More

    ಅಸಹಾಯಕರ ಬಗ್ಗೆ ಕರುಣೆಯಿರಲಿ: ಮನೋಲ್ಲಾಸ

    ಅಸಹಾಯಕರ ಬಗ್ಗೆ ಕರುಣೆಯಿರಲಿ: ಮನೋಲ್ಲಾಸ| ಗಣೇಶ ಭಟ್ಟ

    ಛತ್ರಪತಿ ಶಿವಾಜಿಯ ಗುರುಗಳಾದ ಸಮರ್ಥ ರಾಮದಾಸರು ಒಮ್ಮೆ ಶಿಷ್ಯರೊಂದಿಗೆ ಸಜ್ಜನಗಢದಿಂದ, ಶಿವಾಜಿಯ ರಾಜಧಾನಿ ರಾಯಗಢಕ್ಕೆ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯ ಸಮರ್ಥರಿಗೆ ತೀವ್ರ ಬಾಯಾರಿಕೆಯಾಯಿತು. ದಾಹ ನೀಗಿಸಿಕೊಳ್ಳಲು ಎಲ್ಲಿಯೂ ನೀರು ಸಿಗಲಿಲ್ಲ. ಸಾಗುತ್ತಿರುವ ದಾರಿ ಪಕ್ಕದಲ್ಲೇ ಕಬ್ಬಿನ ಗದ್ದೆಯಿತ್ತು. ರಾಮದಾಸರು ಕಬ್ಬಿನಗದ್ದೆಗೆ ಇಳಿದು, ಒಂದು ಕಬ್ಬನ್ನು ಮುರಿದು ಕಚ್ಚಿ ರಸ ಹೀರಿ ದಾಹ ಇಂಗಿಸಿಕೊಳ್ಳಲು ಪ್ರಯತ್ನಿಸಿದರು. ಸ್ವಲ್ಪ ದೂರದಲ್ಲಿದ್ದ ಗದ್ದೆ ಯಜಮಾನ ಇದನ್ನು ನೋಡಿದ. ತನ್ನ ಅನುಮತಿ ಇಲ್ಲದೆ ಕಬ್ಬಿನಗದ್ದೆಗೆ ಇಳಿದು ಕಬ್ಬು ತಿನ್ನುತ್ತಿರುವುದನ್ನು ಕಂಡು ಕೋಪಿಸಿಕೊಂಡ. ಆ ರೈತ ರಾಮದಾಸರ ಪೂರ್ವಾಪರ ತಿಳಿಯದೆ, ಹಿಂದೆಮುಂದೆ ವಿಚಾರಿಸದೇ ದೊಣ್ಣೆಯಿಂದ ಅವರನ್ನು ಥಳಿಸಿದ.

    ರಾಮದಾಸರನ್ನು ಅನುಸರಿಸಿ ಬರುತ್ತಿದ್ದ ಅವರ ಶಿಷ್ಯರು ಈ ದೃಶ್ಯವನ್ನು ನೋಡಿ ದಂಡಿಸುತ್ತಿರುವ ಆತನನ್ನು ತಡೆದು ಬಂಧಿಸಿದರು. ಶಿಷ್ಯರು ರೈತನನ್ನು ಶಿವಾಜಿ ಮಹಾರಾಜನಲ್ಲಿಗೆ ಕರೆತಂದರು. ಶಿವಾಜಿ ಮಹಾರಾಜರ ಗುರುವಿಗೆ ತಾನು ದೊಣ್ಣೆಯಿಂದ ಬಡಿದಿದ್ದು ಇದರಿಂದ ತನಗೆ ಯಾವ ಶಿಕ್ಷೆ ಕಾದಿದೆಯೋ ಎಂದು ರೈತ ನಡುಗಿಹೋದ. ನಡೆದ ಘಟನೆಯನ್ನು ವಿಚಾರಿಸಿ ರೈತನಿಗೆ ಶಿಕ್ಷೆ ನೀಡಲು ಶಿವಾಜಿ ಮುಂದಾದಾಗ, ಸಮರ್ಥರು- ‘ಮಹಾರಾಜ, ರೈತನಿಂದ ಹೊಡೆತ ತಿಂದವನು ನಾನು. ಆದ್ದರಿಂದ ದಂಡಿಸುವ ಅಧಿಕಾರ ನನಗೆ ನೀಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ’ ಎಂದರು. ಇದಕ್ಕೆ ಒಪ್ಪಿದ ಶಿವಾಜಿ ಸಮರ್ಥ ರಾಮದಾಸರಿಗೆ ಈ ತೀರ್ಪು ನೀಡಲು ವಿಜ್ಞಾಪಿಸಿಕೊಂಡರು. ಅದಕ್ಕೆ ರಾಮದಾಸರು- ‘ನನಗೆ ದಂಡಿಸಿದ ರೈತನಿಗೆ ಇನ್ನೂ ಐದು ಎಕರೆ ಕಬ್ಬಿನಗದ್ದೆಯನ್ನು ಶಿಕ್ಷೆಯ ರೂಪದಲ್ಲಿ ನೀಡಬೇಕು’ ಎಂದು ತೀರ್ಪು ನೀಡಿದರು.

    ಇದನ್ನು ಕೇಳಿದ ಶಿವಾಜಿ ಮಹಾರಾಜರಿಗೂ ಹಾಗೂ ಅಲ್ಲಿ ನೆರೆದವರಿಗೂ ಆಶ್ಚರ್ಯ. ಇದೇನು ಶಿಕ್ಷೆಯೋ? ಪುರಸ್ಕಾರವೋ? ಎಂದು ಉದ್ಗರಿಸಿದರು. ಎಲ್ಲರನ್ನೂ ಸಮಾಧಾನಪಡಿಸುತ್ತ ರಾಮದಾಸರು ಹೇಳಿದರು- ‘ಈ ಬಡರೈತ ತನಗೆ ಕಡಿಮೆ ಜಮೀನು ಇರುವ ಕಾರಣ, ಆ ಜಮೀನಿನಿಂದಲೇ ತನ್ನ ಕುಟುಂಬದ ನಿರ್ವಹಣೆ ಆಗಬೇಕಾಗಿರುವುದರಿಂದ, ಕಬ್ಬಿನಗದ್ದೆಯ ಒಂದು ಕಬ್ಬನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಸ್ವಲ್ಪ ಜಮೀನು; ಅದರಿಂದ ಬರುವ ಕಡಿಮೆ ಆದಾಯವೇ ರೈತನು ನನ್ನನ್ನು ದಂಡಿಸಲು ಕಾರಣ. ಆದ್ದರಿಂದ ಈತನಿಗೆ ಹೆಚ್ಚಿನ ಜಮೀನು ನೀಡಿದರೆ ಮುಂದೆ ಈ ರೈತ ಹೀಗೆ ಮಾಡಲಾರ’.

    ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ?

    ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪ ಶಾಮ್ಯತಿ ||

    ಸಜ್ಜನರಾದವರು ಕ್ಷಮೆ ಎನ್ನುವ ಶಸ್ತ್ರವನ್ನು ಧರಿಸಿದ್ದಾರೆ. ಅದಕ್ಕಾಗಿ ದುರ್ಜನರಾಗಲೀ, ಯಾರೇ ಆದರೂ ಸಜ್ಜನರನ್ನು ಏನೂ ಮಾಡಲಾಗದು. ಹುಲ್ಲಿಲ್ಲದ ಜಾಗದಲ್ಲಿ ಬಿದ್ದ ಬೆಂಕಿ, ಹೇಗೆ ತನ್ನಿಂದ ತಾನೇ ಆರಿಹೋಗುವುದೋ, ಕರುಣೆಯಿಂದ ಎಲ್ಲ ಅನಾಹುತ ತಪ್ಪಿಸಬಹುದು. ಸಾಧು-ಸಂತರು, ಸಜ್ಜನರು, ಕರುಣಾಮೂರ್ತಿಗಳಾಗಿರುತ್ತಾರೆ. ಅಹಂಕಾರದ ಅವಶೇಷವೂ ಇಲ್ಲದ ಅವರು, ಬಡವರ, ಕೈಲಾಗದವರ ಮೇಲೆ ಸದಾ ಕರುಣೆ ಹೊಂದಿರುತ್ತಾರೆ. ಇಂಥ ಮೌಲ್ಯ, ಆದರ್ಶಗಳನ್ನು ನಮ್ಮ ಜೀವನಪಥದಲ್ಲಿಯೂ ಅಳವಡಿಸಿಕೊಳ್ಳೋಣ.

    (ಲೇಖಕರು ಸಂಸ್ಕೃತ ಉಪನ್ಯಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts