More

    ದ.ಕ. ಕರೊನಾ ಕೇಂದ್ರವಾದ ಬಂಟ್ವಾಳ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಸತತ ನಾಲ್ಕು ಪ್ರಕರಣಗಳು ಈಗ ಬಂಟ್ವಾಳದಿಂದಲೇ ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯ ಕರೊನಾ ಹಾಟ್‌ಸ್ಪಾಟ್ ಆಗಿ ಬಂಟ್ವಾಳ ಗುರುತಿಸಲ್ಪಟ್ಟಿದೆ.

    ಮಂಗಳೂರು ವೆನ್ಲಾಕ್ ಕೊವಿಡ್ ಆಸ್ಪತ್ರೆಯಲ್ಲಿ ಬಂಟ್ವಾಳದ ಕಸಬಾ ನಿವಾಸಿ 68 ವರ್ಷದ ಮಹಿಳೆ (ರೋಗಿ ಸಂಖ್ಯೆ 409) ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿದ್ದಾರೆ. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದ್ದು, ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಈ ಮಹಿಳೆಯ ನಿಕಟ ಸಂಪರ್ಕದಲ್ಲಿದ್ದ ಅವರ 33 ವರ್ಷದ ಮಗಳಲ್ಲಿಯೂ ಈ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

    ಜಿಲ್ಲೆಯಲ್ಲಿ ಅತಿ ಹೆಚ್ಚು ಎಂದರೆ 6 ಪ್ರಕರಣಗಳು ಬಂಟ್ವಾಳ ತಾಲೂಕಿಗೆ ಸಂಬಂಧಿಸಿದವು. ಬಂಟ್ವಾಳ ತಾಲೂಕು ತುಂಬೆಯ ಯುವಕ ಹಾಗೂ ಸಜಿಪನಡುವಿನ 10 ತಿಂಗಳ ಮಗು ಈ ಮೊದಲು ಪಾಸಿಟಿವ್ ಆಗಿ, ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆ ಬಳಿಕ ಬಂಟ್ವಾಳ ಪೇಟೆಯ ನಿವಾಸಿ 50 ವರ್ಷದ ಮಹಿಳೆ ಹಾಗೂ ಅವರ ಬಂಧುವಾಗಿರುವ ನೆರೆಮನೆಯ ಮಹಿಳೆ ದಾಖಲಾಗಿದ್ದರು, ಆ ಇಬ್ಬರಿಗೂ ಕರೊನಾ ದೃಢಪಟ್ಟಿತ್ತು, ಅದರಲ್ಲಿ 50 ವರ್ಷದ ಮಹಿಳೆ ಮೃತಪಟ್ಟರು. ಎರಡು ದಿನದಲ್ಲಿ ಪಾರ್ಶ್ವವಾಯುವಿಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 75 ವರ್ಷದ ವೃದ್ಧೆ (ಮಹಿಳೆಯ ಅತ್ತೆ) ಕೂಡ ಪಾಸಿಟಿವ್ ಆಗಿ ಮೃತಪಟ್ಟರು.

    ಈ ಮೂಲಕ ಒಂದೇ ಕುಟುಂಬದಲ್ಲಿ ಎರಡು ಸಾವು ಸಂಭವಿಸಿದೆ, ಅದೇ ಪಕ್ಕದ ಮನೆಯ ಇಬ್ಬರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಎನ್‌ಐಟಿಕೆಯಲ್ಲಿ ನಿಗಾವಣೆಯಲ್ಲಿದ್ದಾರೆ.

    ಜಿಲ್ಲೆಯಲ್ಲಿ ಇದುವರೆಗೆ ವರದಿಯಾಗಿರುವ 18 ಪ್ರಕರಣಗಳಲ್ಲಿ 1 ಭಟ್ಕಳ, 4 ಕಾಸರಗೋಡು, 1 ಕಾರ್ಕಳ, 1 ತೊಕ್ಕೊಟ್ಟು, 1 ತುಂಬೆ, 1 ಸಜಿಪ, 1 ಪುತ್ತೂರು, 1 ಸುಳ್ಯ, 2 ಉಪ್ಪಿನಂಗಡಿ, 1 ಕರಾಯ ಹಾಗೂ 4 ಬಂಟ್ವಾಳ ಪೇಟೆ ಸೇರಿವೆ. ಇದರಲ್ಲಿ ಬಂಟ್ವಾಳದ 2, ಉಪ್ಪಿನಂಗಡಿಯ ದಂಪತಿ ಸೇರಿ ನಾಲ್ವರು ಮಾತ್ರವೇ ಆಸ್ಪತ್ರೆಯಲ್ಲಿದ್ದು ಉಳಿದವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

    89 ವರದಿ ನೆಗೆಟಿವ್:  ಶನಿವಾರ 78 ಮಂದಿಯ ತಪಾಸಣೆ ನಡೆಸಲಾಗಿದೆ, 49 ಮಂದಿ ಎನ್‌ಐಟಿಕೆಯಲ್ಲಿ ನಿಗಾವಣೆಯಲ್ಲಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿದ್ದ 10 ಮಂದಿಯನ್ನು ಡಿಸ್‌ಚಾರ್ಜ್ ಮಾಡಲಾಗಿದ್ದು, ಅಲ್ಲಿ ಯಾವುದೇ ಶಂಕಿತರು ಇರುವುದಿಲ್ಲ. 6073 ಮಂದಿ 28 ದಿನಗಳ ನಿಗಾವಣೆ ಪೂರ್ತಿಗೊಳಿಸಿದ್ದಾರೆ.

    211 ಮಂದಿಯ ಸ್ಯಾಂಪಲ್‌ಗಳನ್ನು ಶನಿವಾರ ಕಳುಹಿಸಿದೆ, 90ರ ವರದಿ ಬಂದಿದ್ದು, 1 ಪಾಸಿಟಿವ್, 89 ನೆಗೆಟಿವ್ ಆಗಿರುತ್ತದೆ. 1406 ಮಂದಿಗೆ ಫೀವರ್ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ನೀಡಲಾಗಿದೆ. 42 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ಹೆಚ್ಚಿನ ಭೀತಿ ಇಲ್ಲ: ಬಂಟ್ವಾಳದಿಂದಾಗಿ ಇನ್ನಷ್ಟು ಪ್ರಕರಣಗಳು ಹಬ್ಬಬಹುದೇ ಎನ್ನುವ ಆತಂಕ ಒಂದೆಡೆ ಇದೆ. ಬಂಟ್ವಾಳ ತಾಲೂಕಿನವರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಸದ್ಯದ ಮಾಹಿತಿ ಪ್ರಕಾರ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಕಾರಣ ಈಗ ಪಾಸಿಟಿವ್ ಆಗಿರುವವರ ಸಂಪರ್ಕದಲ್ಲಿದ್ದ ಎಲ್ಲರ ಸ್ಯಾಂಪಲ್ ವರದಿಯೂ ಬಂದಿದ್ದು, ನೆಗೆಟಿವ್ ಆಗಿದೆ. ಶನಿವಾರ ಕರೊನಾ ದೃಢಪಟ್ಟ ಮಹಿಳೆಯ ಮಗುವಿನ ವರದಿಯೂ ನೆಗೆಟಿವ್ ಬಂದಿದೆ. ಸದ್ಯ ನೆಗೆಟಿವ್ ಇದ್ದರೂ ಅವರೆಲ್ಲರೂ 14 ದಿನಗಳ ನಿಗಾವಣೆಯಲ್ಲಿ ಎನ್‌ಐಟಿಕೆಯಲ್ಲಿ ಇರಬೇಕಾಗುತ್ತದೆ.

    ಮಂಗಳೂರು ನಗರ ಸೇಫ್: ದ.ಕ. ಜಿಲ್ಲೆಯಲ್ಲಿ 18 ಪ್ರಕರಣಗಳು ವರದಿಯಾಗಿದ್ದರೂ, ಇಷ್ಟೂ ಮಂದಿಗೆ ನಗರ ಮಧ್ಯದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೂ ಇದುವರೆಗೆ ಅತ್ಯಧಿಕ ಜನ ಸಾಂಧ್ರತೆ ಇರುವ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕರೊನಾ ಸೋಂಕು ಇಲ್ಲದಿರುವುದು ಮಹತ್ವದ ಅಂಶ. ವೈದ್ಯಕೀಯ ಸಿಬ್ಬಂದಿಯೂ ಸುರಕ್ಷಿತವಾಗಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ.

    ಕಾಸರಗೋಡಲ್ಲಿ ಹೊಸ ಪ್ರಕರಣವಿಲ್ಲ: ಕಾಸರಗೋಡು: ಕೇರಳದಲ್ಲಿ ಶನಿವಾರ ಮತ್ತೆ ಏಳು ಮಂದಿಯಲ್ಲಿ ಕೊವಿಡ್-19 ವೈರಸ್ ಕಾಣಿಸಿಕೊಂಡಿದೆ. ಇವರಲ್ಲಿ ತಲಾ ಮೂವರು ಕೊಟ್ಟಾಯಂ ಮತ್ತು ಕೊಲ್ಲಂ ಹಾಗೂ ಒಬ್ಬರು ಕಣ್ಣೂರು ಜಿಲ್ಲೆಯವರು. ರಾಜ್ಯದಲ್ಲಿ ಶನಿವಾರ ಏಳು ಮಂದಿ ವೈರಸ್‌ನಿಂದ ಮುಕ್ತಿ ಪಡೆದಿದ್ದಾರೆ. ಇವರಲ್ಲಿ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡಿನ ತಲಾ ಇಬ್ಬರು ಹಾಗೂ ವಯನಾಡಿನ ಒಬ್ಬರು ಒಳಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಹೊಸ ಪ್ರಕರಣ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ವೈರಸ್ ಬಾಧಿತರ ಸಂಖ್ಯೆ 457ಕ್ಕೇರಿದ್ದು, ಇವರಲ್ಲಿ 331 ಮಂದಿ ಗುಣಮುಖರಾಗಿದ್ದಾರೆ. 116 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 15 ಮಂದಿ ಮಾತ್ರ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 142 ಮಂದಿ ಗುಣಮುಖರಾಗಿದ್ದಾರೆ.

    ಬಂಟ್ವಾಳದಲ್ಲಿ ವಾಹನ ದಟ್ಟಣೆ: ಬಂಟ್ವಾಳ: ತಾಲೂಕು ಪರಿಸರದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಾಹನಗಳು ಏಕಾಏಕಿ ರಸ್ತೆಗಿಳಿದಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು.

    ಕ್ಷುಲ್ಲಕ ಕಾರಣಕ್ಕೆ ರಿಕ್ಷಾ, ದ್ವಿಚಕ್ರ ವಾಹನ, ಕಾರು ಮತ್ತಿತರ ಖಾಸಗಿ ವಾಹನಗಳಲ್ಲಿ ಜನ ಬೀದಿ ತಿರುಗಾಟಕ್ಕೆ ಇಳಿದಿದ್ದು, ಆತಂಕಕ್ಕೆ ಕಾರಣವಾಗಿತ್ತು. ಬಂಟ್ವಾಳ ನಗರ ಠಾಣಾ ಎಸ್‌ಐ ಅವಿನಾಶ್ ಗೌಡ ನೇತೃತ್ವದಲ್ಲಿ ಪೊಲೀಸರು ಬಿ.ಸಿ.ರೋಡಿನ ಮುಖ್ಯವೃತ್ತ ಬಳಿ ಬ್ಯಾರಿಕೇಡ್ ಇಟ್ಟು ಅನಗತ್ಯವಾಗಿ ವಾಹನದಲ್ಲಿ ತಿರುಗಾಟ ನಡೆಸುವರನ್ನು ವಾಪಸ್ ಮನೆಗೆ ಕಳುಹಿಸಿದರು. ಇನ್ನೂ ಕೆಲವು ವಾಹನಗಳನ್ನು ವಶಕ್ಕೆ ಪಡೆದರು.

    ಹಸಿರು ವಲಯಗಳಲ್ಲಿ ವಿನಾಯಿತಿ ಘೋಷಿಸಿರುವುದನ್ನು ತಿಳಿದು ಜನ ಇಲ್ಲಿಯೂ ತಮ್ಮ ವಾಹನಗಳಲ್ಲಿ ನಗರದತ್ತ ಮುಖ ಮಾಡಿದ್ದರು. ಡಿಸೇಲ್ ಹಾಕಲಿದೆ, ಗ್ಯಾಸ್ ತರಲಿದೆ, ಹೀಗೆ ಕ್ಷುಲಕ ಕಾರಣಗಳನ್ನು ಹೇಳಿಕೊಂಡು ತಿರುಗಾಟ ಆರಂಭಿಸಿದ್ದರು. ಇದರಿಂದಾಗಿ ಬಿ.ಸಿ.ರೋಡು ಸರ್ಕಲ್ ಬಳಿ ವಾಹನ ದಟ್ಟಣೆ ಉಂಟಾಯಿತು.

    ನರ್ಸ್ ಕ್ವಾರಂಟೈನ್: ವಿಟ್ಲ: ಮಂಗಳೂರಿನಲ್ಲಿ ಸೀಲ್‌ಡೌನ್‌ಗೆ ಒಳಗಾದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ್ದ ವಿಟ್ಲ ಮೂಲದ ನರ್ಸ್ ಒಬ್ಬರನ್ನು ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮನೆಯವರನ್ನು ಮನೆಯಲ್ಲೇ ಕ್ವಾರಂಟೈನ್‌ಗೊಳಿಸಿದ್ದು, ಸಂಪರ್ಕಕ್ಕೆ ಬಂದವರೂ ಸ್ವಯಂಪ್ರೇರಿತವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

    25 ವಾಹನ ಮುಟ್ಟುಗೋಲು: ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 25 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಶನಿವಾರ ಮುಟ್ಟುಗೋಲು ಹಾಕಿದ್ದಾರೆ. ಈ ಪೈಕಿ 21 ದ್ವಿಚಕ್ರ ವಾಹನ, 1 ತ್ರಿಚಕ್ರ ವಾಹನ ಹಾಗೂ 3 ಚತುಶ್ಚಕ್ರ ವಾಹನಗಳಾಗಿರುತ್ತವೆ. ಶುಕ್ರವಾರ 88 ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts