More

    ಮೇರಠ್​ನಲ್ಲಿ ಬಾವಲಿಗಳ ಸಾವು ತಂದ ಆತಂಕ

    ಮೇರಠ್​: ಇಲ್ಲಿಗೆ ಸಮೀಪದ ಮೆಹರೋಲಿ ಗ್ರಾಮದ ಕೆರೆಯ ಬಳಿ ಎರಡು ದಿನಗಳ ಅವಧಿಯಲ್ಲಿ 8 ಬಾವಲಿಗಳು ಸತ್ತಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಸತ್ತಿರುವ ಬಾವಲಿಗಳಿಂದ ಕರೊನಾ ಸೋಂಕು ಹರಡಬಹುದು ಎಂಬುದು ಈ ಆತಂಕಕ್ಕೆ ಕಾರಣವಾಗಿದೆ.

    ಆದರೆ, ಏಪ್ರಿಲ್​ 29ರಂದು ಸಂಭವಿಸಿರುವ ಬಾವಲಿಗಳ ಸಾವಿನ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್​ ಮಾರ್ಗದಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್​ ಹರಿದಿದ್ದರಿಂದ ಇವುಗಳು ಸತ್ತಿವೆ ಎಂದು ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್​ಐ) ತಜ್ಞರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ ನಡುವೆ ಘೋರ ದುರಂತ: ಏರುತ್ತಲೇ ಇದೆ ವಿಷಾನಿಲ ಸೋರಿಕೆಯಿಂದ ಮೃತರಾದವರ ಸಂಖ್ಯೆ

    ಇದಕ್ಕೂ ಮುನ್ನ ಕೆರೆಯ ಸುತ್ತಮುತ್ತಲಿರುವ ಹಣ್ಣುಗಳ ತೋಟದಲ್ಲಿ ಫಸಲುಗಳ ರಕ್ಷಣೆಗೆ ಭಾರಿ ಪ್ರಮಾಣದ ಕೀಟನಾಶಕಗಳನ್ನು ಸಿಂಪಡಿಸಿದ್ದು ಬಾವಲಿಗಳ ಸಾವಿಗೆ ಕಾರಣ ಇರಬೇಕು ಎಂದು ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸತ್ತಿರುವ ಬಾವಲಿಗಳ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಐವಿಆರ್​ಐಗೆ ರವಾನಿಸಿದ್ದೆವು. ಆದರೆ, ಅವುಗಳ ಸಾವಿಗೆ ಕೀಟನಾಶಕಗಳು ಕಾರಣವಲ್ಲ. ಬದಲಿಗೆ ವಿದ್ಯುತ್​ ಆಘಾತವೇ ಕಾರಣ ಎಂಬುದು ಸ್ಪಷ್ಟವಾಗಿದೆ. ಇದೀಗ ಆ ಪ್ರದೇಶದಲ್ಲಿ ಯಾವುದಾದರೂ ವಿದ್ಯುತ್​ ಮಾರ್ಗ ಹಾದು ಹೋಗಿದೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಮೇರಠ್​ನ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್​ಒ) ಅದಿತಿ ಶರ್ಮ ಹೇಳಿದ್ದಾರೆ.

    ಆದರೆ, ಬಾವಲಿಗಳು ವಿದ್ಯುತ್​ ಆಘಾತದಿಂದ ಸತ್ತಿವೆ ಎಂಬ ಐವಿಆರ್​ಐ ವಾದವನ್ನು ಒಪ್ಪಲು ಮೆಹರೋಲಿ ಗ್ರಾಮದ ಮುಖ್ಯಸ್ಥ ಗಂಗಾರಾಮ್​ ನಿರಾಕರಿಸಿದ್ದಾರೆ. ಬಾವಲಿಗಳು ಸತ್ತಿರುವ ಪ್ರದೇಶದಿಂದ ಅಂದಾಜು ಅರ್ಧ ಕಿಲೋಮೀಟರ್​ ದೂರದಲ್ಲಿ ವಿದ್ಯುತ್​ ಮಾರ್ಗ ಹಾದು ಹೋಗಿದೆ. ಅವುಗಳು ವಿದ್ಯುತ್​ ಆಘಾತದಿಂದ ಸತ್ತಿದ್ದರೆ, ಈ ಮಾರ್ಗದ ಬಳಿಯೇ ಅವುಗಳ ದೇಹ ಕಾಣಿಸಬೇಕಿತ್ತು. ಅದು ಬಿಟ್ಟು ಅರ್ಧ ಕಿಲೋಮೀಟರ್​ ದೂರದಲ್ಲಿರುವ ಕೆರೆಯ ಬಳಿ ಪತ್ತೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

    ಅಷ್ಟೇ ಅಲ್ಲ, ಸತತ ಎರಡು ದಿನ ಸತ್ತ ಬಾವಲಿಗಳ ದೇಹಗಳು ಪತ್ತೆಯಾಗಿವೆ. ಆದ್ದರಿಂದ, ಈ ಪ್ರಕರಣದ ಬಗ್ಗೆ ಪರಿಪೂರ್ಣ ತನಿಖೆ ಆಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಇದೇ ಸಂದರ್ಭದಲ್ಲಿ ಪಕ್ಷಿ ವೀಕ್ಷರು ಯಾರೋ ಅಪರಿಚಿತರು ಬಾವಲಿಗಳನ್ನು ಸಾಯಿಸಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಕರೊನಾ ವೈರಾಣು ಹರಡಲು ಬಾವಲಿಗಳೇ ಕಾರಣ ಎಂಬುದು ಗೊತ್ತಾದ ನಂತರದಲ್ಲಿ ಅವುಗಳ ವಿರುದ್ಧ ಜನರು ದ್ವೇಷಭಾವನೆ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸಾಯಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts