More

    ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ವತಿಯಿಂದ ಪ್ರತಿಭಟನೆ

    ಬಳ್ಳಾರಿ: ನಗರಕ್ಕೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಹಾಗೂ ಮಹಾನಗರಪಾಲಿಕೆ ನಿರ್ಲಕ್ಷ್ಯತೆ ಖಂಡಿಸಿ ನಗರದ ಮಹಾನಗರ ಪಾಲಿಕೆ ಮುಂಭಾಗ ಎಸ್‌ಯುಸಿಐ ಕಮ್ಯುನಿಸ್ಟ್ ವತಿಯಿಂದ ಬುಧವಾರ ಬೃಹತ್ ಪ್ರತಿಭಟನಾ ಧರಣಿ ನಡೆಯಿತು.

    ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿ, ನಗರವು ಭೌಗೋಳಿಕವಾಗಿ ನಾಲ್ಕೂ ದಿಕ್ಕಿನಲ್ಲಿ ಗಣನೀಯವಾಗಿ ಬೆಳೆದಿದ್ದು, ಜನ ಸಂಖ್ಯೆ, ವಾಹನ ದಟ್ಟನೆ ಸಾಕಷು ಹೆಚ್ಚಿದೆ. ಆದರೆ, ಇದಕ್ಕನುಗುಣವಾಗಿ ಮೂಲ ಸೌಕರ್ಯಗಳು ಸೃಷ್ಟಿಯಾಗದೆ, ನಗರದ ನಾಗರಿಕರು ದಿನಂಪ್ರತಿ ಅನೇಕ ಸಮಸ್ಯೆ ಎದುರಿಸಬೇಕಾಗಿದೆ. ಸೂಕ್ತವಾದ ರಸ್ತೆಗಳು ಹಾಗೂ ರಿಂಗ್ ರೋಡ್ (ವರ್ತುಲ ರಸ್ತೆ) ಕೊರತೆಯಿಂದಾಗಿ, ನಗರದಲ್ಲಿ ಭಾರಿ ವಾಹನಗಳ ಸಂಖ್ಯೆ ಅಧಿಕಗೊಂಡು ವಾಯು ಮಾಲಿನ್ಯ, ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ಸತ್ಯನಾರಾಯಣಪೇಟೆಯ ಕೆಳಸೇತುವೆ ಕೊಳಚೆನೀರಿನ ಸೇತುವೆಯಾಗಿದೆ. ಮಳೆ ಬಂದರೆ ಈಜುಕೊಳವಾಗುತ್ತದೆ. ಸುಧಾಕ್ರಾಸ್ ಮೇಲ್ಸೇತುವೆ (ಓವರ್ ಬ್ರಿಡ್ಜ್)ಗಾಗಿ ಹತ್ತಾರು ವರ್ಷಗಳಿಂದ ಜನ ಕಾಯುತ್ತಲೇ ಇದ್ದರೂ, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    24ಗಿ7 ನೀರಿನ ಯೋಜನೆ ಅಡಿಯಲ್ಲಿ ನೂರಾರು ಕೋಟಿ ಖರ್ಚು ಮಾಡಿದ್ದರೂ, ಇದೊಂದು ನಿಷ್ಫಲವಾದ ಯೋಜನೆಯಾಗಿದ್ದು, ವಾರಕ್ಕೊಮ್ಮೆ ನೀರು ಬಂದರೆ ಬಳ್ಳಾರಿ ಜನರ ಅದೃಷ್ಟ. ಅಲ್ಲದೆ ಅನೇಕ ಕಡೆ ನಲ್ಲಿ ನೀರಿನಲ್ಲಿ ಕೊಳಚೆ ನೀರು ಮಿಶ್ರಿತವಾಗಿ ಬರುತ್ತದೆ. ವಿವಿಧ ಬಡವಾಣೆಗಳಲ್ಲಿ ಹೊರಚರಂಡಿ, ಒಳಚರಂಡಿ ನಿಯಮಿತವಾಗಿ ಸ್ವಚ್ಛಗೊಳ್ಳದೆ, ದುರಸ್ತಿಗೊಳ್ಳದೆಯಿರುವುದರಿಂದ ಅವು ದುರ್ನಾತ ಬೀರುತ್ತವೆ ಹಾಗೂ ಚರಂಡಿ ನೀರು ರಸ್ತೆಗಳಿಗೆ ಹರಿಯುವಂತಾಗುತ್ತದೆ. ಸ್ವಚ್ಛತೆಯ ಅಭಾವದಿಂದ ಮಲೇರಿಯಾ, ಡೆಂಘೆ, ಇನ್ನಿತರ ರೋಗಗಳಿಗೆ ನಗರವು ತಾಣವಾಗಿದೆ. ಇದರ ಜತೆಗೆ ನಗರಕ್ಕೆ ಅಗತ್ಯವಿರುವ ಪೌರ ಕಾರ್ಮಿಕರು, ಸಿಬ್ಬಂದಿ ಇಲ್ಲದೆ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪಾಲಿಕೆ ಎಇ ಖಾಜಮೋಹಿನುದ್ದೀನ್‌ಗೆ ಮನವಿ ಸಲ್ಲಿಸಿದರು. ಮುಖಂಡರಾದ ಮುರ್ತುಜಾ ಸಾಬ್, ಎ.ದೇವದಾಸ್, ಎ.ಶಾಂತಾ, ಗೋವಿಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts