More

    ಆಂಧ್ರದವರು ಗಡಿ ಪ್ರವೇಶಿಸದಂತೆ ನಿಗಾವಹಿಸಿ, ಅಧಿಕಾರಿಗಳಿಗೆ ಬಳ್ಳಾರಿ ಡಿಸಿ ಎಸ್.ಎಸ್.ನಕುಲ್ ಕಟ್ಟುನಿಟ್ಟಿನ ಸೂಚನೆ

    ಬಳ್ಳಾರಿ: ಆಂಧ್ರದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿಯ ಕೆಲವರು ಸುರಕ್ಷತೆ ನೆಪವೊಡ್ಡಿ ಜಿಲ್ಲೆಗೆ ಬಾರದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಡಿಸಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬಳ್ಳಾರಿ-29, ಸಿರಗುಪ್ಪ-27 ಮತ್ತು ಸಂಡೂರು-10 ಗ್ರಾಮಗಳು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿವೆ. ಹೀಗಾಗಿ ಯಾವುದೇ ವ್ಯಕ್ತಿ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿಗಾವಹಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಅವರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ದಿನದ 24 ಗಂಟೆ ಗಸ್ತು ವಾಹನಗಳು ಸಂಚರಿಸಿ ನಿಗಾವಹಿಸಲಿವೆ. ಯಾರಾದರೂ ಅಪರಿಚಿತರು ಕಂಡು ಬಂದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

    ಬಳ್ಳಾರಿ ತಾಲೂಕಿಗೆ ಪಂಚಾಯಿತಿ ರಾಜ್ ವಿಭಾಗದ ಎಇಇ ಪ್ರಸನ್ನ, ಸಿರಗುಪ್ಪ ತಾಲೂಕಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿಸ್ತರಣಾ ಅಧಿಕಾರಿ ಶ್ಯಾಮಪ್ಪ ಹಾಗೂ ಸಂಡೂರು ತಾಲೂಕಿಗೆ ಬಿಇಒ ಐ.ಆರ್.ಅಕ್ಕಿರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲಾಮಟ್ಟದ ನೋಡಲ್ ಅಧಿಕಾರಿಯನ್ನಾಗಿ ಬಳ್ಳಾರಿ ಗ್ರಾಮೀಣ ವಿಭಾಗದ ಡಿವೈಎಸ್ಪಿ ಅರುಣಕುಮಾರ್‌ರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

    ವಲಸಿಗರಿಗೆ ಅಗತ್ಯ ವವಸ್ಥೆ ಮಾಡಿ: ಅಂತರ್ ಜಿಲ್ಲೆ, ರಾಜ್ಯದಿಂದ ಸರ್ಕಾರಿ ಬಸ್‌ಗಳಲ್ಲಿ ಬಳ್ಳಾರಿಗೆ ಬರುವ ವಲಸಿಗರು ಮತ್ತು ಕಾರ್ಮಿಕರಿಗೆ ಬಳ್ಳಾರಿ ಬಸ್ ನಿಲ್ದಾಣ ಮತ್ತು ಕಾನಹೊಸಳ್ಳಿ ಚೆಕ್‌ಪೋಸ್ಟ್‌ಗಳಿಗೆ ಕರೆತರಬೇಕು.ಅಲ್ಲಿ ಅವರಿಗೆ ಶೌಚಗೃಹ, ಕುಡಿವ ನೀರು, ಊಟದ ವ್ಯವಸ್ಥೆ ಮಾಡಬೇಕು. ಅವರ ತಪಾಸಣೆ ಮಾಡಿ ನಿಗದಿತ ನಮೂನೆಯಲ್ಲಿ ವಿವರ ದಾಖಲಿಸಿದ ನಂತರ ವಲಸಿಗರ ಕೈಗೆ ಹೋಂ ಕ್ವಾರಂಟೈನ್ ಸೀಲ್ ಹಾಕುವುದು. ನಂತರ ಅವರವರ ಊರುಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚಿಸಿದರು.ಅನಂತಪುರ ಮತ್ತು ಕರ್ನೂಲ್‌ನಿಂದ ತುರ್ತು ಚಿಕಿತ್ಸೆಗೆ ಬಳ್ಳಾರಿಗೆ ಬರುತ್ತಿರುವವರಿಗೆ ಅಲ್ಲಿನ ಜಿಲ್ಲಾಡಳಿತಗಳು ನೀಡಿದ ಪಾಸ್ ಇದ್ದರಷ್ಟೇ ಒಳಗೆ ಬರಲು ಅನುಮತಿ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳ ಜಿಲ್ಲಾ ಕಲೆಕ್ಟರ್‌ಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದರು.

    ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಎಡಿಸಿ ಮಂಜುನಾಥ, ಪ್ರೊಬೆಷನರಿ ಐಎಎಸ್ ಈಶ್ವರ ಕಾಂಡೂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts