More

    ನರೇಗಾ ಅನುಷ್ಠಾನದಲ್ಲಿ ದೇಶಕ್ಕೆ ರಾಜ್ಯವೇ ಮಾದರಿ: ಬಳ್ಳಾರಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

    ಬಳ್ಳಾರಿ: ನರೇಗಾದಡಿಯಲ್ಲಿ ಕಳೆದ ವರ್ಷ 15 ಕೋಟಿ ಮಾನವ ದಿನ ಸೃಜಿಸುವ ಮೂಲಕ ಪರಿಣಾಮಕಾರಿ ಅನುಷ್ಠಾನದಲ್ಲಿ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸಕ್ತ ವರ್ಷ 13 ಕೋಟಿ ಮಾನವ ದಿನ ಗುರಿಯಿದ್ದು, ಈಗಾಗಲೇ ಒಂಬತ್ತು ಕೋಟಿ ದಿನಗಳ ಸೃಜನೆಯಾಗಿದೆ. ನನ್ನ ಮನವಿ ಪರಿಗಣಿಸಿರುವ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ ಸಿಂಗ್, ಯೋಜನೆಯಡಿ ಬಾಕಿಯಿದ್ದ 959 ಕೋಟಿ ರೂ. ಜತೆಗೆ ಹೆಚ್ಚುವರಿಯಾಗಿ 117 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

    ರಾಜ್ಯದಲ್ಲಿ 28 ಸಾವಿರ ಕೆರೆಗಳನ್ನು ಒಂದೂವರೆ ವರ್ಷದಲ್ಲಿ ಜೀರ್ಣೊದ್ಧಾರ ಮಾಡುವ ಗುರಿಯಿದೆ. ಜಿಪಂ ವ್ಯಾಪ್ತಿ ಕೆರೆಗಳನ್ನು ಗ್ರಾಪಂಗೆ ವಹಿಸಲಾಗಿದೆ. ಗ್ರಾಪಂ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಿ ಕೆರೆಗಳ ಜೀರ್ಣೋದ್ಧಾರ ಕೈಗೊಳ್ಳಬೇಕು. ಅವ್ಯವಹಾರ ತಡೆಯುವ ಉದ್ದೇಶದಿಂದ ನರೇಗಾ ಕೂಲಿ ಹಣವನ್ನು ಕಾರ್ಮಿಕರ ಖಾತೆಗಳಿಗೆ 15 ದಿನದಲ್ಲಿ ಜಮಾ ಮಾಡಲಾಗುತ್ತಿದೆ ಎಂದರು.

    ಜಲಜೀವನ್ ಮಿಷನ್ ಯೋಜನೆಯಡಿ 2024ರೊಳಗೆ ‘ಮನೆಮನೆಗೆ ಗಂಗೆ’ ಧ್ಯೇಯದೊಂದಿಗೆ ಹಳ್ಳಿಗಳಲ್ಲಿ ಪ್ರತಿ ಮನೆಗೆ ಕುಡಿವ ನೀರು ದೊರೆಯಲಿದೆ. ಹೆಚ್ಚಿನ ಜನ ನರೇಗಾದಡಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ‘ಪ್ರಧಾನ ಮಂತ್ರಿ ಕ್ಯಾಚ್ ರೈನ್’ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ ಎಂದರು.

    ಜಾತಿ ಜನಗಣತಿ ವರದಿ ಕೊಲೆ ಮಾಡಿದ ಸಿದ್ದು, ಡಿಕೆಶಿ: ಜಾತಿ ಜನಗಣತಿ ವರದಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೊಲೆ ಮಾಡಿದರು. ಅದನ್ನು ಡಿ.ಕೆ.ಶಿವಕುಕಮಾರ್ ಅಂತ್ಯಕ್ರಿಯೆ ಮಾಡಿದರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

    ನಾನು ಸತ್ಯ ಹೇಳಿದರೆ ಬಹಳಷ್ಟು ಜನರಿಗೆ ಸಿಟ್ಟು ಬರಬಹುದು. ಅಧಿಕಾರಕ್ಕಾಗಿ ಹಿಂದುಳಿದ, ದಲಿತ ಎಂತೆಲ್ಲ ಹೇಳುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ನಾನು ವಿಪಕ್ಷದ ನಾಯಕನಿದ್ದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ಎಚ್.ಡಿ.ರೇವಣ್ಣ ಮತ್ತು ನಾನು ಜಾತಿಗಣತಿ ವರದಿ ಕೇಳಿದ್ದಕ್ಕೆ ಮುಂದಿನ ಚುನಾವಣೆಯೊಳಗೆ ವರದಿ ನೀಡುವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಮುಂದೆ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಾಡಿಲ್ಲವೆಂದು ಸಿದ್ದರಾಮಯ್ಯರೇ ಆರೋಪಿಸಿದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.

    ಮಾಜಿ ಸಚಿವ ಎಚ್.ಕೆ.ಪಾಟೀಲರು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಣಕ್ಕಾಗಿ ಬೇನಾಮಿ ಅಕೌಂಟ್ ಇಟ್ಟಿದ್ದರು ಎನ್ನುವ ಆರೋಪವಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಎರಡು ತಿಂಗಳಲ್ಲಿ ವರದಿ ಬರಲಿದೆ. ಬಳಿಕ ಕ್ರಮಕೈಗೊಳ್ಳಲಾಗುವುದು.
    | ಕೆ.ಎಸ್.ಈಶ್ವರಪ್ಪ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts