More

    ಅರ್ಥಹೀನ ಆಚರಣೆ ವಿರೋಧಿಸಿದ್ದ ರಸಋಷಿ

    ಬಳ್ಳಾರಿ: ರಾಷ್ಟ್ರಕವಿ ಕುವೆಂಪು ಅವರು ಜಾತೀಯತೆ, ಅರ್ಥಹೀನ ಆಚರಣೆಗಳನ್ನು ಕಟುವಾಗಿ ವಿರೋಧಿಸಿದ್ದರು ಎಂದು ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಎನ್. ಬಸವರಾಜ ಹೇಳಿದರು.

    ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ರಾಷ್ಟ್ರಕವಿ ಕುವೆಂಪು ಜನ್ಮದಿನ ಅಂಗವಾಗಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಡು, ನುಡಿ ಜತೆ ದೇಶವನ್ನು ಅಪಾರವಾಗಿ ಪ್ರೀತಿಸಿದ ಮಹಾನ್ ವ್ಯಕ್ತಿ ಕುವೆಂಪು. ಇವರು ನಡೆದ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಮಾತನಾಡಿ, ಕುವೆಂಪು ಅವರ ಜಾತ್ಯತೀತ ಮನೋಭಾವ, ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಹುಟ್ಟುವ ಪ್ರತಿ ಮಗುವೂ ವಿಶ್ವಮಾನವನೇ ಆಗಿರುತ್ತದೆ. ನಂತರ ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಎಂದು ವಿಷಾದಿಸಿದರು.

    ಮನುಜ ಮತ, ವಿಶ್ವಪಥ ಸಾರಿದ ರಾಷ್ಟ್ರ ಕವಿ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಕ್ಕಳ ಮಾನಸಿಕ ಬೆಳವಣಿಗೆಗೆ ನೃತ್ಯ ನಾಟಕ, ಸಂಗೀತ ಅತ್ಯಗತ್ಯ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

    ಕುವೆಂಪು ನಾಟಕಗಳ ವೈಶಿಷ್ಟ್ಯ ಕುರಿತು ಉಪನ್ಯಾಸ ನೀಡಿದ ವಿ.ಎಸ್.ಕೆ. ವಿಶ್ವವಿದ್ಯಾಲಯದ ಪ್ರದರ್ಶನ ಕಲೆ, ನಾಟಕ ವಿಭಾಗದ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ , ಮನುಷ್ಯನಿಗೆ ಸಹಾಯ ಮಾಡುವುದರಲ್ಲಿ ಶಿವನನ್ನು ಕಾಣಬೇಕೆಂದು ಕುವೆಂಪು ತಮ್ಮ ಜಲಗಾರ ನಾಟಕದ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಅವರ ಅನೇಕ ನಾಟಕಗಳು ಪ್ರಸ್ತುತ ಸಂದರ್ಭಕ್ಕೆ ಹೊಂದುತ್ತವೆ ಎಂದು ಅಭಿಪ್ರಾಯಪಟ್ಟರು.

    ರಂಗಭೂಮಿ ಮತ್ತು ರಂಗ ಕಲಾವಿದರು ಕುರಿತು ಉಪನ್ಯಾಸ ನೀಡಿದ ಹಿರಿಯ ರಂಗ ಕಲಾವಿದ, ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳು, ರಂಗಭೂಮಿಗೆ ಅಖಂಡ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಬಳ್ಳಾರಿ ರಾಘವ, ಡಾ. ಜೋಳದರಾಶಿ ದೊಡ್ಡನಗೌಡ, ಶಿಡಗಿನಮೊಳ ಚಂದ್ರಯ್ಯಸ್ವಾಮಿ, ನಾಡೋಜ ಡಾ.ಸುಭದ್ರಮ್ಮ ಮನ್ಸೂರು ಅವರೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ, ಡಾ.ಕೆ. ನಾಗರತ್ನಮ್ಮ, ಕೂಡ್ಲಿಗಿ ಪದ್ಮಾ, ರಮೇಶಗೌಡ ಪಾಟೀಲ್, ಆದೋನಿ ವೀಣಾ ಹೀಗೆ ಹಲವು ರಂಗ ನಟಿಯರು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಆದೋನಿ, ರಮೇಶ್ ಗೌಡ ಪಾಟೀಲ್, ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ಎಂ. ಕುಮಾರಸ್ವಾಮಿ, ರಂಗ ಕಲಾವಿದ ರಾಮಚಂದ್ರ ವಿ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಎಚ್.ತಿಪ್ಪೇಸ್ವಾಮಿ ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ, ನಾಗನಗೌಡ, ನೇತಿ ರಘುರಾಮ, ಬಿ.ಎಂ.ಬಸವರಾಜ, ತಿಮ್ಮಪ್ಪ, ದೊಡ್ಡ ಬಸಯ್ಯ, ಅಮರೇಶ, ಕೆ. ಕೃಷ್ಣ, ಸರ್ಕಾರಿ ಆದರ್ಶ ವಿದ್ಯಾಲಯ ಶಿಕ್ಷಕ ವೃಂದ ಮತ್ತು ಕಲಾಭಿಮಾನಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts