More

    ರಂಗಮಂದಿರ ಮೂಲೆಗುಂಪು, ಆವರಣ ಗೋಡೆ ಬಿದ್ದು ವರ್ಷ ಎರಡು ಮುಖ್ಯ ದ್ವಾರ ಕುಸಿದರೂ ದುರಸ್ತಿ ಇಲ್ಲ

    ಉಡುಪಿ: ಬೀಡಿನಗುಡ್ಡೆ ಬಯಲು ರಂಗಮಂದಿರದ ಉತ್ತರ ಪಾರ್ಶ್ವದಲ್ಲಿರುವ ಆವರಣಗೋಡೆ ಕುಸಿದು 2 ವರ್ಷವಾದರೂ ದುರಸ್ತಿಯಾಗಿಲ್ಲ. ಈ ಮಧ್ಯೆ ಲಾರಿ ಡಿಕ್ಕಿಯಾಗಿ ಮುಖ್ಯದ್ವಾರವೂ ಕುಸಿದಿದ್ದು, ಬೀದಿನಾಯಿಗಳು, ಕುಡುಕರ ಆವಾಸಸ್ಥಾನವಾಗಿ ಬದಲಾಗಿದೆ.

    3.5 ಎಕರೆ ವಿಸ್ತೀರ್ಣದ ಬಯಲು ರಂಗಮಂದಿರದ ಸುತ್ತಲೂ 5 ವರ್ಷದ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ 98 ಲಕ್ಷ ರೂ. ಅನುದಾನದಲ್ಲಿ ಕಂಪೌಂಡ್ ನಿರ್ಮಾಣ ಮಾಡಲಾಗಿದೆ. ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲಾಡಳಿತ ದಿನದ ಸಂತೆಯನ್ನು ರಂಗಮಂದಿರ ವಠಾರಕ್ಕೆ ಸ್ಥಳಾಂತರಿಸಿತ್ತು. ಹೊರ ಜಿಲ್ಲೆಯಿಂದ ಬಂದಿದ್ದ ತರಕಾರಿ ಲಾರಿ ಮುಖ್ಯದ್ವಾರಕ್ಕೆ ಡಿಕ್ಕಿ ಹೊಡೆದಿದ್ದು, ಗೇಟ್ ಸಹಿತ ಆವರಣಗೋಡೆ ಮುರಿದು ಬಿದ್ದಿದೆ.

    ಚಾಲಕನಿಗೆ 10 ಸಾವಿರ ರೂ. ದಂಡ ವಿಧಿಸಿದೆ. ಆದರೆ ದುರಸ್ತಿ ಕಾರ್ಯ ನಡೆದಿಲ್ಲ. ಹೀಗಾಗಿ ತೆರೆದ ಬಯಲು ರಂಗಮಂದಿರ ವೇದಿಕೆಯಲ್ಲಿ ಬೀದಿನಾಯಿಗಳು ಮಳೆಗೆ ಆಶ್ರಯ ಪಡೆಯುತ್ತಿವೆ. ಕುಡುಕರು, ಭಿಕ್ಷುಕರು ಇತ್ತ ಸುಳಿಯುತ್ತಿದ್ದಾರೆ.

    ಉತ್ತರ ತಡೆಗೋಡೆ ಬಿದ್ದು 2 ವರ್ಷ: 2018 ಮೇ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ನೀರು ಹೊರಹೋಗುವ ಪೈಪ್‌ಗಳಲ್ಲಿ ಕಸದ ರಾಶಿ ತುಂಬಿಕೊಂಡ ಪರಿಣಾಮ ಈಶಾನ್ಯ ದಿಕ್ಕಿನತ್ತ ನೀರು ಹರಿದಿದ್ದು, ಉತ್ತರದ ಭಾಗದ ಅರ್ಧ ಆವರಣಗೋಡೆ ಕುಸಿತವಾಗಿತ್ತು. ನಂತರ ಯಾರೂ ದುರಸ್ತಿ ಮಾಡಲು ಆಸಕ್ತಿ ವಹಿಸದ ಕಾರಣ ಈಗ ಗಿಡಗಂಟಿಗಳು ಬೆಳೆದಿವೆ. ಪ್ರಕೃತಿಯೇ ತಡೆಗೋಡೆ ನಿರ್ಮಿಸಿದೆ ಎಂದು ಭಾವಿಸಿರುವ ನಗರಸಭೆ ಈ ಬಗ್ಗೆ ನಿರ್ಲಕ್ಷೃ ವಹಿಸಿದೆ.

    ಸರ್ಕಾರಿ ಹಬ್ಬ ಸ್ಥಳಾಂತರ: ಈ ಹಿಂದೆ ಆದಿ ಉಡುಪಿಯಲ್ಲಿ ಸರ್ಕಾರಿ ಹಬ್ಬಗಳಾದ ಸ್ವಾತಂತ್ರೃ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದರೂ ಬಳಿಕ ಹೆಲಿಪ್ಯಾಡ್‌ಗೆ ಅರ್ಧ ಜಾಗ ಬಳಸಿದ ಪರಿಣಾಮ ನಗರದಲ್ಲಿ ಮೈದಾನದ ಕೊರತೆ ಉಂಟಾಗಿತ್ತು. ಬಯಲು ರಂಗಮಂದಿರ ನಿರ್ಮಾಣ ಈ ಕೊರತೆ ನೀಗಿಸಿತ್ತು. 2016ರ ಗಣರಾಜ್ಯೋತ್ಸವದಂದು ಬಯಲು ರಂಗಮಂದಿರ ಉದ್ಘಾಟಿಸಲಾಗಿತ್ತು. ನಂತರ ಎಲ್ಲ ಸರ್ಕಾರಿ ಕಾರ್ಯಕ್ರಮ ಇಲ್ಲೇ ನಡೆದಿದೆ. ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಮತ್ತು ಗಣರಾಜ್ಯೋತ್ಸವ ಅಜ್ಜರಕಾಡು ಜಿಲ್ಲಾಕ್ರೀಡಾಂಗಣದಲ್ಲಿ ಆಚರಿಸಲಾಗಿದ್ದು, ರಂಗಮಂದಿರ ನಿರ್ಲಕ್ಷೃಕ್ಕೆ ಒಳಗಾಗುವ ಭೀತಿ ಸಾರ್ವಜನಿಕರಿಗೆ ಕಾಡುತ್ತಿದೆ.

    ಆವರಣಗೋಡೆ ಇಲ್ಲದೆ ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರಿಂದ ಕಂಪೌಂಡ್ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಎರಡು ಪಾರ್ಶ್ವದಲ್ಲಿ ಆವರಣಗೋಡೆ ಕುಸಿದಿದೆ. ಈಗ ಮತ್ತೆ ರಂಗಮಂದಿರದ ಸುಸಜ್ಜಿತ ವೇದಿಕೆ ಬೀದಿನಾಯಿಗಳ, ಕುಡುಕರ ವಾಸಸ್ಥಾನವಾಗಿ ಬದಲಾಗುವ ಆತಂಕ ಎದುರಾಗಿದೆ.
    -ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಕಾರ್ಯಕರ್ತ

    ಲಾಕ್‌ಡೌನ್ ಸಂದರ್ಭದಲ್ಲಿ ದಿನದ ಸಂತೆ ನಡೆಯುತ್ತಿತ್ತು. ಇಲ್ಲಿಗೆ ತರಕಾರಿ ತಂದಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಬಯಲು ರಂಗಮಂದಿರ ಮುಖ್ಯದ್ವಾರಕ್ಕೆ ಹಾನಿಯಾಗಿದೆ. ಈ ಬಗ್ಗೆ ಲಾರಿ ವಶಕ್ಕೆ ಪಡೆದು 10 ಸಾವಿರ ರೂ. ದಂಡ ವಿಧಿಸಲಾಗಿದೆ. ದುರಸ್ತಿಗೆ ಮಳೆ ಅಡ್ಡಿಯಾಗಿದ್ದು, ಮಳೆಗಾಲದ ಬಳಿಕ ಸರಿಪಡಿಲಾಗುವುದು.
    -ಮೋಹನ್‌ರಾಜ್, ಇಂಜಿನಿಯರ್, ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts