More

    ಪರಿಷೆಯಲ್ಲಿ ಮಂಗಳವಾರವೂ ಜನಸಾಗರ

    ಬೆಂಗಳೂರು: ಬಸವನಗುಡಿಯಲ್ಲಿ ಆರಂಭವಾಗಿರುವ ಕಡಲೆಕಾಯಿ ಪರಿಷೆಯಲ್ಲಿ ಮಂಗಳವಾರವೂ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಕಡಲೆಕಾಯಿ ಸೇರಿ ವ್ಯಾಪಾರ ವಹಿವಾಟು ಬಿರುಸಾಗಿ ಸಾಗಿತ್ತು.

    ಈ ಬಾರಿ 6 ಲಕ್ಷಕ್ಕೂ ಅಧಿಕ ಮಂದಿ ಪರಿಷೆಗೆ ಭೇಟಿ ನೀಡಿದ್ದು, ಕೋಟ್ಯಂತರ ರೂ. ವಹಿವಾಟು ನಡೆದಿದೆ. ಎರಡು ದಿನಗಳ ಪರಿಷೆಗೆ ಮಂಗಳವಾರ ತೆರೆ ಬೀಳಲಿದೆ. ಅದಾಗ್ಯೂ ವ್ಯಾಪಾರ ಚಟುವಟಿಕೆಗಳು ನಡೆಯುವುದರಿಂದ ಮುಂದಿನ 3-4 ದಿನಗಳ ಕಾಲ ಪರಿಷೆ ವಾತಾವರಣ ಕಾಣಬಹುದು. ಇನ್ನು ಕಡೆಯ ಕಾರ್ತೀಕ ಸೋಮವಾರದಂದು ಪರಿಷೆಗೆ ಅಧಿಕೃತ ಚಾಲನೆ ದೊರೆಯಿತಾದರೂ, ವಾರಾಂತ್ಯ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

    ರಾಮಕೃಷ್ಣ ಆಶ್ರಮದ ವೃತ್ತದಿಂದ ಹಿಡಿದು ಎನ್‌ಆರ್ ಕಾಲನಿವರೆಗಿನ ರಸ್ತೆ ತುಂಬ ವ್ಯಾಪಾರ ವಹಿವಾಟು ಜೋರಾಗಿತ್ತು. ಪುಟ್ಟಮಕ್ಕಳ ದೃಷ್ಟಿ ಬಲೂನು, ಮಿಠಾಯಿ ಕಡೆ ಹಾಯ್ದರೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಬಜ್ಜಿ, ಬೊಂಡ, ಕಬ್ಬಿನಹಾಲು, ಗೋಬಿ ಮಂಚೂರಿ, ಬೇಲ್ ಪುರಿ, ಮಸಾಲೆಪುರಿ ಅಂಗಡಿಗಳ ಮುಂದೆ ನಿಂತು ಬಾಯಿ ಚಪ್ಪರಿಸುತ್ತ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಪರಿಷೆಯಲ್ಲಿ ಗೃಹಾಲಂಕಾರಿಕ ವಸ್ತುಗಳಿಗೆ ಮನಸೋತ ಮಹಿಳೆಯರು ಬಾಗಿಲು, ಕಿಟಕಿ, ಗೋಡೆಗಳನ್ನು ಅಲಂಕರಿಸುವ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಯುವತಿಯರು ಉಡುಗೆ ತೊಡುಗೆಯೊಂದಿಗೆ ಬಳೆ, ಸರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಕೊಳ್ಳುವುದರಲ್ಲಿ ಮಗ್ನರಾಗಿದ್ದರು.

    ಶಾಲಾ- ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗಿದ್ದ ಮಂದಿ ಸಂಜೆ ಕುಟುಂಬ ಸಮೇತರಾಗಿ ಪರಿಷೆಗೆ ಆಗಮಿಸಿದ್ದರಿಂದ ಸಂಜೆಯಾಗುತ್ತಲೇ ವ್ಯಾಪಾರ ಮತ್ತಷ್ಟು ಚುರುಕಾಯಿತು. ರಾಮಕೃಷ್ಣ ಆಶ್ರಮದಿಂದ ಎಪಿಎಸ್ ಕಾಲೇಜು ರಸ್ತೆ, ಕಹಳೆಬಂಡೆ ರಸ್ತೆಯಿಂದ ಡಿವಿಜಿ ರಸ್ತೆ, ಗೋಕುಲ ಇನ್‌ಸ್ಟಿಟ್ಯೂಟ್ ಸಮೀಪವಿರುವ ಮಲ್ಲಿಕಾರ್ಜುನ ದೇವಸ್ಥಾನದ ರಸ್ತೆ, ಹನುಮಂತನಗರ 50 ಅಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮೌಂಟ್‌ಜಾಯ್ ರಸ್ತೆಗಳ ಇಕ್ಕೆಲಗಳಲ್ಲಿ ವ್ಯಾಪಾರ ಬಿರುಸಾಗಿತ್ತು. ಪರಿಷೆಗೆ ಆಗಮಿಸಿದ್ದ ಮಂದಿ ಸಂಜೆ ಬ್ಯೂಗಲ್ ರಾಕ್ ಉದ್ಯಾನದಲ್ಲಿ ಹಾಗೂ ನರಸಿಂಹಸ್ವಾಮಿ ಉದ್ಯಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು.

    ಭದ್ರತೆ ಹಾಗೂ ಮೂಲಸೌಕರ್ಯ: ಪರಿಷೆ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳಿಂದ ಭದ್ರತೆ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಪರಿಷೆ ಆಚರಣೆಗಾಗಿ ಬುಲ್‌ಟೆಂಪಲ್ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಿಸಲಾಗಿತ್ತು. ವ್ಯಾಪಾರಿಗಳಿಗೆ, ಜನರಿಗೆ ಪೂರಕ ವಾತಾವರಣ ಕಲ್ಪಿಸಲಾಗಿತ್ತು. ಪರಿಷೆಗೆ ಬಂದವರು ದೊಡ್ಡ ಗಣಪತಿ, ದೊಡ್ಡ ಬಸವಣ್ಣ ದೇವರ ದರ್ಶನ ಪಡೆದು, ಕಡಲೆಕಾಯಿ ಕೊಂಡಿದ್ದಲ್ಲದೆ, ಆಟಿಕೆ, ಗೃಹಾಲಂಕಾರ ವಸ್ತುಗಳ ವ್ಯಾಪಾರದಲ್ಲಿ ತೊಡಗಿದ್ದುದು ಸಾಮಾನ್ಯವಾಗಿತ್ತು.

    ಪ್ಲಾಸ್ಟಿಕ್ ಮುಕ್ತ ಪರಿಷೆ: ಪ್ರತಿ ಬಾರಿ ಪರಿಷೆ ನಡೆಯುವಾಗಲೂ ಆಯೋಜಕರು ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಸುವುದಾಗಿ ಹೇಳಿಕೆ ನೀಡುತ್ತಿದ್ದರು. ಅದರಂತೆ ಪಾಲಿಕೆ ಅಧಿಕಾರಿಗಳು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬಹುತೇಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗಿತ್ತು. ಹೀಗಾಗಿ ಬಹುತೇಕರು ಪೇಪರ್ ಹಾಗೂ ಬಟ್ಟೆ ಬ್ಯಾಗ್‌ಗಳನ್ನು ಕೊಡುತ್ತಿದ್ದರು. ಕೆಲ ಗ್ರಾಹಕರು ಮನೆಯಿಂದಲೇ ಬ್ಯಾಗ್‌ಗಳನ್ನು ತಂದಿದ್ದರು. ಹಾಗಾಗಿ ಪರಿಷೆಯಲ್ಲಿ ಈ ಬಾರಿ ಅಷ್ಟಾಗಿ ಪ್ಲಾಸ್ಟಿಕ್ ಬಳಕೆ ಕಂಡುಬರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts