More

    ಬೋರ್‌ವೆಲ್ ಗೋಲ್ಮಾಲ್, 1630 ಕೊಳವೆ ಬಾವಿಗಳಿಗೆ ಪೈಪ್ ಸಂಪರ್ಕವೇ ಇಲ್ಲ

    ಶ್ರೀಕಾಂತ ಅಕ್ಕಿ ಬಳ್ಳಾರಿ

    ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಯಿಸಿಕೊಂಡ ರೈತರಿಗೆ ಕೈಯಲ್ಲಿ ಅನ್ನವಿದ್ದರೂ ಉಣ್ಣುವ ಭಾಗ್ಯವಿಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

    ಭೂಮಿಯಿಂದ ಗಂಗೆ ಚಿಮ್ಮಿದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಹಲವು ವರ್ಷದಿಂದ ನೀರು ಮೇಲೆಯೇ ಬಂದಿಲ್ಲ. ಅವಳಿ ಜಿಲ್ಲಾದ್ಯಂತ ಹಲವು ಲಾನುಭವಿಗಳು ಚಾತಕ ಪಕ್ಷಿಯಂತೆ ಮೋಟಾರ್, ಪೈಪ್, ಸ್ಟಾಟರ್ ಡಬ್ಬಿ, ಕೇಬಲ್ ಸೇರಿ ನಾನಾ ಸಾಮಗ್ರಿಗಳು ಇಂದು, ನಾಳೆ ಬರುತ್ತವೆಂದು ಕಾದು ಕುಳಿತಿದ್ದು, ನಿರಾಸೆ ಮಾತ್ರ ತಪ್ಪಿಲ್ಲ. 2015 ರಿಂದ ಇಲ್ಲಿಯವರೆಗೆ 6 ಸಾವಿರ ಬೋರ್‌ವೆಲ್ ಕೊರೆಸಲಾಗಿದ್ದು, ಅವುಗಳಲ್ಲಿ 1630 ಕೊಳವೆಬಾವಿಗಳಿಗೆ ಮೋಟಾರ್, ಪಂಪ್, ಪೈಪಲೈನ್ ಸಂಪರ್ಕವೇ ಕಲ್ಪಿಸಿಲ್ಲ. 474 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಒಟ್ಟು 2 ಸಾವಿರ ಬೋರ್‌ವೆಲ್‌ಗಳಿಂದ ಈವರೆಗೆ ಒಂದು ಹನಿ ನೀರು ಕೂಡ ಮೇಲೆತ್ತಿಲ್ಲ.

    ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮದಡಿ ಈ ಸಮಸ್ಯೆಗಳು ತಾಂಡವವಾಡುತ್ತಿದ್ದು, ಹಣ ನೀಡಿದರೆ ಮಾತ್ರ ಅಧಿಕಾರಿಗಳು ಹಾಗೂ ಏಜೆಂಟರರಿಂದ ಉಪಕರಣಗಳು ಬರುತ್ತವೆ. ಇಲ್ಲದಿದ್ದರೆ ನಾನಾ ನೆಪವೊಡ್ಡಿ ಸಾಮಗ್ರಿಯನ್ನೇ ನೀಡುತ್ತಿಲ್ಲ. ಹಣವಿರುವ ಕೆಲ ಲಾನುಭವಿಗಳು ಪ್ರಭಾವ ಬೀರಿ, ಇಲಾಖೆಯಿಂದ ಉಪಕರಣ ತರಿಸಿಕೊಳ್ಳುತ್ತಾರೆ. ಆದರೆ, ಬಡ ಲಾನುಭವಿಗಳು ಮಾತ್ರ ಸಂಕಷ್ಟದಲ್ಲಿಯೇ ದಿನದೂಡುತ್ತಿದ್ದಾರೆ.

    ಸದನ ಸಮಿತಿ ಎಚ್ಚರಿಸಿದರೂ ಎಚ್ಚೆತ್ತಿಲ್ಲ
    ಅವಳಿ ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಾಗುವ ಲೋಪದೋಷ ನೋಡಿ 2021ರ ನ.12ರಂದು ಗಣಿ ಜಿಲ್ಲೆಗೆ ಭೇಟಿ ನೀಡಿದ್ದ ಕರ್ನಾಟಕ ವಿಧಾನ ಪರಿಷತ್ ಗಂಗಾಕಲ್ಯಾಣ ವಿಶೇಷ ಸದನ ಸಮಿತಿ ಬೇಸರ ವ್ಯಕ್ತಪಡಿಸಿತ್ತು. ಪರಿಶೀಲನೆ ವೇಳೆ 420 ಅಡಿ ಬೋರ್‌ವೆಲ್ ಕೊರೆಸಿದ್ದರೂ ಬಿಲ್‌ನಲ್ಲಿ 620 ಅಡಿ, 20 ಅಡಿ ಕೇಸಿಂಗ್ ಇದ್ದರೆ 120 ಕೇಸಿಂಗ್ ಅಂತ ನಮೂದಿಸಿದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಎಲ್ಲ ಅಭಿವೃದ್ಧಿ ನಿಗಮಗಳಡಿ ಕೊರೆಸಲಾದ ಬಾವಿಗಳಿಗೆ ವಿಶೇಷ ತನಿಖೆ ಮಾಡಿ ಸಮಿತಿಗೆ ವರದಿ ನೀಡುವಂತೆ ಅಂದು ಸದನ ಸಮಿತಿ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಸೂಚನೆ ನೀಡಿತ್ತು. ಆದರೆ, ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಬೋರ್‌ವೆಲ್ ಕೊರೆಸಿ, ಮೂರು ವರ್ಷ ಮೇಲಾಗಿದೆ. ನೀರು ಕೂಡ ಅಂದು 2 ಇಂಚು ಬಿದ್ದಿದೆ. ಆದರೆ, ಈವರೆಗೆ ಮೋಟಾರ್, ಕೇಬಲ್ ಕೊಡುತ್ತಿಲ್ಲ. ಗುತ್ತಿಗೆದಾರರು, ಅಧಿಕಾರಿಗಳನ್ನು ಕೇಳಿದರೆ ಇಲ್ಲದ ನೆಪ ಹೇಳುತ್ತಾರೆ. ನಮಗೆ ಏನು ಮಾಡಬೇಕು ಎಂಬುದೇ ದಿಕ್ಕು ತೋಚುತ್ತಿಲ್ಲ.
    | ಹನುಮಂತ ಹಲವಾಗಲು ಗ್ರಾಮಸ್ಥ, ಹರಪನಹಳ್ಳಿ ತಾಲೂಕು

    ಗಣಿನಾಡಿನಲ್ಲಿ ಕೊಳವೆಬಾವಿ ಕೊರೆಯಿಸುವಿಕೆಗೆ ಸಂಬಂಧಿಸಿ ಬಹುದೊಡ್ಡ ಜಾಲವಿದೆ. ಅಧಿಕಾರಿಗಳು, ಮಧ್ಯವರ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಸೇರಿದಂತೆ ಈ ಅಕ್ರಮದಲ್ಲಿ ಭಾಗಿಯಾದ ಎಲ್ಲರ ಮೇಲೆ ಕ್ರಮಕೈಗೊಳ್ಳಲಾಗುವುದು. ಅಂದಾಜು 40 ಕೋಟಿ ರೂ. ಗೋಲ್ಮಾಲ್ ನಡೆದಿದೆ.
    | ಡಾ.ವೈ.ಎ.ನಾರಾಯಣ ಸ್ವಾಮಿ, ಅಧ್ಯಕ್ಷ, ಗಂಗಾಕಲ್ಯಾಣ ವಿಶೇಷ ಸದನ ಸಮಿತಿ, ವಿಪ ಸದಸ್ಯ

    ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಿದ ಎಸ್ಟಿ ಲಾನುಭವಿಗಳಿಗೆ ಉಪಕರಣ ಪೂರೈಕೆಯಾಗಿಲ್ಲ. ಮೂರು ವರ್ಷದಿಂದ ಈ ಸಮಸ್ಯೆಯಾಗಿದೆ. ಈವರೆಗೆ ಟೆಂಡರ್ ಆಗಿರಲಿಲ್ಲ. ಇದೀಗ ಟೆಂಡರ್ ಆಗಿದ್ದು, ಕೂಡಲೇ ಲಾನುಭವಿಗಳಿಗೆ ಉಪಕರಣ ತಲುಪಿಸಲಾಗುವುದು.
    | ಜಗದೀಶ ಜಿಲ್ಲಾ ವ್ಯವಸ್ಥಾಪಕರು, ಎಸ್ಟಿ ಲಾನುಭವಿಗಳ ವಿಭಾಗ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts