More

    ಗ್ರಾಮಗಳಿಗೆ ವೈರಸ್ ಹರಡದಂತೆ ಎಚ್ಚರ ವಹಿಸಿ

    ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒಗಳ ಜಾಗೃತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ನೆಹರು ಓಲೇಕಾರ ಸೂಚಿಸಿದರು.

    ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಪ್ರತಿ ಗ್ರಾಮಗಳಲ್ಲೂ ಪರಿಣಾಮಕಾರಿಯಾಗಿ ಜನತಾ ಕರ್ಫ್ಯೂ ಜಾರಿಯಾಗಬೇಕು. ಗ್ರಾಮದಿಂದ ಗ್ರಾಮಕ್ಕೆ ಅನಗತ್ಯವಾಗಿ ಓಡಾಟ ನಿರ್ಬಂಧಿಸಬೇಕು. ಗ್ರಾಮದ ಕಟ್ಟೆಗಳಲ್ಲಿ ಗುಂಪುಗೂಡಿ ಹರಟೆ ಹೊಡೆಯುವುದನ್ನು ತಡೆಯಬೇಕು. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಯಿಂದ ಗ್ರಾಮಗಳಿಗೆ ಬರುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು. ಅವರನ್ನು ಕೋವಿಡ್ ತಪಾಸಣೆಗೊಳಪಡಿಸಬೇಕು. ಕರೊನಾ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಬೇಕು’ ಎಂದರು.

    ಪ್ರತಿ ಗ್ರಾಮದಲ್ಲೂ ಪಿಡಿಒಗಳ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಧರಿಸಲು ಅರಿವು ಮೂಡಿಸಬೇಕು. ಗುಂಪುಗೂಡದಂತೆ ಡಂಗುರ ಹೊಡೆಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಹಾಗೂ ಬಿಸಿನೀರು ಕುಡಿಯುವ ಕುರಿತು ಅರಿವು ಮೂಡಿಸಬೇಕು ಎಂದರು.

    ಟಿಎಚ್​ಒ ಡಾ. ಪ್ರಭಾಕರ ಕುಂದೂರ ಮಾತನಾಡಿ, ತಾಲೂಕಿನ ಕೋವಿಡ್ ಪಾಸಿಟಿವ್ ಪ್ರಕರಣಗಳು, ಸಂರ್ಪತರ ಪತ್ತೆ, ವ್ಯಾಕ್ಸಿನ್ ನೀಡಿಕೆ, ತಪಾಸಣೆ ಕುರಿತು ಮಾಹಿತಿ ನೀಡಿದರು.

    ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಸರ್ಕಾರ ಘೊಷಿಸಿರುವ ಲಾಕ್​ಡೌನ್ ಗ್ರಾಮೀಣ ಪ್ರದೇಶಕ್ಕೂ ಅನ್ವಯವಾಗುತ್ತದೆ. ಹಳ್ಳಿಯ ಜನರು ಅನಗತ್ಯವಾಗಿ ಮನೆಯಿಂದ ಹೊರಬಂದು ಓಡಾಡುವುದನ್ನು ನಿಯಂತ್ರಿಸಲು ಎಲ್ಲ ಅಧಿಕಾರಿಗಳು ಕ್ರಮವಹಿಸಬೇಕು. ಮಾಸ್ಕ್ ಇಲ್ಲದೆ ಮನೆಯಿಂದ ಹೊರಬಂದರೆ ದಂಡ ವಿಧಿಸಬೇಕು. ಪಿಡಿಒಗಳನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ರಚಿಸಲಾದ ಕೋವಿಡ್ ಟಾಸ್ಕ್​ಫೋರ್ಸ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

    ತಾಪಂ ಇಒ ಬಸವರಾಜ ಡಿ.ಸಿ., ಮಾತನಾಡಿ, ಪಿಡಿಒಗಳ ಸಂಚಾರಕ್ಕೆ ಲಾಕ್​ಡೌನ್ ಅನ್ವಯಿಸುವುದಿಲ್ಲ. ಐಡಿಕಾರ್ಡ್ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದಲ್ಲಿ ಒಂದು ಸಣ್ಣ ಅಂಗಡಿಗಳು ತೆರೆಯದಂತೆ ನಿಗಾವಹಿಸಬೇಕು. ಬೆಳಗ್ಗೆ 6ರಿಂದ 10ಗಂಟೆವೆರೆಗೆ ದಿನನಿತ್ಯದ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ಇದನ್ನು ಉಲ್ಲಂಘಿಸಿದರೆ ಕಡ್ಡಾಯವಾಗಿ ದಂಡ ಹಾಕಿ. ಕೋವಿಡ್ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕನಿಷ್ಠ 30 ಜನರ ಸ್ವ್ಯಾಬ್ ಪರೀಕ್ಷೆ ಮಾಡಿಸಬೇಕು ಎಂದರು.

    ಬಸಾಪುರದ ಕೋವಿಡ್ ಕೇರ್ ಸೆಂಟರ್​ನಲ್ಲಿ ಸ್ವಚ್ಛತೆ, ರೋಗಿಗಳ ಆರೈಕೆ ಹಾಗೂ ಊಟದ ವ್ಯವಸ್ಥೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಅಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಲೋಪವಿಲ್ಲದಂತೆ ನಿರ್ವಹಿಸಬೇಕು. ಬೇಸಿಗೆ ಇರುವುದರಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಸ್ಪಂದಿಸಬೇಕು.

    | ನೆಹರು ಓಲೇಕಾರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts