More

    ಬ್ಯಾಂಕ್ ಖಾಸಗೀಕರಣ ಜನವಿರೋಧಿ ನೀತಿ: ರಾಮನಗರದಲ್ಲಿ ಲೀಡ್ ಬ್ಯಾಂಕ್ ಎದುರು ನೌಕರರ ಪ್ರತಿಭಟನೆ

    ರಾಮನಗರ: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ವಿವಿಧ ಬ್ಯಾಂಕ್‌ಗಳ ಸಿಬ್ಬಂದಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ರಾಷ್ಟ್ರೀಕೃತ ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಕರ್ತವ್ಯಕ್ಕೆ ಗೈರಾದ ನೌಕರರು ನಗರದ ಲೀಡ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ, ಲಾಭದಲ್ಲಿರುವ ಹಾಗೂ ಸಾಮಾನ್ಯ ಜನರಿಗೆ ನೆರವಾಗುತ್ತಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ನೌಕರರು ಒತ್ತಾಯಿಸಿದರು.

    ಕೇಂದ್ರ ಸರ್ಕಾರ ದೇಶದ ನಾಗರಿಕರ ಕಲ್ಯಾಣಕ್ಕಾಗಿ ರೂಪಿಸುತ್ತಿರುವ ಹಲವಾರು ಯೋಜನೆಗಳ ಅನುಷ್ಠಾನದ ಹೊರೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊತ್ತಿವೆ. ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಬಡವರಿಗೆ ತಲುಪಿಸುತ್ತಿವೆ. ಖಾಸಗಿ ಬ್ಯಾಂಕ್‌ಗಳು ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಇಚ್ಛಾಶಕ್ತಿ ತೋರುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿರುವುದು ಜನವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.

    ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ ಪ್ರಮುಖ ಉದ್ದೇಶ ಬಡವರಿಗೆ, ದೀನ ದಲಿತರಿಗೆ ಹಾಗೂ ಯುವ ಜನರು, ರೈತರಿಗೆ ಆರ್ಥಿಕ ಸಹಾಯ ಒದಗಿಸುವುದಾಗಿದೆ. ಬಡವರು ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಸ್ವಉದ್ಯೋಗ ಕಲ್ಪಿಸಿಕೊಳ್ಳುವುದರ ಜತೆಗೆ ದೇಶದ ಅಭಿವೃದ್ಧಿಯಲ್ಲಿ ಅವರ ಪಾಲು ಇರಬೇಕೆಂಬುದಾಗಿದೆ. ಈಗಾಗಲೇ ಈ ಕಾರ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ರೈತರು, ಹಿಂದುಳಿದ ವರ್ಗಗಳು, ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂಬ ಯುವಕರಿಗೆ, ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡುತ್ತಿವೆ. ಖಾಸಗೀಕರಣವಾದರೆ ಈ ಯೋಜನೆಗಳ ಅನುಷ್ಠಾನಕ್ಕೆ ಖಾಸಗಿ ಬ್ಯಾಂಕ್‌ಗಳು ಆಸಕ್ತಿ ತೋರುವುದಿಲ್ಲ ಎಂದರು.

    ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದಿಂದ ಸಾಮಾನ್ಯ ಜನರಿಗೆ ಭಾರಿ ತೊಂದರೆಯಾಗಲಿದೆ. ರಾಮನಗರ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 2350 ಫಲಾನುಭಗಳಿಗೆ ಸಾಲ ನೀಡಬೇಕಾಗಿತ್ತು. ಈ ಎಲ್ಲ ಫಲಾನುಭಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳೇ ಸಾಲ ನೀಡಿವೆ. ಈ ಯೋಜನೆಯಡಿ ಓರ್ವ ಫಲಾನುಭವಿಗೂ ಖಾಸಗಿ ಬ್ಯಾಂಕ್‌ಗಳು ಸಾಲ ನೀಡಿಲ್ಲ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಬಿಇಎಫ್‌ಐ ಸದಸ್ಯರಾದ ವೆಂಕಟೇಶ್, ಜಗನ್ನಾಥ್, ಪ್ರದೀಪ್ ಸೇರಿ ನಗರದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಪಾಲ್ಗೊಂಡಿದ್ದರು.

    ಕರೊನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ಭಾರಿ ನಷ್ಟ ಅನುಭವಿಸಿದ್ದರು, ಇಂತಹ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ 10775 ಕೋವಿಡ್ ಸಾಲ ವಿತರಿಸಬೇಕೆಂದು ಆದೇಶ ಹೊರಡಿಸಿತ್ತು. ಇಲ್ಲಿಯೂ ಸಹ ಯಾವುದೇ ಖಾಸಗಿ ಬ್ಯಾಂಕ್‌ಗಳು ಒಬ್ಬ ರೈತನಿಗೂ ಸಾಲ ನೀಡಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳೇ 10775 ಮಂದಿಗೆ ಸಾಲ ನೀಡಿವೆ. ಖಾಸಗಿ ಬ್ಯಾಂಕ್‌ಗಳು ಕೇವಲ ಶ್ರೀಮಂತರಿಗೆ ಸಾಲ ನೀಡಲು ಮೀಸಲಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡವರ ಪರವಾಗಿವೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗಿಕರಣ ಮಾಡಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts