More

    ಬೆಲ್ಲ, ಅರಿಶಿಣಕ್ಕೆ ಬ್ರಾೃಂಡ್ ಸೃಷ್ಟಿಸಿ

    ಬೆಳಗಾವಿ: ಜಿಲ್ಲೆಯಲ್ಲಿನ ಅತ್ಯುತ್ತಮ ಬೆಲ್ಲ ಮತ್ತು ಅರಿಶಿಣ ಉತ್ಪಾದನಾ ಘಟಕಗಳನ್ನು ಪತ್ತೆ ಮಾಡಿ, ಅವುಗಳಿಗೆ ಬ್ರಾೃಂಡ್ ಸೃಷ್ಟಿಸುವ ಮೂಲಕ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಕೃಷಿ ಅಧಿಕಾರಿಗಳು ಕೂಡಲೇ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೃಷಿ ಇಲಾಖೆಯ ಆತ್ಮನಿರ್ಭರ ಭಾರತ ಅಭಿಯಾನದ ನಿಮಿತ್ತ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಕುರಿತ ಜಿಲ್ಲಾ ಮಟ್ಟದ ಕೃಷಿ, ವಾಣಿಜ್ಯ, ಆಹಾರ ಸಂಸ್ಕರಣೆ ಮತ್ತು ಕೃಷಿ ರಫ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ 2.45 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಲ್ಲ ಉತ್ಪಾದಿಸುವ ಗಾಣಗಳು ಸಂಪೂರ್ಣ ಅಳಿವಿನ ಅಂಚಿನಲ್ಲಿವೆ. ಅಲ್ಲದೆ, ಅರಿಶಿಣಕ್ಕೆ ಸೂಕ್ತ ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಇವೆರಡೂ ಉತ್ಪಾದನಾ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಬೆಲ್ಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಒಂದು ಬ್ರಾೃಂಡ್ ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.

    ಹಾಲು-ಮಾವಿಗೂ ಬೇಡಿಕೆ: ಜಿಲ್ಲೆಯಲ್ಲಿ ಹಾಲು, ಅರಿಶಿಣ, ಮಾವು ಇತ್ಯಾದಿ ಸಂಸ್ಕರಣಾ ಘಟಕ ಸ್ಥಾಪನೆಗೂ ಉತ್ತಮ ಅವಕಾಶಗಳಿವೆ. ಇವುಗಳಲ್ಲಿ ಮಾವು ಸಂಸ್ಕರಣಾ ಘಟಕದಿಂದ ವಿವಿಧ ಉಪ ಉತ್ಪನ್ನಗಳ ತಯಾರಿಕೆಗೂ ಹೆಚ್ಚಿನ ಅವಕಾಶಗಳಿವೆ. ಕೃಷಿಯೇತರ ಜಮೀನಿನಲ್ಲಿ ಸ್ಥಾಪಿತ ಘಟಕಗಳಿಗೆ ಮಾತ್ರ ಸಾಲಸೌಲಭ್ಯ ದೊರಕುತ್ತವೆ. ಇದನ್ನು ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

    ವಿಸ್ತೃತ ಯೋಜನೆ ರೂಪಿಸಿ: ಜಿಪಂ ಸಿಇಒ ಎಚ್.ವಿ. ದರ್ಶನ ಮಾತನಾಡಿ,‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ ಉತ್ತೇಜನಕ್ಕೆ ಮೊದಲ ವರ್ಷ ಶೇ. 100ರಷ್ಟು ನೆರವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಹೀಗಾಗಿ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ವಿಸ್ತೃತ ಯೋಜನೆ ರೂಪಿಸಿ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್‌ಗಳಿಂದ ಸರಳವಾಗಿ ಸಾಲಸೌಲಭ್ಯ ಒದಗಿಸಲು ಸಾಧ್ಯವಾಗುವಂತಹ ಆಹಾರ ಸಂಸ್ಕರಣೆ ಘಟಕ ಆಯ್ಕೆ ಮಾಡುವುದರಿಂದ ಅಭಿವೃದ್ಧಿ ಸುಲಭವಾಗುತ್ತದೆ ಎಂದರು.

    ಉತ್ತೇಜನ ಭರವಸೆ: ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಎಲ್ಲ ಬೆಳೆ ಅಥವಾ ಉತ್ಪನ್ನಗಳಿಗೆ ಬೆಲೆ ಒದಗಿಸಲು ಅನುಕೂಲವಾಗುವಂತೆ ಉತ್ತೇಜನ ನೀಡಲಾಗುವುದು. ಮೈಸೂರು ಸಿಎಫ್‌ಟಿಆರ್‌ಐ ನಲ್ಲಿ ಬೆಲ್ಲದ ಪುಡಿ, ದ್ರವ ರೂಪದ ಬೆಲ್ಲದ ಬಗ್ಗೆ ತಂತ್ರಜ್ಞಾನ ಲಭ್ಯವಿದ್ದು, ಇದನ್ನು ಜಿಲ್ಲೆಯಲ್ಲಿ ಬಳಸಿಕೊಳ್ಳುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

    ತುಕ್ಕಾನಟ್ಟಿ ಕೆವಿಕೆ ವಿಜ್ಞಾನಿ ಡಿ.ಸಿ. ಚೌಗಲಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಎಚ್.ಡಿ. ಕೋಳೇಕರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಹೋಬಳಿ ಮಟ್ಟದಲ್ಲಿ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಿ: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಸರ್ಕಾರಿ ಸೌಲಭ್ಯ ಕಲ್ಪಿಸಲು ಮತ್ತು ರೈತರಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಬೇಕು. ನಬಾರ್ಡ್ ವತಿಯಿಂದ ರೈತರ ಆರ್ಥಿಕ ಪ್ರಗತಿಗೆ ನೆರವಾಗಬೇಕು. ಬೆಲ್ಲ ಅಥವಾ ಎರಡನೇ ಆಯ್ಕೆಯಾಗಿ ಅರಿಶಿಣ ಸಂಸ್ಕರಣಾ ಘಟಕ ಆಯ್ಕೆ ಮಾಡುವಾಗ ನಬಾರ್ಡ್, ಇತರೆ ಹಣಕಾಸು ಸಂಸ್ಥೆಗಳ ಜತೆ ಚರ್ಚಿಸಬೇಕಾಗುತ್ತದೆ. ಬಳಿಕವೇ ಮತ್ತೊಂದು ಸಭೆ ನಡೆಸಿ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts