More

    ಸುಪ್ರೀಂ ತೀರ್ಪಿನಲ್ಲಿ ಬಸವೇಶ್ವರರ ವಚನ; ಮಾತು ಹೇಗಿರಬೇಕೆಂದು ಜನಪ್ರತಿನಿಧಿಗಳಿಗೆ ಸಲಹೆ

    ನುಡಿದರೆ ಮುತ್ತಿನ ಹಾರದಂತಿರಬೇಕು
    ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
    ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು
    ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು…

    ನವದೆಹಲಿ: ಬಸವಣ್ಣನವರ ಈ ವಚನವನ್ನು ತೀರ್ಪಿನಲ್ಲಿ ದಾಖಲಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಜನಪ್ರತಿನಿಧಿಗಳಿಗೆ ಈ ಮೂಲಕ ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.

    ಸಂಸದರು, ಶಾಸಕರು, ಮಂತ್ರಿಗಳು ಸೇರಿದಂತೆ ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿಯಂತ್ರಣ ಹೇರಲು ಸಾಧ್ಯವಿದೆಯೇ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಸಾಂವಿಧಾನಿಕ ಪೀಠದ ಇತರ ನಾಲ್ವರು ಸದಸ್ಯರ ಅಭಿಪ್ರಾಯಕ್ಕೆ ಭಿನ್ನವಾದ ತೀರ್ಪನ್ನು ನ್ಯಾ.ಬಿ.ವಿ. ನಾಗರತ್ನ ಬರೆದಿದ್ದಾರೆ. ಅದರಲ್ಲಿ ಬಸವಣ್ಣನ ವಚನ ಉಲ್ಲೇಖಿಸಿ ಗಮನ ಸೆಳೆದಿದ್ದಾರೆ. ಅಧಿಕ ಮುಖಬೆಲೆಯ ನೋಟುಗಳ ಅಮಾನ್ಯೀಕರಣ ಪ್ರಶ್ನಿಸಿದ ಅರ್ಜಿ ಕುರಿತು ಸೋಮವಾರ ಪ್ರಕಟವಾದ ಇದೇ ಪೀಠದ ತೀರ್ಪಿನಲ್ಲೂ ಭಿನ್ನ ತೀರ್ಪು ದಾಖಲಿಸಿದ್ದರು.

    ಇತರ ನ್ಯಾಯಮೂರ್ತಿಗಳ ಅಭಿಪ್ರಾಯ: ಪೀಠದ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಎ.ಎಸ್.ಬೋಪಣ್ಣ, ಬಿ.ಆರ್. ಗವಾಯಿ, ವಿ. ರಾಮಸುಬ್ರಹ್ಮಣ್ಯಂ ಸಾಮೂಹಿಕ ಹೊಣೆಗಾರಿಕೆಯ ಸಂದರ್ಭದಲ್ಲಿ ಓರ್ವ ಸಚಿವರ ಹೇಳಿಕೆಯನ್ನು ಸರ್ಕಾರದ ಅಭಿಪ್ರಾಯವೆಂದು ಹೇಳಲಾಗದು ಎಂದಿದ್ದಾರೆ.

    ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು ಸಂವಿಧಾನದ ಪರಿಚ್ಛೇದ 19 (2)ರ ಅಡಿಯಲ್ಲಿ ಸೂಚಿಸಲಾದ ಮಿತಿಯಲ್ಲೇ ಇರುತ್ತದೆ. ಹೆಚ್ಚುವರಿ ನಿಯಂತ್ರಣ ಹೇರಲು ಸಾಧ್ಯವಿಲ್ಲ. ಆರ್ಟಿಕಲ್ 19(2)ರ ಪ್ರಕಾರ ಹೆಚ್ಚುವರಿ ನಿರ್ಬಂಧ ಹೇರುವ ಕಾನೂನನ್ನು ಸರ್ಕಾರ ಮಾಡಬಹುದೇ ಹೊರತು ನ್ಯಾಯಾಲಯವಲ್ಲ ಎಂದು ಹೇಳಿದ್ದಾರೆ.

    ನ್ಯಾ.ನಾಗರತ್ನ ಹೇಳಿದ್ದೇನು?

    ದ್ವೇಷದ ಮಾತುಗಳು ಸಂವಿಧಾನದ ಮೂಲಮೌಲ್ಯಗಳಿಗೆ ಧಕ್ಕೆ ಮಾಡುತ್ತವೆ ಮತ್ತು ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಅತ್ಯಗತ್ಯ ಹಕ್ಕು. ಭಾಷಣ, ಮಾತುಗಳ ಮೂಲಕ ದೇಶದ ಜನರಿಗೆ ಆಡಳಿತದ ಬಗ್ಗೆ ಉತ್ತಮ ತಿಳಿವಳಿಕೆ, ಮಾಹಿತಿ ನೀಡಬೇಕೆ ಹೊರತು, ಅದು ದ್ವೇಷದ ಭಾಷಣವಾಗಬಾರದು. ದ್ವೇಷದ ಮಾತುಗಳು ನಾಗರಿಕರ ಮೇಲೆ ಆಕ್ರಮಣ ಮಾಡುತ್ತವೆ. ವಿಶೇಷವಾಗಿ ಭಾರತದಂಥ ವೈವಿಧ್ಯಮಯ ಧರ್ಮ, ಜಾತಿಗಳಿರುವ ದೇಶದಲ್ಲಿ ಮಹಿಳೆ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಘನತೆ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯ. ಭಾಷಣ ಅಥವಾ ಹೇಳಿಕೆ ನೀಡುವಾಗ ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವವರು ಬಹಳ ಎಚ್ಚರಿಕೆ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಸಚಿವರ ಆಕ್ಷೇಪಾರ್ಹ ಹೇಳಿಕೆಗಳಿಗೆ ಸರ್ಕಾರ ಜವಾಬ್ದಾರಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನ್ಯಾ. ನಾಗರತ್ನ, ಸಚಿವರು ವೈಯಕ್ತಿಕ ನೆಲೆಯಲ್ಲಿ ಹೇಳಿಕೆ ನೀಡಿದರೆ, ಅದಕ್ಕೆ ಸರ್ಕಾರವನ್ನು ಹೊಣೆ ಮಾಡಲಾಗದು. ಆದರೆ, ಹೇಳಿಕೆ ಅಧಿಕೃತ ನೆಲೆಯಲ್ಲಿದ್ದು, ಅವಹೇಳನಕಾರಿ ಆಗಿದ್ದರೆ, ಅದು ಸಾಮೂಹಿಕ ಜವಾಬ್ದಾರಿಯ ತತ್ವಕ್ಕೆ ಸಂಬಂಧಿಸಿದ್ದಾಗಿರುತ್ತದೆ ಮತ್ತು ಸರ್ಕಾರ ಹೊಣೆ ಹೊರಬೇಕಾಗುತ್ತದೆ. ಹೇಳಿಕೆ ಸರ್ಕಾರದ ಒಟ್ಟಾರೆ ನಿಲುವಿಗೆ ಹೊಂದಿಕೆಯಾಗದಿದ್ದಾಗ ವೈಯಕ್ತಿಕ ಟೀಕೆ ಎನ್ನಬೇಕಾಗುತ್ತದೆ ಎಂದು ತೀರ್ಪಿನಲ್ಲಿ ದಾಖಲಿಸಿದ್ದಾರೆ.

    ಪ್ರಕರಣದ ಹಿನ್ನೆಲೆ

    2016ರಲ್ಲಿ ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಾಯಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಕುರಿತು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿಕೆ ನೀಡಿ, ಇದು ರಾಜಕೀಯ ಪಿತೂರಿ ಮತ್ತು ಪ್ರಚಾರಕ್ಕಾಗಿ ಸಂತ್ರಸ್ತರು ತಮಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆಂದು ಟೀಕಿಸಿದ್ದರು. ನಂತರ ಬಾಲಕಿ ತಂದೆ ಸಿಬಿಐ ತನಿಖೆಗೆ ಒತ್ತಾಯಿಸಿ, ರಾಜ್ಯದ ಹೊರಗಿನವರು ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದರು. ಅಜಂ ಖಾನ್ ಹೇಳಿಕೆಯಿಂದ ನಮ್ಮ ಕುಟುಂಬದ ಪ್ರತಿಷ್ಠೆ ಮತ್ತು ನ್ಯಾಯಯುತ ವಿಚಾರಣೆಯ ನಿರೀಕ್ಷೆ ತಗ್ಗಿಸಿದೆ ಎಂದು ಬಾಲಕಿ ತಂದೆ ದೂರಿದ್ದರು. ಇದಕ್ಕೆ ಅವರು ಬೇಷರತ್ ಕ್ಷಮೆಯಾಚಿಸಿದ್ದರೂ, ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯಕ್ಕೆ ಮಿತಿ ಇರಬೇಕು ಎಂದು ವಾದಿಸಿದ ಹಿನ್ನೆಲೆಯಲ್ಲಿ ಈ ಕುರಿತ ಹಲವು ಪ್ರಶ್ನೆಗಳ ಬಗ್ಗೆ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts