More

    ಬಿದ್ದ ಮರಗಳ ತೆರವಿಗೆ ವೇಗ ನೀಡಿದ ಬಿಬಿಎಂಪಿ

    ಬೆಂಗಳೂರು: ಮಳೆಗಾಲದ ವೇಳೆ ಧರೆಗುರುಳುವ ಮರ, ಮರದ ರೆಂಬೆ ಹಾಗೂ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ವೇಗ ನೀಡಿದ್ದು, ಇದಕ್ಕಾಗಿ ಬಿದ್ದ ಮರಗಳ ಕಟಾವು ಮಾಡಲು ಪ್ರತ್ಯೇಕ ತಂಡಗಳು ಸಕ್ರಿಯಗೊಳಿಸಲಾಗಿದೆ.

    ಈ ವಾರದ ಆರಂಭದಲ್ಲಿ ಭಾರೀ ಮಳೆ ಹಾಗೂ ಗಾಳಿಗೆ ನೂರಾರು ಮರಗಳು, ರೆಂಬೆ, ಕೊಂಬೆಗಳು ನೆಲಕ್ಕುರುಳಿದ್ದವು. ಆದರೆ, ಸಿಬ್ಬಂದಿ ಕೊರತೆ ಹಾಗೂ ಅಗತ್ಯ ಸಲಕರಣೆ ಇಲ್ಲದ ಕಾರಣ ತೆರವು ಕಾರ್ಯ ನಿಧಾನಗೊಂಡಿತ್ತು. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತ ಪಾಲಿಕೆಯು, ಅರಣ್ಯ ವಿಭಾಗದಿಂದ ಮರ ಕಟಾವು ತಂಡಗಳನ್ನು ನಿಯೋಜಿಸಿ ಬಿದ್ದ ಮರಗಳ ಅವಶೇಷವನ್ನು ಸಾಗಿಸಲು ಕ್ರಮ ಕೈಗೊಂಡಿದೆ.

    39 ಮರ ಕಟಾವು ತಂಡಗಳ ನಿಯೋಜನೆ:

    ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ 28 ಮರ ಕಟಾವು ತಂಡಗಳು ರಚಿಸಲಾಗಿದೆ. ಜತೆಗೆ ತುರ್ತಾಗಿ ಮರಗಳನ್ನು ತೆರವುಗೊಳಿಸಲು ಹೆಚ್ಚುವರಿಯಾಗಿ 11 ತಂಡಗಳನ್ನು ನಿಯೋಜಿಸಲಾಗಿದೆ. ಪ್ರತಿ ತಂಡದಲ್ಲೂ 7 ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳ ತೆರವಿಗೆ ಅಗತ್ಯವಾದ ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಗ್ಗ ಸೇರಿ ಇನ್ನಿತರ ಸಲಕರಣೆಗಳಿರಲಿವೆ. ಕಟಾವು ಮಾಡಿದ ಮರದ ತುಂಡುಗಳ ಸಾಗಣೆಗಾಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    754 ದೂರು ದಾಖಲು:

    ನಗರದಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಮೇ 6ರಿಂದ ಈವರೆಗೆ 271 ಮರ, 483 ರೆಂಬೆ, ಕೊಂಬೆಗಳು ಸೇರಿ ಒಟ್ಟು 754 ದೂರುಗಳು ದಾಖಲಾಗಿದ್ದವು. ಇವುಗಳನ್ನು ಮರ ಕಟಾವು ತಂಡಗಳು ತೆರವು ಮಾಡುವಲ್ಲಿ ಸಕ್ರಿಯವಾಗಿದ್ದು, ಈವರೆಗೆ ಒಟ್ಟು 683 ಮರ ಹಾಗೂ ರೆಂಬೆಗಳನ್ನು ತೆರವುಗೊಳಿಸಲಾಗಿದೆ. ಬಾಕಿ ಪ್ರಕರಣಗಳನ್ನು ತ್ವರಿತವಾಗಿ ನಿರ್ವಹಿಸಲಾಗುತ್ತಿದೆ.

    ಧರೆಗುಳಿದ ಮರಗಳನ್ನು ಕಟಾವು ಮಾಡಿದ ನಂತರ ಮರದ ದಿಮ್ಮಿಗಳು, ರೆಂಬೆ, ಕೊಂಬೆಗಳ ವಿಲೇವಾರಿಗಾಗಿ ವಲಯಕ್ಕೆ ಒಂದರಂತೆ ಆಯಾ ವಲಯಗಳಲ್ಲಿ 8 ಡಂಪಿಂಗ್ ಯಾರ್ಡ್‌ಗಳಿವೆ. ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ 6 ಕಡೆ ಡಂಪಿಂಗ್ ಯಾರ್ಡ್‌ಗಳನ್ನು ಗುರುತಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    5 ಬೈಕ್ ತಂಡಗಳ ನಿಯೋಜನೆ:

    ಮಳೆಗಾಲದಲ್ಲಿ ಬಿದ್ದಂತಹ ಮರಗಳನ್ನು ತೆರವುಗೊಳಿಸಲು ಈ ಬಾರಿ ವಿನೂತನವಾಗಿ 5 ಬೈಕ್ (ದ್ವಿಚಕ್ರ ತಂಡ) ತಂಡಗಳನ್ನು ನಿಯೋಜಿಸಲಾಗಿದೆ. ರಸ್ತೆ ಮೇಲೆ ಬಿದ್ದಂತಹ ಅಥವಾ ತುರ್ತಾಗಿ ಮರಗಳನ್ನು ತೆಗೆಯಬೇಕಾದ ಸ್ಥಳಗಳಿಗೆ ಇಬ್ಬರು ಸಿಬ್ಬಂದಿ ಇರುವ ಬೈಕ್ ತಂಡಗಳು ಕೊಂಬೆ ಕಟಾವು ಯಂತ್ರವನ್ನು ತೆಗೆದುಕೊಂಡು ಸ್ಥಳಕ್ಕೆ ತೆರಳಿ ಮರವನ್ನು ಕಟಾವು ಮಾಡಿ ತೆರವು ಮಾಡಲಿವೆ.

    ಬೃಹತ್ ಮರಗಳು ಬಿದ್ದರೆ ಅವುಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವ ಸಲುವಾಗಿ ಪಾಲಿಕೆ ಅರಣ್ಯ ವಿಭಾಗವು ತಲಾ 2 ಕ್ರೇನ್ ಹಾಗೂ ಜೆಸಿಬಿಗಳನ್ನು ನಿಯೋಜಿಸಿವೆ. ಜತೆಗೆ ಸಾಗಣೆ ಮಾಡಲು 8 ಟ್ರ್ಯಾಕ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

    ಮಳೆಗೆ ಮರ, ರೆಂಬೆ ತೆರವು ವಿವರ:
    ದಿನ ದೂರು ಮರ, ರೆಂಬೆ ತೆರವು
    ಮೇ 6 246 246
    ಮೇ 8 193 193
    ಮೇ 9 190 175
    ಮೇ 10 125 69
    ಒಟ್ಟು 754 683

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts