More

    ಪಂಜಾಬ್‌ಗೆ ಸೋಲುಣಿಸಿ ದೇಶೀಯ ಟಿ20 ಟೂರ್ನಿಯ ಫೈನಲ್‌ಗೇರಿದ ಬರೋಡ

    ಅಹಮದಾಬಾದ್: ನಾಯಕ ಕೇದಾರ್ ದೇವಧರ್ (64 ರನ್, 49 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಕಾರ್ತಿಕ್ ಕಾಕಡೆ (53*ರನ್, 41 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬರೋಡ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು 25 ರನ್‌ಗಳಿಂದ ಮಣಿಸಿದೆ. ಈ ಮೂಲಕ ಬರೋಡ ಟೂರ್ನಿಯಲ್ಲಿ 4ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮಾಜಿ ಚಾಂಪಿಯನ್‌ಗಳಾದ ತಮಿಳುನಾಡು ಮತ್ತು ಬರೋಡ ತಂಡಗಳು ಮುಖಾಮುಖಿಯಾಗಲಿವೆ. ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ದೇಶೀಯ ಕ್ರಿಕೆಟ್ ಟೂರ್ನಿ ಇದಾಗಿದೆ.

    ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನ ಎನಿಸಿರುವ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬರೋಡ ತಂಡ 3 ವಿಕೆಟ್‌ಗೆ 160 ರನ್ ಗಳಿಸಿತು. ನಿನಾದ್ ರತ್ವ (15) ಹಾಗೂ ಕಳೆದ ಪಂದ್ಯದ ಹೀರೋ ವಿಷ್ಣು ಸೋಲಂಕಿ(12) ನಿರಾಸೆ ನಡುವೆಯೂ ಹಂಗಾಮಿ ನಾಯಕ ದೇವಧರ್ ಹಾಗೂ ಕಾರ್ತಿಕ್ ಕಾಕಡೆ ಜೋಡಿ 3ನೇ ವಿಕೆಟ್‌ಗೆ 93 ರನ್ ಜತೆಯಾಟವಾಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಪ್ರತಿಯಾಗಿ ಪಂಜಾಬ್ 8 ವಿಕೆಟ್‌ಗೆ 135 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಮಂದೀಪ್ ಸಿಂಗ್ (42* ರನ್, 24 ಎಸೆತ, 3 ಬೌಂಡರಿ, 3 ಸಿಕ್ಸರ್) ಕೊನೆಯ ಹಂತದವರೆಗೂ ಹೋರಾಟ ನಡೆಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

    ಇದನ್ನೂ ಓದಿ: ಇಂಗ್ಲೆಂಡ್‌ನ ಈ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್ ಸಿಡಿಸಿದರೆ 5 ರನ್ ದಂಡ!

    ಲೀಗ್ ಹಂತದಲ್ಲಿ ಕರ್ನಾಟಕ ತಂಡವನ್ನು ಒಳಗೊಂಡ ಎ ಗುಂಪಿನಲ್ಲಿ ಎಲ್ಲ 5 ಪಂದ್ಯ ಗೆದ್ದು ಬೀಗಿದ್ದ ಪಂಜಾಬ್ ತಂಡ ಬಳಿಕ ಕ್ವಾರ್ಟರ್​ಫೈನಲ್‌ನಲ್ಲೂ ಕರುಣ್ ನಾಯರ್ ಪಡೆಯನ್ನು ಮಣಿಸಿತ್ತು. ಆದರೆ ಬರೋಡ ತಂಡದ ಆಲ್ರೌಂಡ್ ನಿರ್ವಹಣೆ ಎದುರು ಪಂಜಾಬ್ ಆಟ ನಡೆಯಲಿಲ್ಲ. ತಂದೆಯ ನಿಧನದಿಂದಾಗಿ ನಾಯಕ ಕೃನಾಲ್ ಪಾಂಡ್ಯ ಲೀಗ್ ಹಂತದಲ್ಲಿ 3ನೇ ಪಂದ್ಯದ ಬಳಿಕ ಬರೋಡ ತಂಡವನ್ನು ತ್ಯಜಿಸಿದ್ದರು. ಉಪನಾಯಕ ದೀಪಕ್ ಹೂಡ ಕೂಡ ಶಿಸ್ತುಕ್ರಮದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದರ ನಡುವೆಯೂ ಬರೋಡ ತಂಡದ ಯುವ ಆಟಗಾರರು ದಿಟ್ಟ ನಿರ್ವಹಣೆ ತೋರಿದರು.

    ಬರೋಡ ತಂಡ ಈ ಮುನ್ನ 2011-12, 2013-14ರಲ್ಲಿ ಫೈನಲ್‌ಗೇರಿ ಪ್ರಶಸ್ತಿ ಜಯಿಸಿದ್ದರೆ, 2015-16ರಲ್ಲಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ತಮಿಳುನಾಡು ತಂಡ 2006-07ರ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ್ದರೆ, 2019-20ರ ಸಾಲಿನಲ್ಲಿ ಅಂದರೆ ಕಳೆದ ವರ್ಷ ಕರ್ನಾಟಕ ತಂಡದೆದುರು ರೋಚಕ ಸೋಲು ಕಂಡು ರನ್ನರ್‌ಅಪ್ ಸ್ಥಾನ ಪಡೆದಿತ್ತು.

    ಬರೋಡ: 3 ವಿಕೆಟ್‌ಗೆ 160 (ಕೇದಾರ್ ದೇವಧರ್ 64, ಕಾರ್ತಿಕ್ ಕಾಕಡೆ 53*, ಸಂದೀಪ್ ಶರ್ಮ 35ಕ್ಕೆ 1, ಸಿದ್ದಾರ್ಥ್ ಕೌಲ್ 31ಕ್ಕೆ 1, ಮಯಾಂಕ್ ಮಾರ್ಕಂಡೆ 29ಕ್ಕೆ 1). ಪಂಜಾಬ್: 8 ವಿಕೆಟ್‌ಗೆ 135 (ಗುರುಕೀರತ್ 39, ಮಂದೀಪ್ ಸಿಂಗ್ 42*, ಮೆರಿವಾಲಾ 28ಕ್ಕೆ 3, ರಥ್ವ 18ಕ್ಕೆ 2).

    *ಭಾನುವಾರ ಫೈನಲ್ ಪಂದ್ಯ
    ತಮಿಳುನಾಡು-ಬರೋಡ
    ಆರಂಭ: ರಾತ್ರಿ 7.00
    ಎಲ್ಲಿ: ಅಹಮದಾಬಾದ್
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿದ ತಮಿಳುನಾಡು ತಂಡ

    ಸಚಿನ್, ಕೊಹ್ಲಿ ಬಳಿಕ ಈ ಹೊಸ ಬ್ಯಾಟ್ಸ್‌ಮನ್ ಬ್ಯಾಟ್ ಪ್ರಾಯೋಜಕತ್ವಕ್ಕೆ ಎಂಆರ್‌ಎಫ್​ ಸಿದ್ಧತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts