More

    ಪಾಳು ಬಿದ್ದಿದೆ ಬಾರಕೂರು ಕ್ವಾಟ್ರರ್ಸ್, ಪಶು ಆಸ್ಪತ್ರೆಯಾಗಿಸಲು ಗ್ರಾಮಸ್ಥರ ಆಗ್ರಹ

    -ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
    ಸರ್ಕಾರಿ ಸ್ವತ್ತುಗಳು, ವ್ಯವಸ್ಥೆಗಳು ಹೇಗಿರುತ್ತದೆ ಎನ್ನುವುದಕ್ಕೆ ಬಾರಕೂರು ಆರೋಗ್ಯ ಕೇಂದ್ರದ ವೈದ್ಯರ ವಸತಿ ನಿಲಯ ಸಾಕ್ಷಿ ನುಡಿಯುತ್ತಿದೆ.

    ಬಾರಕೂರು ಮಂದಾರ್ತಿ ರಸ್ತೆಯ ಬದಿಯಲ್ಲೇ ಕಾಣುವ ಈ ಸರ್ಕಾರಿ ಕ್ವಾಟ್ರರ್ಸ್ ಭೂತ ಬಂಗಲೆಯಂತಿದೆ. ಶೌಚಗೃಹ, ಉತ್ತಮ ಬಾಗಿಲುಗಳು ಎಲ್ಲವೂ ಇದ್ದು ನಿರ್ವಹಣೆ ಇಲ್ಲದೆ ಹಾಳು ಬಿದ್ದಿದೆ.
    ಇದರ ಬದಿಯಲ್ಲಿ ಒಂದು ಬೃಹತ್ ಮರ ಬೆಳೆದಿದ್ದು, ಅದರಿಂದ ಬಿದ್ದ ರೆಂಬೆ ಕೊಂಬೆಗಳಿಂದ ಕೆಲವು ಭಾಗದ ಹಂಚು ಮುರಿದು ಬಿದ್ದಿದೆ. ಮಾಡಿನ ಮೇಲೆ ಆಳೆತ್ತರದ ಹುಲ್ಲು ಬೆಳೆದಿದೆ. ಎದುರು ಭಾಗದ ಬಾಗಿಲು ಹಾಳಾಗಿದ್ದು ವ್ಯಕ್ತಿಗಳು ಒಳಗಡೆ ಹೋಗಲು ಸಾಧ್ಯವಾಗುವಷ್ಟು ತೆರೆದುಕೊಂಡಿದ್ದು ರಾತ್ರಿಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ನೀಡುವಂತಿದೆ.

    ಹಿಂದೆ ಇಲ್ಲಿನ ಆಸ್ಪತ್ರೆಗೆ ಬಂದ ವೈದ್ಯರು ವಾಸ ಮಾಡಿದ್ದು, ಸದ್ಯ ಹತ್ತು ವರ್ಷದಿಂದ ಇಲ್ಲಿ ಯಾರೂ ವಾಸ್ತವ್ಯ ಮಾಡದ ಕಾರಣ ಈ ಸರ್ಕಾರಿ ಸಂಪತ್ತಿಗೆ ಕೇಳುವವರು ಇಲ್ಲದಂತಾಗಿದೆ. ಬಾರಕೂರಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಬೇಕು ಎನ್ನುವ ಇಲ್ಲಿನ ಹೈನುಗಾರರ ಮನವಿಗೆ ಇದನ್ನು ಪಶು ಆಸ್ಪತ್ರೆಯಾಗಿಸಿದಲ್ಲಿ ಇಲ್ಲಿನ ಹೈನುಗಾರರಿಗೆ ಅನುಕೂಲವಾಗಬಹುದು.

    ಈ ಕ್ವಾಟ್ರರ್ಸ್‌ನ ಬದಿಯಲ್ಲಿ 30 ಸೆನ್ಸ್‌ನಷ್ಟು ಸರ್ಕಾರಿ ಖಾಲಿ ಜಾಗ ಇದ್ದು, ಇಲ್ಲಿರುವ ಕಟ್ಟಡಕ್ಕೆ ಇಲಾಖೆ, ಪ್ರತಿನಿಧಿಗಳು ಸೂಕ್ತ ಕಾಯಕಲ್ಪ ಮಾಡಿದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಬಹುದು.

    ಬಾರಕೂರಿನಲ್ಲಿ ಪಶು ಆಸ್ಪತ್ರೆಗೆ ಸೂಕ್ತ ಸ್ಥಳ ಇಲ್ಲದ ಕಾರಣ ಇದನ್ನು ಸರಿಪಡಿಸಿ ಪಶು ಆಸ್ಪತ್ರೆ ಮಾಡಿದಲ್ಲಿ ಈ ಭಾಗದ ಹೈನುಗಾರರಿಗೆ ಉಪಯುಕ್ತವಾಗುತ್ತದೆ.
    -ಮಂಜಯ್ಯ ಹೆಗ್ಡೆ, ಚಾಂಪಾಡಿ ಬಾರಕೂರು

    1993ರಲ್ಲಿ ಬಾರಕೂರಿಗೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಮಂಜೂರಾಗಿದೆ. ಸ್ಥಳ ಇಲ್ಲದ ಕಾರಣ ಹಾಗೇ ಇದೆ. ಕಂದಾಯ ಇಲಾಖೆ ಜಾಗ ನೀಡಿದಲ್ಲಿ ಪಶು ಆಸ್ಪತ್ರೆಗೆ ಉಪಯೋಗವಾಗುತ್ತಿತ್ತು.
    -ಡಾ.ಎಸ್.ಮಹೇಶ್ ಶೆಟ್ಟಿ, ಸಹಾಯಕ ನಿರ್ದೇಶಕರು ಪಶುವೈದ್ಯಕೀಯ ಆಸ್ಪತ್ರೆ ಬ್ರಹ್ಮಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts