More

    ಬೇಕಾದ ಸ್ಥಳಕ್ಕೆ ಹೋಗಲು ಅಮಾನತು ನೆಪ!: ರಾಮನಗರ ಜಿಲ್ಲೆಯಲ್ಲಿ ಶಿಕ್ಷಕರ ವರ್ಗಾವಣೆ ದಂಧೆ

    ರಾಮನಗರ: ಶಿಕ್ಷಕರ ವರ್ಗಾವಣೆ ದಂಧೆಯಾಗಿದ್ದು, ಅಮಾನತುಗೊಂಡ ಶಿಕ್ಷಕರನ್ನು ಬೇರೆಡೆಗೆ ಮರು ನಿಯೋಜನೆ ಮಾಡುವ ಮುನ್ನ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಜಿಪಂ ಅಧ್ಯಕ್ಷ ಎಚ್.ಬಸಪ್ಪ ಡಿಡಿಪಿಐಗೆ ತಾಕೀತು ಮಾಡಿದ್ದಾರೆ.

    ನಗರದ ಜಿಪಂ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯಸಭೆ ಆರಂಭವಾಗುತ್ತಿದ್ದಂತೆ, ತಮಗೆ ಬೇಕಾದಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳುವ ಸಲುವಾಗಿಯೇ ಅಮಾನತು ಎನ್ನುವ ಒಂದು ದೊಡ್ಡ ನಾಟಕ ನಡೆಯುತ್ತಿದೆ ಎಂದು ಸದಸ್ಯ ಶಿವಕುಮಾರ್ ಆರೋಪ ಮಾಡಿದರು. ಈ ಹಿನ್ನೆಲೆಯಲ್ಲಿ ವರ್ಗಾವಣೆಗೆ ಮುನ್ನ ಸಿಇಒ ಬಳಿ ಚರ್ಚಿಸಿ ಎಂದು ಅಧ್ಯಕ್ಷರು ಸೂಚಿಸಿದರು.

    ಆರೋಪ ಏನು?: ಶಿಕ್ಷಕರು ವಿವಿಧ ಕಾರಣಗಳಿಗಾಗಿ ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಬಯಸುತ್ತಾರೆ. ಆದರೆ ಸಾಮಾನ್ಯ ಪ್ರಕ್ರಿಯೆಯಲ್ಲಿ ಇದು ಅಷ್ಟು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ವರ್ಗಾವಣೆ ಎನ್ನುವ ವ್ಯವಸ್ಥಿತ ನಾಟಕ ನಡೆಯುತ್ತದೆ. ಯಾವುದೋ ನೆಪ ಇಟ್ಟುಕೊಂಡು ಶಿಕ್ಷಕರನ್ನು ಅಮಾನತು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಇಂತಹುದೇ 100ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ನಂತರ ತನಿಖೆ ಎನ್ನುವ ಶಾಸ್ತ್ರ ಮುಗಿಸಿ, ನಿರ್ದೋಷಿ ಎಂದು ಹೇಳಿ ಅಮಾನತು ತೆರವುಗೊಳಿಸಿ ಶಿಕ್ಷಕರಿಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಲಾಗುತ್ತದೆ. ಇದು ರೋಲ್‌ಕಾಲ್ ದಂಧೆಯಾಗಿದೆ. ಇದರಲ್ಲಿ 98 ಮಂದಿಯನ್ನು ನಿರ್ದೋಷಿಗಳೆಂದು ಬಿಂಬಿಸಲಾಗಿದೆ. ಕನಕಪುರ ತಾಲೂಕಿನ ಹುಲಿಬೆಲೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರನ್ನು ಇದೇ ರೀತಿ ಮಾಡಲಾಗಿದ್ದು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ ಎಂದು ಶಿವಕುಮಾರ್ ಆರೋಪ ಮಾಡಿದರು.

    ಇದಕ್ಕೆ ಉತ್ತರಿಸಿದ, ಡಿಡಿಪಿಐ ಸೋಮಶೇಖರಯ್ಯ ಅವರು, ಯಾವುದೇ ರೀತಿಯಲ್ಲಿಯೂ ವರ್ಗಾವಣೆಗಾಗಿ ಸಸ್ಪೆಂಡ್ ಮಾಡಲಾಗುತ್ತಿಲ್ಲ. ಜಿಲ್ಲೆಯಲ್ಲಿ ಈತನಕ ನಾಲ್ಕು ಪ್ರಕರಣಗಳಿಗೆ ಮಾತ್ರ ವರ್ಗಾವಣೆ ಮಾಡಿದ್ದೇನೆ. ಇನ್ನು ಹುಲಿಬೆಲೆಯ ಶಾಲೆ ಮುಖ್ಯಶಿಕ್ಷಕ ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿರಲಿಲ್ಲ. ಶಾಲೆಯ ಅನುದಾನ ದುರ್ಬಳಕೆ ಮಾಡಿಕೊಂಡ ಗಂಭೀರ ಆರೋಪವಿತ್ತು. ಹಾಗಾಗಿ ಮಾಗಡಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು.

    ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆ: ಚನ್ನಪಟ್ಟಣದ ತಾಪಂ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಧಿಕಾರಿಗಳ ಗರ್ವ ಹೆಚ್ಚಾಗಿದ್ದು, ಸಹೋದ್ಯೋಗಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ವಾತಾವರಣ ಮೂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಡಿಎಚ್‌ಒ ನಿರಂಜನ್, ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

    ಸಭೆಯ ಆರಂಭದಲ್ಲಿ ಸದಸ್ಯ ಗಂಗಾಧರ್ ಅವರು, ಅನುಪಾಲನಾ ವರದಿಗೆ 30 ದಿನಗಳಲ್ಲಿ ಉತ್ತರಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಇಕ್ರಂ, ಅನುಪಾಲನಾ ವರದಿಯನ್ನು ತಿಳಿಸುವಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

    ಅಧಿಕಾರಿಗಳು ಉತ್ತರಿಸಬೇಕು: ಚನ್ನಪಟ್ಟಣ ತಾಪಂ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ವಂದಾರಗುಪ್ಪೆ ಸರ್ಕಾರಿ ಬಾಲ ಮಂದಿರದ ಬಾಲಕಿಯರಿಗೆ ರಕ್ಷಣೆ ಹೇಗೆ ನೀಡುತ್ತಿದ್ದೀರಿ. ಬಾಲಕಿಯರು ಕಾಣೆಯಾಗಿರುವ ಕುರಿತು ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು. ಬಾಲ್ಯ ವಿವಾಹಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಬಾಲಕಿಯರನ್ನು ಇತರ ಬಾಲಕಿಯರಿಂದ ಪ್ರತ್ಯೇಕವಾಗಿ ಇಡಲಾಗಿತ್ತು. ಶೌಚಗೃಹಕ್ಕೆಂದು ತೆರಳಿದ್ದಾಗ ನಾಪತ್ತೆಯಾಗಿದ್ದಾರೆ ಎಂದು ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್ ಉತ್ತರಿಸಿದರು. ಪ್ರತಿ 8 ಗಂಟೆಗೊಮ್ಮೆ ಪಾಳಿಯಲ್ಲಿ ಮೂವರು ಹೋಂ ಗಾರ್ಡ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕರಣದ ಆದ ದಿನದಂದು ಇಬ್ಬರು ಕೆಲಸಕ್ಕೆ ಹಾಜರಾಗಿರಲಿಲ್ಲ ಎಂದು ಉತ್ತರಿಸಿದರು. ಸಿಟ್ಟಾದ ರಾಜಣ್ಣ, ಬಾಲಕಿಯರ ಮಂದಿರದಲ್ಲಿ ಸರಿಯಾಗಿ ರಕ್ಷಣೆ ನೀಡುವ ಕೆಲಸ ಮಾಡಿ, ಮಹಿಳಾ ಸಿಬ್ಬಂದಿಯೊಂದಿಗೆ ಸೌಜನ್ಯಯುತವಾಗಿ ವರ್ತಿಸಿ, ರಕ್ಷಣೆ ನೀಡುವುದು ನಿಮ್ಮ ಕೆಲಸ ಎಂಬುದನ್ನು ಗಮನದಲ್ಲಿಡಿ ಎಂದು ಹೇಳಿದರು.

    ಶಾಸಕ ಮಂಜುನಾಥ್ ಆಕ್ರೋಶ: ಜಿಲ್ಲೆಯಲ್ಲಿ ಕ್ವಾರಂಟೈನ್ ಆದವರ ಕಷ್ಟ ಹೇಳತೀರದಾಗಿದೆ. ಅಲ್ಲಿನ ಅವ್ಯವಸ್ಥೆ ಕುರಿತು ಫೋನ್ ಮಾಡಿ ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸಂಪೂರ್ಣ ಮೌನವಾಗಿದೆ. ಪೇಯ್ಡ ಕ್ವಾರಂಟೈನ್‌ಗೆ ಒಲವು ತೋರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಕ್ವಾರಂಟೈನ್‌ನಲ್ಲಿ ಶೌಚಗೃಹಗಳನ್ನು ಅವರೇ ಸ್ವಚ್ಛಗೊಳಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂದು ಮಾಗಡಿ ಶಾಸಕ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

    ಇದಕ್ಕೆ ಉತ್ತರಿಸಿದ ಡಿಎಚ್‌ಒ ನಿರಂಜನ್, ಈ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಕರೊನಾದಿಂದ ಸಂಪೂರ್ಣ ಗುಣಮುಖರಾದವರನ್ನು ಡಿಸ್‌ಚಾರ್ಜ್ ಮಾಡಲಾಗುತ್ತಿದೆ. ಮನೆಗೆ ತೆರಳಿದ ನಂತರವೂ 14 ದಿನ ಹೋಮ್ ಹೋಂ ಕ್ವಾರಂಟೈನ್ ಆಗಿರಬೇಕು ಎಂದು ಹೇಳಿದರು. ಪಂಚಾಯಿತಿಗಳಿಗೆ ಗ್ರೇಡ್-1 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ, ಗ್ರಾಪಂ ಕುರಿತು ಮಾಹಿತಿ ಇಲ್ಲದ ಕೆಲವು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕು. ಗ್ರಾಪಂ ಕಾರ್ಯದ ಕುರಿತು ತಿಳಿವಳಿಕೆ ಇರುವ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಶಾಸಕ ಮಂಜುನಾಥ್ ಒತ್ತಾಯಿಸಿದರು.

    ಉಪಾಧ್ಯಕ್ಷೆ ಉಷಾ ರವಿ, ವಿವಿಧ ಸ್ಥಾಯಿ ಸಮತಿ ಅಧ್ಯಕ್ಷರಾದ ಶಂಕರ್, ಪ್ರಸನ್ನ ಕುಮಾರ್ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts