More

    ಬೆಳಗಾವಿ ನಗರದ ನಾಲ್ಕು ಕಡೆ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿ

    ಬೆಳಗಾವಿ : ಕರೊನಾ ಹರಡುವುದನ್ನು ತಡೆಗಟ್ಟಲು ಹಾಗೂ ಎಪಿಎಂಸಿ ಆವರಣದಲ್ಲಿ ಜನಸಂದಣಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಗರದ ಹೊರವಲಯದ ನಾಲ್ಕು ಕಡೆಗಳಲ್ಲಿ ಪ್ರತ್ಯೇಕ ಹೋಲ್‌ಸೇಲ್ (ಸಗಟು) ತರಕಾರಿ ಮಾರಾಟಕ್ಕೆ ಸ್ಥಳ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. ನಗರದ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂಡಾಲ್ಕೋ ಮೈದಾನ, ಆರ್‌ಟಿಒ ಮೈದಾನ, ಪೋದ್ದಾರ್ ಶಾಲಾ ಮೈದಾನ ಹಾಗೂ ಬಿ.ಎಸ್.ಯಡಿಯೂರಪ್ಪ ಮಾರ್ಗದ ಗಾಳಿಪಟ ಉತ್ಸವ(ಮಾಲಿನಿ ಸಿಟಿ) ಮೈದಾನದಲ್ಲಿ ಸೋಮವಾರದಿಂದಲೇ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

    ಭಾನುವಾರದವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ವಹಿವಾಟು ನಡೆಸಬೇಕು. ತದನಂತರ ನಗರದ ಹೊರವಲಯದಲ್ಲಿ ಗುರುತಿಸಲಾಗುವ ನಿಗದಿತ ಸ್ಥಳಗಳಲ್ಲಿ ವಹಿವಾಟು ನಡೆಸಬೇಕು. ಉಳ್ಳಾಗಡ್ಡಿ, ಆಲೂಗಡ್ಡೆ ಮತ್ತು ಗೆಣಸು ಮಾತ್ರ ಮುಖ್ಯ ಪ್ರಾಂಗಣದಲ್ಲಿಯೇ ಮಾರಾಟ ಮಾಡಬೇಕು. ಉಳಿದ ತರಕಾರಿಯನ್ನು ಗುರುತಿಸಲಾದ ಸ್ಥಳಗಳಲ್ಲಿಯೇ ವ್ಯಾಪಾರ ನಡೆಸಬೇಕು ಎಂದರು. ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ್, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋದಾ ವಂಟಗೋಡಿ, ಎಸಿಪಿ ನಾರಾಯಣ ಭರಮನಿ, ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು ಇದ್ದರು.

    ಅನ್ಯರಿಗೆ ನಿರ್ಬಂಧ ವಿಧಿಸಿ

    ಸಭೆಯಲ್ಲಿ ಪಾಲ್ಗೊಂಡಿದ್ದ ವರ್ತಕರು ಮಾತನಾಡಿ, ನಗರದ ಎಪಿಎಂಸಿಗೆ ನಿತ್ಯ ಸಾವಿರಾರು ಕ್ವಿಂಟಾಲ್ ಮೆಣಸಿನಕಾಯಿ ಬರುತ್ತದೆ. ಕಿತ್ತೂರು, ಬೈಲಹೊಂಗಲ, ಖಾನಾಪುರ ಮತ್ತಿತರ ಮಾರುಕಟ್ಟೆಯಲ್ಲಿಯೂ ಮೆಣಸಿನಕಾಯಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಎಪಿಎಂಸಿ ಪ್ರಾಂಗಣದಲ್ಲಿ ಹೋಲ್ಸೇಲ್ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು. ಸಾರ್ವಜನಿಕರು ಬರುತ್ತಿರುವುದರಿಂದ ಜನಸಂದಣಿ ಹೆಚ್ಚಾಗುತ್ತಿದೆ. ಹೀಗಾಗಿ ಹೋಲ್‌ಸೇಲ್ ವ್ಯಾಪಾರಸ್ಥರನ್ನು ಹೊರತುಪಡಿಸಿ ಉಳಿದವರಿಗೆ ನಿರ್ಬಂಧ ಹಾಕಬೇಕು ಎಂದು ವರ್ತಕರು ಕೋರಿದರು.

    ಕಾನೂನು ಕ್ರಮದ ಎಚ್ಚರಿಕೆ

    ತರಕಾರಿ ಸೇರಿ ಅಗತ್ಯ ಸಾಮಗ್ರಿಗಳ ಪೂರೈಕೆಯಲ್ಲಿ ವಿನಾಕಾರಣ ವ್ಯತ್ಯಯ ಉಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ರೈತರು, ವ್ಯಾಪಾರಸ್ಥರು, ಹಮಾಲರ ಕುಟುಂಬಗಳು ಸೇರಿ ಎಲ್ಲ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಸ್ವಲ್ಪ ಅನನುಕೂಲವಾದರೂ ಸರಿ, ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಆಗುವಂತೆ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಗದಿಪಡಿಸುವ ಸ್ಥಳಗಳಲ್ಲಿ ವಹಿವಾಟು ನಡೆಸುವ ಮೂಲಕ ಸಹಕರಿಸಬೇಕು. ಲಾಕ್‌ಡೌನ್ ಆದೇಶ ಇರುವುದರಿಂದ ಜನಸಂದಣಿ ಹೆಚ್ಚಿಸಿಕೊಂಡು ವ್ಯಾಪಾರ ವಹಿವಾಟು ನಡೆಸಬೇಡಿ.
    | ಡಾ.ಕೆ.ವಿ. ರಾಜೇಂದ್ರ ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts