More

  ಅಹಂಕಾರ ತೊರೆದರೆ ಅಂತರಂಗ ಶುದ್ಧಿ

  ಶಿವಮೊಗ್ಗ: ಬಸವಣ್ಣನ ಆಶಯದಂತೆ ಅಹಂಕಾರ ತೊರೆದು ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕಿದೆ. ಅಹಂಕಾರ ಮತ್ತು ಗರ್ವ ತೊರೆದಾಗ ಮಾತ್ರ ಶರಣರ ಹಾದಿಯಲ್ಲಿ ನಡೆಯಲು ಸಾಧ್ಯ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಹೇಳಿದರು.

  ಶ್ರೀ ಗುರುಬಸವ ಸ್ವಾಮೀಜಿಗಳ 109ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಹಾಗೂ ಭಾವೈಕ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಉಣಬಡಿಸುವ ಕಾಯಕ ನಿರಂತರವಾಗಬೇಕಿದ್ದು ಮುಂದಿನ ಪೀಳಿಗೆಗೂ ಶರಣರ ಆಚಾರ-ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.

  ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಶರಣರ ಕೊಡುಗೆ ಅಪಾರ. ಶರಣರ ಸಮ್ಮಿಲನದೊಂದಿಗೆ ಸಮಾಜದ ಅಂಕು ಡೊಂಕು ತಿದ್ದಬೇಕಿದೆ. ಬೇರೆಯವರ ಡೊಂಕು ತಿದ್ದುತ್ತೇವೆ ಎಂಬ ಭ್ರಮೆಗೆ ಒಳಗಾಗದೇ ತಮ್ಮಲ್ಲಿರುವ ತಪ್ಪು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

  ಬಿಇಒ ಪಿ.ನಾಗರಾಜ್ ಮಾತನಾಡಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿ ಬಸವ ತತ್ವಗಳಲ್ಲಿದ್ದು ಸಾಮಾಜಿಕ, ಆರ್ಥಿಕ ಜವಾಬ್ದಾರಿ, ಮಾನವೀಯತೆ, ಸಮಾನತೆ, ದಕ್ಷತೆಯನ್ನು ಒಳಗೊಂಡಿರಬೇಕಾಗುತ್ತದೆ. ಆಗ ಶರಣ ಸಾಹಿತ್ಯದ ತಳಹದಿ ಮೇಲೆ ಸದೃಢ ಸಮಾಜ ನಿರ್ಮಾಣ ಆಗಲಿದೆ ಎಂದರು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕವಲೇದುರ್ಗದ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಜಗತ್ತಿಗೆ ಲಿಂಗ ಭೋಗಗಳನ್ನು ತೋರಿಸಿಕೊಟ್ಟಿದ್ದೇ ಶರಣರು ಎಂದರು.

  ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ.ರಾಜಶೇಖರ್, ಗುರುಬಸವ ಗದ್ದಿಗೆ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ವಿ.ಮಹೇಶ್ವರಪ್ಪ ಮಾತನಾಡಿದರು. ಗುತ್ತಲ ಕಲ್ಮಠದ ಶ್ರೀ ಪ್ರಭು ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹಾರನಹಳ್ಳಿ ಆನಂದಪುರ ಶಾಖಾ ಚೌಕಿಮಠದ ಶ್ರೀ ನೀಲಕಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

  ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶೂನ್ಯ ಪೀಠಾರೋಹಣ ನೆರವೇರಿತು. ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ಅಧ್ಯಕ್ಷೆ ಎಸ್.ವೈ.ಅರುಣಾದೇವಿ, ಉಪಾಧ್ಯಕ್ಷೆ ಶಕುಂತಲಾ ಜಗದೀಶ್, ಪ್ರಧಾನ ಕಾರ್ಯದರ್ಶಿ ಶಾಂತಾ ಆನಂದ್ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts