More

    ಬಸವಣ್ಣ ಮಾನವನ ಏಳಿಗೆಗೆ ಶ್ರಮಿಸಿದ ಮಾನವತಾವಾದಿ: ಶ್ರೀಜಯರಾಜೇಂದ್ರ ಸ್ವಾಮಿ ಬಣ್ಣನೆ

    ಮೈಸೂರು: ಜನರನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ ಮಹಾನ್ ದಾರ್ಶನಿಕ ಬಸವಣ್ಣನವರು ಎಂದು ಸುತ್ತೂರು ಮಠದ ಕಿರಿಯ ಶ್ರೀಗಳಾದ ಶ್ರೀಜಯರಾಜೇಂದ್ರ ಸ್ವಾಮಿ ಬಣ್ಣಿಸಿದರು.
    ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಅವರು ಮಾತನಾಡಿದರು.
    ಬಸವಣ್ಣನವರು ಮಾನವ ಏಳಿಗೆಗೆ ಶ್ರಮಿಸಿದ ಮಹಾನ್ ಮಾನವತಾವಾದಿ. ದೇಶದಲ್ಲಿ ಅನೇಕ ಸಂತರು, ಮಹಾತ್ಮರು, ಶರಣರು, ದಾಸವರಣ್ಯೇರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಜನರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅಂತಹವರಲ್ಲಿ ಬಸವಣ್ಣನವರು ಅಗ್ರಗಣ್ಯರು ಎಂದರು.
    ಭೂಮಿಯ ಮೇಲೆ ಮನುಷ್ಯ ಜನ್ಮ ತಾಳುವುದು ಬಹು ದೊಡ್ಡದು. ಭಗವಂತ ಮನುಷ್ಯನಿಗೆ ಅಪರೂಪದ ಮಾತನಾಡುವ ಕಲೆಯನ್ನು ನೀಡಿದ್ದಾನೆ. ಮಾತನ್ನು ಹೇಗೆ ಬಳಸಬೇಕು ಎನ್ನುವುದನ್ನು ಬಸವಣ್ಣನವರು ತಮ್ಮ ವಚನದಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು. ಅಂತರಂಗದಲ್ಲಿರುವ ಮಾತೇ ಬಹಿರಂಗದಲ್ಲೂ ಬರಬೇಕು. ನಡೆ ಮತ್ತು ನುಡಿ ಎರಡು ಒಂದೇ ಆಗಿರಬೇಕು. ಯಾರನ್ನೋ ಮೆಚ್ಚಿಸಲು ಮಾತನಾಡದೇ ನಮ್ಮ ಅಂತರಂಗ ಒಪ್ಪಿಕೊಳ್ಳುವ ಮಾತಗಳನ್ನಾಡಬೇಕು ಎಂದು ಅರ್ಥಗರ್ಭಿತವಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
    ಲಕ್ಕರಸನಪಾಳ್ಯ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಹೇಮಂತಕುಮಾರ್ ಸ್ವಾಮಿ ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಬಿತ್ತಿದ ಮಹಾತ್ಮರು ಬಸವಣ್ಣನವರು. ಯಾವುದೇ ಜಾತಿ, ಮತ, ವರ್ಣ, ಲಿಂಗ ಭೇದಗಳಿಲ್ಲದೆ ಮನುಷ್ಯರೆಲ್ಲರೂ ಒಂದೇ ಎಂದು ಸಾರಿದರು. ದೇವರು ಬೇರೆಲ್ಲೂ ಇಲ್ಲ, ನಮ್ಮೊಳಗೆಯೇ ಇದ್ದಾನೆ ಎಂಬುದನ್ನು ಅರುಹಿದ್ದಾರೆ ಎಂದು ತಿಳಿಸಿದರು.
    ಭದ್ರಾವತಿ ಬಿಳಕಿ ಹಿರೇಮಠದ ಶ್ರೀಗುರುಪ್ರಸಾದ ದೇವರು, 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ವಚನ ಕ್ರಾಂತಿ 21ನೇ ಶತಮಾನದ ಜೀವನದ ಎಲ್ಲ ಜಂಜಾಟಗಳಿಗೂ ಪರಿಹಾರವನ್ನು ಒದಗಿಸುತ್ತಿವೆ. ಬಸವಾದಿ ಶರಣರ ವಚನಗಳು ಸಾರ್ವಕಾಲಿಕವಾದವು. ವ್ಯಕ್ತಿಗಿಂತ ವ್ಯಕ್ತಿತ್ವದ ಪೂಜೆ ಮುಖ್ಯ. ಭಾವಚಿತ್ರವನ್ನು ಪೂಜಿಸುವುದರ ಜತೆಗೆ ಅವರ ಚರಿತ್ರೆಯನ್ನು ಪೂಜಿಸಬೇಕು. ಗುರುಹಿರಿಯರನ್ನು ಗೌರವಿಸಬೇಕು. ಅಂತರಂಗ ಮತ್ತು ಬಹಿರಂಗ ಎರಡು ಒಂದೇ ತೆರನಾಗಿರಬೇಕು ಎಂದು ಹೇಳಿದರು.
    ಶ್ರೀಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪಾಂಜಲಿ ಸಲ್ಲಿಸಲಾಯಿತು. ಕೆ.ಜಿ. ವಿನುತಾ ಮತ್ತು ಸುಮಂಗಲ ಜಂಗಮಶೆಟ್ಟಿ ಅವರು ವಚನಗಾಯನ ನಡೆಸಿಕೊಟ್ಟರು. ಗೋಡೆಕೆರೆ ಶ್ರೀಸ್ಥಿರ ಪಟ್ಟಾಧ್ಯಕ್ಷರ ಮಠದ ಶ್ರೀಸಿದ್ಧೇಶ ದೇವರು, ಕುಮಾರಸ್ವಾಮಿ ವಿರಕ್ತಮಠ, ಗುರುಕುಲ ಸಾಧಕರು, ಸೇವಾ ಸಿಬ್ಬಂದಿ ಭಕ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts