More

    ಬೆಳಗಾವಿ ‘ಲೋಕ’ದಲ್ಲಿ ರಾಜಕಾರಣ ಚುರುಕು

    ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಏಪ್ರಿಲ್ 17ರಂದು ದಿನಾಂಕ ಘೋಷಣೆಯಾಗುತ್ತಿದ್ದಂತೆ, ಕುಂದಾನಗರಿಯಲ್ಲಿ ರಾಜಕಾರಣ ಚುರುಕುಗೊಂಡಿದೆ.

    ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು 2020ರ ಸೆಪ್ಟೆಂಬರ್‌ನಲ್ಲಿ ಅಕಾಲಿಕ ನಿಧನರಾಗಿದ್ದರಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಆಯೋಗವು ಮಂಗಳವಾರ ಉಪ ಚುನಾವಣೆಗೆ ಮುಹೂರ್ತ ನಿಗದಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಿರಂತರ ಪ್ರಯತ್ನದಲ್ಲಿದ್ದ ಆಕಾಂಕ್ಷಿತರು ಇದೀಗ ಟಿಕೆಟ್ ಖಾತ್ರಿಗಾಗಿ ತಮ್ಮ ಆಪ್ತರ ಮೂಲಕ ಪಕ್ಷದ ರಾಷ್ಟ್ರೀಯ ಮುಖಂಡರ ಮನವೊಲಿಸಲು ಕಸರತ್ತು ಆರಂಭಿಸಿದ್ದಾರೆ.

    ಆಕಾಂಕ್ಷಿತರು: ಈಗಾಗಲೇ ಬಿಜೆಪಿಯಿಂದ ಕಾಡಾ ಅಧ್ಯಕ್ಷ ಡಾ.ವಿ.ಐ.ಪಾಟೀಲ, ಡಾ.ಗಿರೀಶ ಸೋನ್ವಾಲಕರ್, ಡಾ.ರವಿ ಪಾಟೀಲ, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ದಿ. ಸುರೇಶ ಅಂಗಡಿ ಪತ್ನಿ ಮಂಗಲಾ ಅಂಗಡಿ, ಪುತ್ರಿ ಶ್ರದ್ಧಾ ಶೆಟ್ಟರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ, ಕಿರಣ ಸಾಧುನವರ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಟಿಕೆಟ್ ನಿರೀಕ್ಷೆಯಲ್ಲಿದಾರೆ. ಜೆಡಿಎಸ್‌ನಿಂದ ಅಶೋಕ ಪೂಜಾರಿ, ಭೀಮಪ್ಪ ಗಡಾದ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅಲ್ಲದೆ, ಕೆಲ ಆಕಾಂಕ್ಷಿಗಳು ತಮ್ಮ ಪ್ರಭಾವದ ಮೂಲಕ ನೇರವಾಗಿ ಪಕ್ಷದ ಹೈಕಮಾಂಡ್ ಸಂಪರ್ಕ ಸಾಧಿಸುತ್ತಿದ್ದಾರೆ.

    ಪ್ರಬಲ ಸಮುದಾಯಕ್ಕೆ ಟಿಕೆಟ್?: 18 ಲಕ್ಷ ಮತದಾರರನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ, ಮರಾಠಿ ಮತ್ತು ಕುರುಬ ಸಮುದಾಯದ ಮತಗಳು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ, ಅಹಿಂದ ವರ್ಗದ ಮತಗಳೂ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿಕೊಂಡು ಬಂದಿದೆ. ಇದಕ್ಕೆ 2014 ಮತ್ತು 2019ರಲ್ಲಿ ಜರುಗಿದ್ದ ಲೋಕಸಭಾ ಚುನಾವಣೆ ನಿದರ್ಶನವಾಗಿದೆ. ಹಾಗಾಗಿ ಎಲ್ಲ ಸಮುದಾಯದ ಮತದಾರರನ್ನು ಸೆಳೆದುಕೊಳ್ಳುವ ಹಾಗೂ ಎಲ್ಲ ಸಮುದಾಯದವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಪ್ರಬಲರಿಗೆ ಟಿಕೆಟ್ ನೀಡಲು ಎರಡೂ ಪಕ್ಷಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

    ಜಾರಕಿಹೊಳಿ ಸಹೋದರರನ್ನು ನಿರ್ಲಕ್ಷಿಸಿದರೆ ಆಪತ್ತು: ರಾಜ್ಯ ರಾಜಕಾರಣದಲ್ಲಿ ಬಲಿಷ್ಠವಾಗಿರುವ ಜಾರಕಿಹೊಳಿ ಸಹೋದರರು ಪ್ರತಿಯೊಂದು ಚುನಾವಣೆಯಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ಮತ್ತು ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಮುನ್ನೆಲೆಗೆ ಬಾರದಂತೆ ಎರಡೂ ಪಕ್ಷಗಳು ಎಚ್ಚರಿಕೆ ವಹಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈ ಪ್ರಕರಣವನ್ನು ಬಹಿರಂಗವಾಗಿ ವಿರೋಧಿಸುವ ಮತ್ತು ಸಮರ್ಥನೆಗೂ ಮುಂದಾಗುತ್ತಿಲ್ಲ. ಹಾಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾರಕಿಹೊಳಿ ಸಹೋದರರ ಅಭಿಪ್ರಾಯ ಪಡೆದುಕೊಂಡು ನಿರ್ಣಯ ಕೈಗೊಳ್ಳಲು ಎರಡೂ ಪಕ್ಷಗಳು ನಿರ್ಧರಿಸಿವೆ ಎಂದು ಪಕ್ಷಗಳ ಮೂಲಗಳು ಸ್ಪಷ್ಟಪಡಿಸಿವೆ.

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts