

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭಗೊಂಡು ಇದೀಗ ಐದನೇ ವಾರದತ್ತ ಸಾಗುತ್ತಿದ್ದು, ಈ ಮಧ್ಯೆ ವಾರ ಪೂರ್ತಿ ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆದ ಮಾತಿನ ಚಕಮಕಿ, ಏಕವಚನದ ಆರ್ಭಟಗಳನ್ನು ವೀಕ್ಷಕರು ತೀವ್ರವಾಗಿ ಖಂಡಿಸಿದ್ದಾರೆ.
ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನಟ, ನಿರೂಪಕ ಕಿಚ್ಚ ಸುದೀಪ್ ಇಂದಿನ ವಾರದ ಕಥೆ ಕಿಚ್ಚನ ಜತೆ ಸ್ಪರ್ಧಿಗಳಿಗೆ ವಿಶೇಷ ಮನವರಿಕೆ ಕ್ಲಾಸ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.
ಬಿಗ್ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ರೋಚಕ ತಿರುವುಗಳು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಮಧ್ಯೆ ಆರೋಗ್ಯಕರ ಚರ್ಚೆ, ಮಾತುಗಳು ನಡೆಯುವ ಬದಲಿಗೆ ಕೇವಲ ಬೈಗುಳ, ಏಕವಚನದ ಆರ್ಭಟ ಮಾತ್ರ ಕಾಣಿಸುತ್ತಿದೆ. ವಾರವಿಡೀ ವೀಕ್ಷಕರಿಗೆ ತಮ್ಮ ವರ್ತನೆಯಿಂದ ಬೇಸರಗೊಳಿಸಿರುವ ಸ್ಪರ್ಧಿಗಳಿಗೆ ಸುದೀಪ್ ಅವರು ಯಾವ ರೀತಿ ಬುದ್ದಿ ಹೇಳಲಿದ್ದಾರೆ, ಯಾರಿಗೆಲ್ಲಾ ಮನವರಿಕೆ ಮಾಡುತ್ತಾರೆ ಎಂಬುದು ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತಂತೆ ಈಗಾಗಲೇ ಎರಡು ಪ್ರೋಮೋ ಕೂಡ ಹೊರಬಿದ್ದಿದ್ದು, "ಬಳೆ ಬಲಹೀನತೆಯ ಸಂಕೇತನಾ ಅಥವಾ ಬಲಶಾಲಿಯ ಸಂಕೇತನಾ? ಕೆಲವರಿಗೆ ಮನವರಿಕೆ ಮಾಡಬೇಕು" ಎಂದ ಸುದೀಪ್, "ಬಳೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಲವೊಮ್ಮೆ ಸೈಲೆಂಟ್ ಇದ್ರೆ ಒಳ್ಳೇದು ಅನ್ನೋದು ಇದಕ್ಕೇನೆ, ಮಾತಿನ ಮೇಲೆ ನಿಗಾಯಿರಲಿ" ಎಂದು ಹೇಳಿದ್ದಾರೆ. ಒಟ್ಟಾರೆ ವೀಕ್ಷಕರು ಇಂದಿನ ಸಂಚಿಕೆ ನೋಡಲು ಕಾತರದಿಂದ ಕಾಯತೊಡಗಿದ್ದಾರೆ.