More

    ಆಟದ ಮೈದಾನಕ್ಕೆ ಜಾಗ ಮೀಸಲಿಡದ ಬಿಡಿಎ

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಾನು ರಚಿಸುವ ಬಡಾವಣೆಗಳಲ್ಲಿ ಆಟದ ಮೈದಾನಗಳಿಗೆ ಜಾಗ ಮೀಸಲಿಡುವ ಪದ್ಧತಿಯನ್ನೇ ಮರೆತಿದ್ದು, ಅಂತಹ ಸ್ಥಳಗಳನ್ನು ನಿವೇಶನಗಳನ್ನಾಗಿ ಬದಲಾಯಿಸುವ ಮೂಲಕ ಕ್ರೀಡಾಪಟುಗಳಿಗೆ ಪರೋಕ್ಷವಾಗಿ ಬರೆ ಹಾಕುವಲ್ಲಿ ಮಗ್ನವಾಗಿದೆ.

    ವಿಶೇಷವೆಂದರೆ ಕಳೆದ ಎರಡು ದಶಕದಲ್ಲಿ ರಚನೆಯಾಗಿರುವ ಆರು ಲೇಔಟ್‌ಗಳಲ್ಲಿ ಆಟದ ಮೈದಾನಗಳ ಜಾಗವನ್ನು ಸೈಟ್‌ಗಳನ್ನಾಗಿ ರಚಿಸಿ ಮಾರಾಟ ಮಾಡಲಾಗಿದೆ. ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಮೂಗಿನಡಿ ನಡೆದಿರುವ ಈ ಭಾನಗಡಿಯನ್ನು ಸರಿಪಡಿಸುವ ಕೆಲಸ ಬಿಡಿಎ ಮುಖ್ಯಸ್ಥರಿಂದ ಆಗಿಲ್ಲ. ಪ್ರಾಧಿಕಾರದ ಆಡಳಿತದ ಉಸ್ತುವಾರಿ ಹೊಣೆ ಹೊತ್ತಿರುವ ನಗರಾಭಿವೃಧ್ಧಿ ಇಲಾಖೆ ಕೂಡ ಈ ನಿಯಮಬಾಹಿರ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

    ಮೈದಾನದ ಜಾಗ ಸೈಟ್‌ಗಳಾಗಿ ಪರಿವರ್ತನೆ:

    ಬಿಡಿಎ ಕಾಯ್ದೆ 1976ರ ಸೆಕ್ಷನ್ 32ರ ಅನ್ವಯ ಯಾವುದೇ ಬಡಾವಣೆ ನಿರ್ಮಿಸುವಾಗ ಒಟ್ಟು ಪ್ರದೇಶದ ಶೇ.15 ಜಾಗವನ್ನು ಆಟದಮೈದಾನ, ಉದ್ಯಾನ ಹಾಗೂ ಮುಕ್ತ ಜಾಗಕ್ಕಾಗಿ ಮೀಸಲಿಡಬೇಕು. ಇದು ಖಾಸಗಿ ಡೆವಲಪರ್ಸ್‌ ಸೇರಿದಂತೆ ಬಿಡಿಎಗೂ ಅನ್ವಯವಾಗುತ್ತದೆ. ಇದಲ್ಲದೆ ಪಾರ್ಕ್ ಹಾಗೂ ಆಟದ ಮೈದಾನದ ಜಾಗವನ್ನು ನಿಖರವಾಗಿ ಗುರುತಿಸಿ ಕಾಲಮಿತಿಯೊಳಗೆ ನಗರ ಪೌರಸಂಸ್ಥೆಗೆ (ಬಿಬಿಎಂಪಿ) ಹಸ್ತಾಂತರಿಸಬೇಕು. ನಂತರ ಅವುಗಳನ್ನು ಪಾಲಿಕೆಯೇ ನಿರ್ವಹಿಸಿ ಅದೇ ಉದ್ದೇಶಕ್ಕೆ ಬಳಸುವ ಹೊಣೆಗಾರಿಕೆ ಹೊಂದಿರುತ್ತದೆ.

    ಆದರೆ, ಬಿಡಿಎ 2000ರಿಂದೀಚಿಗೆ ನಿರ್ಮಿಸಿರುವ ವಿವಿಧ ಲೇಔಟ್‌ಗಳಲ್ಲಿ ಆಟದ ಮೈದಾನಕ್ಕೆ ಜಾಗ ಮೀಸಲಿಟ್ಟಿದ್ದರೂ, ಬಳಿಕ ಅವುಗಳನ್ನು ಸೈಟ್‌ಗಳಾಗಿ ಪರಿವರ್ತಿಸಿದೆ. ಇದರಿಂದಾಗಿ ಈ ಬಡಾವಣೆಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಒಂದೂ ಪ್ಲೇಗ್ರೌಂಡ್ ಇಲ್ಲದಂತಾಗಿದೆ. ಆಟದ ಮೈದಾನ ಇಲ್ಲದ ಕಾರಣ ಯುವಕರು ರಸ್ತೆಯಲ್ಲೇ ಆಟವಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಳದಿಂದಾಗಿ ಮಕ್ಕಳು ಕೂಡ ಹೊರಾಂಗಣದಲ್ಲಿ ಆಟವಾಡುವುದರಿಂದ ವಂಚಿತರಾಗಿದ್ದಾರೆ ಎನ್ನುತ್ತಾರೆ ಪಾಲಕರು.

    ಯಾವ ಲೇಔಟ್‌ಗಳಲ್ಲಿ ಪ್ಲೇಗ್ರೌಂಡ್‌ಗೆ ಕೊಕ್?:
    ಬಡಾವಣೆ ಹೆಸರು ಅಧಿಸೂಚನೆ ವರ್ಷ
    ಅಂಜನಾಪುರ ಟೌನ್‌ಶಿಪ್ 2000
    ಬನಶಂಕರಿ 6ನೇ ಹಂತ 2001
    ಸರ್ ಎಂ ವಿಶ್ವೇಶ್ವರಯ್ಯ 2002
    ಅರ್ಕಾವತಿ ಬಡಾವಣೆ 2003
    ನಾಡಪ್ರಭು ಕೆಂಪೇಗೌಡ 2014

    ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಶಾರೀರಿಕ ದಾರ್ಢ್ಯತೆಯೂ ಮುಖ್ಯ. ಶಾಲಾ-ಕಾಲೇಜುಗಳಲ್ಲಿ ಹೊರಾಂಗಣದಲ್ಲಿ ಆಟವಾಡಲು ಹೆಚ್ಚು ಅವಕಾಶ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಪ್ಲೇಗ್ರೌಂಡ್‌ಗಳ ಸಂಖ್ಯೆ ಕಡಿಮೆ ಇದ್ದು, ಪ್ರತೀ ಬಡಾವಣೆಗಳಲ್ಲಿ ಸಣ್ಣ ಆಟದಂಕಣ ನಿರ್ಮಿಸಲು ಜಾಗ ಮೀಸಲಿಡಲು ಸರ್ಕಾರ ಕ್ರಮ ಕೈಗೊಳ್ಳಲಿ.
    – ಹರೀಶ್ ಜೆ, ಬೆಂಗಳೂರು, ರಾಜ್ಯ ಕಬಡ್ಡಿ ತಂಡದ ಮಾಜಿ ನಾಯಕ

    ಸದನಕ್ಕೆ ತಪ್ಪು ಮಾಹಿತಿ ?

    ಇತ್ತೀಚಿಗೆ ಮುಕ್ತಾಯವಾದ ಬೆಳಗಾವಿ ಅಧಿವೇಶನದಲ್ಲಿ ಬೆಂಗಳೂರಿನ ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಡಿಎ ಲೇಔಟ್‌ಗಳಲ್ಲಿ ಆಟದ ಮೈದಾನಕ್ಕೆ ನಿಗದಿಯಾಗಿರುವ ಜಾಗದ ಬ್ಲಾಕ್‌ವಾರು ವಿಸ್ತೀರ್ಣ, ನಕ್ಷೆ ಹಾಗೂ ಅಭಿವೃದ್ಧಿಪಡಿಸಿರುವ ಪ್ಲೇಗ್ರೌಂಡ್ ಬಗ್ಗೆ ಪ್ರಶ್ನೆ (ಡಿ.12) ಕೇಳಿದ್ದರು. ಇದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ‘ಈ ಬಡಾವಣೆಗಳಲ್ಲಿ ಯಾವುದೇ ಆಟದ ಮೈದಾನವನ್ನು ಅಭಿವೃದ್ಧಿಪಡಿಸಿ ಬಿಬಿಎಂಪಿಗೆ ಹಸ್ತಾಂತರಿಸಿಲ್ಲ’ ಎಂಬ ಉತ್ತರ ಒದಗಿಸಿದ್ದರು. ಈ ಉತ್ತರವನ್ನು ಸಿದ್ಧಪಡಿಸಿರುವ ಬಿಡಿಎ, ಈ ಲೇಔಟ್‌ಗಳಿಗೆ ಮೀಸಲಿಟ್ಟಿದ್ದ ಪ್ಲೇಗ್ರೌಂಡ್‌ಗಳ ಸಂಖ್ಯೆಯನ್ನು ನಮೂದಿಸಿಲ್ಲ. ಜತೆಗೆ ಯೋಜನಾ ನಕ್ಷೆಯ ವಿವರವನ್ನೂ ಒದಗಿಸದೆ ಸದನಕ್ಕೆ ತಪ್ಪು ಮಾಹಿತಿ ನೀಡಿದೆ ಎಂಬ ಆಕ್ಷೇಪ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts