More

    ಕಬ್ಬಳಿ ಗ್ರಾಮದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

    ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಶ್ರೀ ಬಸವೇಶ್ವರಸ್ವಾಮಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ದೇವಾಲಯಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬಸವೇಶ್ವರಸ್ವಾಮಿಗೆ ಮುಂಜಾನೆಯೇ ಕುಂಕುಮಾರ್ಚಣೆ, ಅಭಿಷೇಕ, ಪಂಚಾಭಿಷೇಕ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಒಡವೆ-ವಸ್ತ್ರಗಳಿಂದ ಅಲಂಕಾರ ಮಾಡಲಾಯಿತು. ರಾತ್ರಿ 7.30ರ ಸುಮಾರಿನಲ್ಲಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ವೈಭವದ ರಥೋತ್ಸವಕ್ಕೆ ಚಾಲನೆ ನೀಡಿದರು.

    ಸಂಪ್ರದಾಯದಂತೆ ಗ್ರಾಮದ ಹಿರಿಯರೊಬ್ಬರು ರಥದ ಎದುರಿನಲ್ಲಿ ನೆಡಲಾಗಿದ್ದ ಬಾಳೆಕಂದನ್ನು ವೀರಕತ್ತಿಯಿಂದ ಕತ್ತರಿಸುತ್ತಿದಂತೆಯೇ ಭಕ್ತರು ಜೈಕಾರದೊಂದಿಗೆ ರಾಜಬೀದಿಯಲ್ಲಿ ರಥ ಎಳೆದರು. ಮಹಿಳೆಯರು ರಥಕ್ಕೆ ಬಾಳೆಹಣ್ಣು, ಹೂ, ಬಿಲ್ವಪತ್ರೆ ಹಾಗೂ ದವನ ಎಸೆದು ಭಕ್ತಿ ಸಮರ್ಪಿಸಿದರು.

    ಸಹಸ್ರ ಈಡುಗಾಯಿ: ಗ್ರಾಮದ ರಾಜಬೀದಿಯಲ್ಲಿ ರಥೋತ್ಸವ ಮುಗಿದ ಬಳಿಕ ಭಕ್ತರು ರಥದ ನಾಲ್ಕೂ ಚಕ್ರಗಳಿಗೆ ಈಡುಗಾಯಿ ಒಡೆಯುವ ಮೂಲಕ ಹರಕೆ ತೀರಿಸಿದರು. 8ರಿಂದ 9 ಗಂಟೆವರೆಗೆ ಸುಮಾರು 8 ರಿಂದ 10 ಸಾವಿರಕ್ಕೂ ಹೆಚ್ಚು ಈಡುಕಾಯಿ ಒಡೆದು ಸಂಭ್ರಮಿಸಿದರು.

    ವಿವಿಧೆಡೆಯಿಂದ ಭಕ್ತರ ಆಗಮನ: ಮಂಡ್ಯ, ತಿಪಟೂರು, ನಾಗಮಂಗಲ, ತುರುವೇಕೆರೆ, ಅರಸೀಕೆರೆ ಸೇರಿದಂತೆ ವಿವಿಧೆಡೆಯಿಂದ ಸುಮಾರು 3 ರಿಂದ 4 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ರಥೋತ್ಸವ ಬಳಿಕ ಸನ್ನಿಧಿಯಲ್ಲಿ ಬಸವೇಶ್ವರಸ್ವಾಮಿಗೆ ಹಣ್ಣು, ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿ ದರ್ಶನ ಪಡೆದು ಪುನೀತರಾದರು. ಉತ್ಸವ ಮುಗಿದ ಬಳಿಕ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

    ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿತು. ದಿಡಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಗುಡಿಗೌಡ ಪ್ರಕಾಶ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts