More

    ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ. ಅರವಿಂದ ಪಟೇಲ್ ಸರ್ವಾಧ್ಯಕ್ಷ

    ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ 22ನೇ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಫೆ.28 ಹಾಗೂ ಮಾ.1ರಂದು ದಿನಾಂಕ ನಿಗದಿ ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ತಿಳಿಸಿದ್ದಾರೆ. ಸುದ್ದಿಗಾರರಿಗೆ ಬುಧವಾರ ಮಾಹಿತಿ ನಿಡಿದರು. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಯುತ್ತಿದೆ. ಸರ್ವಾಧ್ಯಕ್ಷರಾಗಿ ಡಾ.ಅರವಿಂದ ಪಟೇಲ್ ಆಯ್ಕೆ ಮಾಡಲಾಗಿದ್ದು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಸಮ್ಮೇಳನಾಧ್ಯಕ್ಷರ ಪರಿಚಯ
    ಖ್ಯಾತ ವೈದ್ಯ ಡಾ.ಅರವಿಂದ್ ಪಟೇಲ್ ಅವರು ಹರಪನಹಳ್ಳಿ ತಾಲೂಕಿನ ಬಸವರಾಜ ಮತ್ತು ಜಯಮ್ಮ ದಂಪತಿ ಪುತ್ರರಾಗಿ 1959ರ ಜುಲೈ 21ರಂದು ಕ್ಯಾರಕಟ್ಟಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳ್ಳಾರಿಯ ಶಾಂತಿ ಶಿಶುವಿಹಾರದಲ್ಲಿ ಮತ್ತು ಮದ್ದಿಕೇರಿ ಭೀಮಯ್ಯ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ ಪಡೆದು, ಕೂಡ್ಲಿಗಿ ಮತ್ತು ಬಳ್ಳಾರಿಯ ಶೆಟ್ರು ಗುರುಶಾಂತಪ್ಪ ಸಂಯುಕ್ತ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಎಂಬಿಬಿಎಸ್ ಮತ್ತು ಎಂಎಸ್ ಪದವಿಯನ್ನು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಡೆದಿದ್ದಾರೆ ಎಂದು ನಿಷ್ಠಿ ರುದ್ರಪ್ಪ ಮಾಹಿತಿ ನೀಡಿದ್ದಾರೆ.

    ಕುರುಗೋಡಿನ ಕುಷ್ಠರೋಗ ನಿಯಂತ್ರಣ ಕೇಂದ್ರದಲ್ಲಿ 1986 ರಿಂದ 1990 ರವರೆಗೆ ಮತ್ತು 1990 ರಿಂದ 2003 ರವರೆಗೆ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ನಂತರ ಆದರ್ಶ ನರ್ಸಿಂಗ್ ಹೋಮ್ ಸ್ಥಾಪಿಸಿ ತಮ್ಮ ವೈದ್ಯಕೀಯ ವೃತ್ತಿಯನ್ನು ಡಾ.ಅರವಿಂದ್ ಪಟೇಲ್ ಮುಂದುವರಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆಗಳ ಮುಖಾಂತರ ಜನರಲ್ಲಿ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಲೇಖನ ಮತ್ತು ಕವನಗಳ ‘ಸಂಗ್ರಹ ಚೇತನ’ ಕೃತಿ ಸಂಪಾದನೆ ಮಾಡಿದ್ದಾರೆ. ಬಳ್ಳಾರಿಯ ಪ್ರಜಾಜಾಗೃತಿ ಸಂಘದ ವತಿಯಿಂದ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಜಿಲ್ಲೆಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷರಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅರಿವು ಸಂಸ್ಥೆಯ ಸಂಸ್ಥಾಪನಾ ಸದಸ್ಯರಾಗಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ವಿವಿಧ ಕಲೆಗಳ ತರಬೇತಿ ಹಾಗು ಮಕ್ಕಳಿಂದ ನಾಟಕಗಳ ಪ್ರದರ್ಶನವನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ವಲಯಕ್ಕೆ ಕೊಡುಗೆಗಳನ್ನು ನೀಡಿದ್ದಾರೆ ಎಂದು ನಿಷ್ಠಿ ರುದ್ರಪ್ಪ ವಿವರಿಸಿದ್ದಾರೆ.

    ಕನ್ನಡ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ‘ಕನಸಿನಂಗಳ’, ‘ಬೆಳಕಿನತ್ತ’, ‘ಹಾಲು ಚೆಲ್ಲಿದ ಹೊಲ’ ಎನ್ನುವ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಂಧ್ಯಾ ಸಾಹಿತ್ಯ ವೇದಿಕೆಯಿಂದ ನಡೆದ ಎರಡು ದಿನಗಳ ಮಕ್ಕಳ ಸಾಹಿತ್ಯ ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾಗಿದ್ದಾರೆ. ವೈದ್ಯ ವೃತ್ತಿಯ ಜತೆಗೆ ಕೃಷಿ ಪರಿಸರ ಆರೋಗ್ಯದ ಕಳಕಳಿಯಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗಂ 2022 ವಿಶ್ವಕವಿ ಸಮ್ಮೇಳನದ ಸಂಘಟನಾ ಅಧ್ಯಕ್ಷರಾಗಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಎಂಬಿಎ ಕಾಲೇಜಿನ ಅಧ್ಯಕ್ಷರಾಗಿ ಡಾ.ಅರವಿಂದ್ ಪಟೇಲ್ ಸೇವೆ ಸಲ್ಲಿಸಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts