More

    ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಗ್ರಾಮೀಣರ ನೆರವಿಗೆ ಬ್ಯಾಂಕ್‌ಮಿತ್ರ

    ತುಮಕೂರು: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಗ್ರಾಮೀಣರ ರಕ್ಷಣೆಗೆ ಸರ್ಕಾರ ವಿವಿಧ ಯೋಜನೆಯಲ್ಲಿ ಸಹಾಯಧನ ಬಿಡುಗಡೆ ಮಾಡಿದ್ದು, ಜನರು ನಗರ, ಪಟ್ಟಣ ಪ್ರದೇಶಗಳಿಗೆ ತೆರಳಿ ಹಣ ಬಿಡಿಸಿಕೊಳ್ಳುವುದು ಹಾಗೂ ಬ್ಯಾಂಕ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿದೆ.

    ಇದನ್ನು ಮನಗಂಡ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್ ಗ್ರಾಮೀಣ ಭಾಗದಲ್ಲಿ ‘ಬ್ಯಾಂಕ್‌ಮಿತ್ರ’ರನ್ನು ಚುರುಕಾಗಿಸುವ ಕೆಲಸ ಶುರುವಿಟ್ಟುಕೊಂಡಿದ್ದಾರೆ. ಜನಧನ ಖಾತೆಗಳಿಗೆ ತಲಾ 500 ರೂ., ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕಂತಿನ ಹಣ 2000 ರೂ., ರಾಗಿ ಖರೀದಿಯ ಹಣ, ಗ್ಯಾಸ್ ಸಬ್ಸಿಡಿ ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಬ್ಯಾಂಕ್ ಖಾತೆಗಳಿಗೆ ಬರಲಾರಂಭಿಸಿದ್ದು, ಜನರು ಮುಗಿಬೀಳಲಾರಂಭಿಸಿದ್ದಾರೆ.

    ಬ್ಯಾಂಕ್‌ಗಳು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯ ಕೆಲಸವಾಗಿದೆ. ಹಾಗಾಗಿ, ಪ್ರತಿದಿನ 100 ಜನರಿಗೆ ಹಣ ಬಿಡುಗಡೆಮಾಡಿಕೊಳ್ಳಲು ಅವಕಾಶ ಮಾಡಲಾಗಿದ್ದು ಟೋಕನ್ ಪಡೆದು ಹಣ ಪಡೆಯಬೇಕಿದೆ. ತುರ್ತು ಸಂದರ್ಭದಲ್ಲಿರುವ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಬ್ಯಾಂಕ್‌ಗಳು ಸರ್ಕಾರೇತರ ಸಂಸ್ಥೆಗಳ ಉಸ್ತುವಾರಿಯಲ್ಲಿ ನೇಮಿಸಿಕೊಂಡಿರುವ ‘ಬ್ಯಾಂಕ್‌ಮಿತ್ರ’ರು ಖಾತೆದಾರರ ವಿವರ ಪಡೆದು ಸುಸೂತ್ರವಾಗಿ ಹಣ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು ಅವರೆಲ್ಲರನ್ನೂ ಸಕ್ರಿಯಗೊಳಿಸಲಾಗಿದೆ. ಲೀಡ್ ಬ್ಯಾಂಕ್ ವ್ಯವಸ್ಥಾಪಕರೇ ಹಳ್ಳಿಗಳಿಗೆ ತೆರಳಿ ಬ್ಯಾಂಕ್‌ಮಿತ್ರರ ಕೆಲಸವನ್ನು ವೀಕ್ಷಿಸುತ್ತಿದ್ದಾರೆ.

    ಸ್ಯಾನಿಟೈಸರ್‌ಗೆ ಹಣ: ಬ್ಯಾಂಕ್ ಮಿತ್ರರು ಖಾತೆದಾರರ ಬಯೋಮೆಟ್ರಿಕ್ ಖಾತ್ರಿ ಪಡೆಯುವುದರಿಂದ ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಿಕೊಳ್ಳಲು ಬ್ಯಾಂಕ್‌ಗಳು ಮುಂದಾಗಿವೆ. ಮಿತ್ರರಿಗೆ ಮಾಸಿಕ 1300ರೂ.,ಗಳನ್ನು ಸ್ಯಾನಿಟೈಸರ್ ಖರೀದಿಗಾಗಿಯೇ ನೀಡಲಾಗುತ್ತಿದೆ. ಸಾಮಾಜಿಕ ಅಂತರದ ಜತೆ ಹಣ ಪಡೆದ ಪ್ರತಿಯೊಬ್ಬರೂ ಎರಡು, ಮೂರು ಸಲ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯ ಮಾಡಲಾಗಿದೆ.

    ರೈತರ ಮೇಲೆ ರಾಗಿ ವ್ಯಾಪಾರಿಗಳ ಒತ್ತಡ!: ಬ್ಯಾಂಕ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವ ಹಿಂದೆ ದಲ್ಲಾಳಿಗಳು ರೈತರ ಮೇಲೆ ತಂದಿರುವ ಒತ್ತಡ ಕಾರಣ ಎನ್ನಲಾಗಿದೆ. ಸರ್ಕಾರ ರಾಗಿ ಖರೀದಿ ಮಾಡುವಾಗ ಪಹಣಿಯಲ್ಲಿ ರಾಗಿ ನಮೂದಾಗಿರಬೇಕು ಎಂದು ಷರತ್ತು ವಿಧಿಸಿದ್ದರಿಂದ ರೈತರಿಂದ ಕಡಿಮೆ ಬೆಲೆಗೆ ರಾಗಿ ಕೊಂಡು ವಿಶ್ವಾಸಾರ್ಹ ರೈತರ ಹೆಸರಿನಲ್ಲಿ ಎಪಿಎಂಸಿ ಅಧಿಕಾರಿಗಳ ಜತೆ ಶಾಮೀಲಾಗಿ ನೆಡ್‌ನಲ್ಲಿ ರಾಗಿ ಮಾರಾಟ ಮಾಡಿದ್ದಾರೆ. ಈಗ ಹಣವನ್ನು ಶೀಘ್ರವಾಗಿ ಬಿಡಿಸಿಕೊಂಡು ಕಸಿದುಕೊಳ್ಳಲು ರೈತರ ಹಿಂದೆ ಬಿದ್ದಿರುವ ದಲ್ಲಾಳಿಗಳೇ ರೈತರನ್ನು ಬ್ಯಾಂಕ್‌ಗಳಿಗೆ ಕರೆತಂದು ದಿನಪೂರ್ತಿ ಕಾಯುವಂತೆ ಮಾಡುತ್ತಿದ್ದಾರೆ.

    ಈ ಸಂಕಷ್ಟದ ಸಮಯದಲ್ಲಿ ಜನರಿಗೆ ತುರ್ತಾಗಿ ಹಣ ಸಿಕ್ಕರೆ ಅವರ ಬದುಕಿಗೆ ನೆರವಾಗುತ್ತದೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ಬರುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ 300 ‘ಬ್ಯಾಂಕ್ ಮಿತ್ರ’ರ ಮೂಲಕ ಖಾತೆದಾರರಿಗೆ ಹಣ ಬಿಡಿಸಿಕೊಳ್ಳಲು ನೆರವಾಗಲಾಗಿದೆ. ಇದರ ಮೇಲ್ವಿಚಾರಣೆಯನ್ನು ನಾನೇ ವಹಿಸಿಕೊಂಡಿದ್ದು, ಜಿಲ್ಲೆಯೆಲ್ಲೆಡೆ ಪ್ರವಾಸ ಕೈಗೊಂಡಿದ್ದು ದೂರುಗಳಿದ್ದಲ್ಲಿ ಸ್ಥಳದಲ್ಲೇ ಬಗೆಹರಿಸುತ್ತೇನೆ.
    ಜ್ಯೋತಿಗಣೇಶ್ ವ್ಯವಸ್ಥಾಪಕ ಲೀಡ್ ಬ್ಯಾಂಕ್

    ವಾಣಿಜ್ಯ ಬ್ಯಾಂಕ್‌ಗಳು ಜನಸ್ನೇಹಿ ಎನ್ನಿಸಿಕೊಂಡಿದ್ದು ಕಡಿಮೆ, ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಲು ಲೀಡ್ ಬ್ಯಾಂಕ್ ‘ಬ್ಯಾಂಕ್‌ಮಿತ್ರ’ರನ್ನು ಸಕ್ರಿಯಗೊಳಿಸಿರುವುದು ಪ್ರಶಂಸನಾರ್ಹ. ಇವರಲ್ಲಿ ಸದಾ ಕಾಲ ಕ್ಯಾಷ್ ಲಭ್ಯವಿರುವಂತೆ ಸೂಚನೆ ನೀಡಬೇಕು. ಹಣ ಬಿಡಿಸಿಕೊಳ್ಳುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅಗತ್ಯ ಕ್ರಮವಹಿಸಬೇಕು.
    ಎಚ್.ದೇವರಾಜು ಕಡಬ
    ಗುಬ್ಬಿ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts