳ್ಳಾರಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರ ಸಾಮರಸ್ಯ ಪಾದಯಾತ್ರೆ

    ಬಳ್ಳಾರಿ: ಶ್ರೀರಾಮ ಮಂದಿರ ನಿರ್ಮಾಣದೊಂದಿಗೆ ನಮ್ಮ ಸಂಸ್ಕೃತಿಯ ಪುನರುತ್ಥಾನ ಆಗಬೇಕಿದೆ. ಮನೆಗಳಲ್ಲಿ ನಿತ್ಯ ರಾಮನಾಮ ಮಂತ್ರ ಜಪಿಸಬೇಕೆಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಹರಿಶ್ಚಂದ್ರನಗರದಲ್ಲಿ ಶನಿವಾರ ಸ್ಥಳೀಯ ಬಿಜೆಪಿ ನಾಯಕರು ಆಯೋಜಿಸಿದ್ದ ಸಾಮರಸ್ಯ ಪಾದಯಾತ್ರೆ ಹಾಗೂ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೂತನ ರಾಮಮಂದಿರವು ಶತಮಾನಗಳ ಕಾಲ ಹಿಂದು ಧರ್ಮದ ಸಂಕೇತವಾಗಬೇಕು. ಅದಕ್ಕೆ ಪೂರಕವಾಗಿ ಸಂಸ್ಕೃತಿ, ಸಂತತಿ ಬೆಳೆಯಬೇಕು. ಈ ಮೂಲಕ ರಾಮ ಮಂದಿರ ನಿರ್ಮಾಣ ಸಾರ್ಥಕತೆ ಕಾಣಬೇಕೆಂದು ತಿಳಿಸಿದರು.

    ಮಂದಿರ ನಿರ್ಮಿಸಬೇಕೆಂದು ತೀರ್ಮಾನವಾದಾಗ ಅನೇಕ ಕಂಪನಿಯವರು, ಶ್ರೀಮಂತರು ಹಣ ನೀಡಲು ಮುಂದಾದರು. ಯಾರೋ ಒಬ್ಬರು ದೇವಸ್ಥಾನ ನಿರ್ಮಿಸಿದರೆ ಅದು ಶ್ರೀರಾಮ ಮಂದಿರ ಆಗುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಾವಿಸಿತು. ಶ್ರೀರಾಮ ಎಲ್ಲರಿಗೂ ಸೇರಿದಂತೆ ಮಂದಿರವೂ ಎಲ್ಲರಿಗೂ ಸೇರಬೇಕು. ಈ ಹಿನ್ನೆಲೆಯಲ್ಲಿ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಂದಿರ ನಿರ್ಮಾಣಕ್ಕೆ ಜನರ ಭಕ್ತಿ ಮುಖ್ಯವಾಗಿದೆ. ಭಕ್ತಿಯ ಸಂಕೇತವಾಗಿ ಮಂದಿರ ನಿರ್ಮಾಣವಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಕೈಲಾದಷ್ಟು ಹಣದ ಸೇವೆ ಮಾಡಬೇಕು. ಶ್ರೀರಾಮನ ಅನುಗ್ರಹ ಇದ್ದರೆ ಎಲ್ಲರ ಆಪತ್ತುಗಳು ದೂರವಾಗಲಿವೆ ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

    ಶಾಸಕ ಜಿ.ಸೋಮಶೇಖರ ರೆಡ್ಡಿ, ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಎಸ್.ಮಲ್ಲನಗೌಡ ಹಾಗೂ ಇತರರು ಇದ್ದರು.

    ಸಂಭ್ರಮದ ಸ್ವಾಗತ
    ಹರಿಶ್ಚಂದ್ರ ನಗರದಲ್ಲಿ ದಲಿತರು ಸೇರಿದಂತೆ ವಿವಿಧ ಸಮುದಾಯಗಳ ಜನ ವಾಸವಾಗಿದ್ದಾರೆ. ಶನಿವಾರ ಇಡೀ ಪ್ರದೇಶದಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ಸಂಪೂರ್ಣ ಕೇಸರಿಮಯವಾಗಿದ್ದ ಬಡಾವಣೆಯಲ್ಲಿ ಮನೆಗಳ ಮುಂದೆ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿರಿಗೆ ಕುಂಭ ಸ್ವಾಗತ ನೀಡಲಾಯಿತು. ಉಮೇಶ, ರಾಮು, ಎರ‌್ರಿಸ್ವಾಮಿ, ನಾಗರಾಜ ಹಾಗೂ ಹೊನ್ನೂರಪ್ಪ ದಂಪತಿ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts