More

    ಬಸರಾಳಿನಲ್ಲಿ ವಿನಾಯಕನ ವಿಸರ್ಜನೆ ಸಂಭ್ರಮ: ಮಿನಿ ದಸರಾದಂತೆ ನಡೆದ ಧಾರ್ಮಿಕ ಕಾರ್ಯಕ್ರಮ

    ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ವಾಟರ್‌ಟ್ಯಾಂಕ್ ಬಳಿ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು. ಸುಮಾರು ಏಳು ಗಂಟೆಗಳ ಕಾಲ ವಿಜೃಂಭಣೆಯಿಂದ ಮಿನಿ ದಸರಾದಂತೆ ಮೆರವಣಿಗೆ ನಡೆಯಿತು.
    ಪ್ರತಿಷ್ಠಾಪನೆಯ 21 ದಿನದ ಬಳಿಕ ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ವಿಸರ್ಜನೆ ನಡೆಯಿತು. ಬೆಳಗ್ಗೆ 11ಗಂಟೆಗೆ ಗಣಪತಿ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿದ್ದ ವಾಹನಕ್ಕೆ ತಂದು ಕೂರಿಸಲಾಯಿತು. ಬಳಿಕ ಕೇರಳದ ಮಹಿಳಾ ಚೆಂಡೆ ಮದ್ದಳೆ, ಮಂಗಳೂರಿನ ಕೀಲು ಕುದುರೆ ಮತ್ತು ಬೆದರು ಬೊಂಬೆ, ಬೆಂಗಳೂರಿನ ಮಹಿಳಾ ವಾದ್ಯ ವೃಂದ ಸೇರಿದಂತೆ ಹತ್ತಕ್ಕೂ ಹೆಚ್ಚು ವಿವಿಧ ಬಗೆಯ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು.
    ಗ್ರಾಮದ ಮುತ್ತೇಗೆರೆ ರಸ್ತೆಯಿಂದ ಮಂಡ್ಯ ನಾಗಮಂಗಲ ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಯಿತು. ರಸ್ತೆಯುದ್ದಕ್ಕೂ ಕೇಸರಿ ಧ್ವಜ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಯುವಕರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಇವರಿಗೆ ರಾಜಕೀಯ ಮುಖಂಡರು ಸಾಥ್ ನೀಡಿದರು. ದಾರಿಯುದ್ದಕ್ಕೂ ಮಹಿಳೆಯರು, ಯುವತಿಯರು ರಸ್ತೆ ಇಕ್ಕೆಲ್ಲದಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್, ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್, ಸಮಾಜ ಸೇವಕ ಕೆ.ಕೆ.ರಾಧಾಕೃಷ್ಣ ಕೀಲಾರ, ಡಾ.ಕೃಷ್ಣ, ಅಮರಾವತಿ ಚಂದ್ರಶೇಖರ್, ಚಿದಾನಂದ ಇತರರು ಪಾಲ್ಗೊಂಡಿದ್ದರು. ತೇರುಬೀದಿ ಮುಖಾಂತರ ಸಂಜೆ 6 ಗಂಟೆಗೆ ದೊಡ್ಡಕೆರೆಯಲ್ಲಿ ಭಾರಿ ಜನಸ್ತೋಮದ ನಡುವೆ ಗಣಪತಿಯನ್ನು ವಿಸರ್ಜಿಸಲಾಯಿತು. ನೆರದಿದ್ದ ಎಲ್ಲರಿಗೂ ಅನ್ನದಾಸೋಹ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts