More

    ಕೈ ತೆಕ್ಕೆಗೆ 3 ಕ್ಷೇತ್ರ, ಅರಳಿದ ಕಮಲ, ನೆಲೆ ಕಳೆದುಕೊಂಡ ಜೆಡಿಎಸ್

    ಹ್ಯಾಟ್ರಿಕ್ ಕನಸಿಗೆ ಮುಖಭಂಗ ಹೊಸ ಮುಖಗಳಿಗೆ ಮಣೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

    ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಕೈ ಹಿಡಿದಿರುವ ಮತದಾರ, ಒಂದರಲ್ಲಿ ಕಮಲ ಅರಳಿಸಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಂತೆ ಮಾಡಿದ್ದಾನೆ. ನಾಲ್ಕು ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದ ನಾಲ್ವರು ಶಾಸಕರಲ್ಲಿ ಮೂವರಿಗೆ ಕೊಕ್ ಕೊಟ್ಟಿರುವ ಮತದಾರ ಪ್ರಭು ಹೊಸ ಮುಖಗಳಿಗೆ ಮಣೆ ಹಾಕಿದ್ದಾನೆ.
    ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಹರಸುವ ಮೂಲಕ ಕಮಲ ಖಾತೆ ತೆರೆಯಲು ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ. ಹ್ಯಾಟ್ರಿಕ್ ಗೆಲುವಿಗೆ ಹಂಬಲಿಸುತ್ತಿದ್ದ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ಶಾಸಕರ ಕನಸನ್ನು ನುಚ್ಚುನೂರು ಮಾಡಿದ್ದಾರೆ. 10 ವರ್ಷ ನೆಲಮಂಗಲದಲ್ಲಿ ಅಧಿಪತ್ಯ ಸಾಧಿಸಿದ್ದ ಜೆಡಿಎಸ್ ಸುಲಭವಾಗಿ ಸೋಲಿಗೆ ಶರಣಾಗಿದ್ದರೆ, ಅದೇ ರೀತಿ 10 ವರ್ಷ ದೊಡ್ಡಬಳ್ಳಾಪುರದಲ್ಲಿ ಅಧಿಕಾರ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಎದುರಿಸಿದೆ. ಕಳೆದ ಬಾರಿ ನಾಲ್ಕು ತಾಲೂಕುಗಳಲ್ಲಿ ಎರಡರಲ್ಲಿ ಕಾಂಗ್ರೆಸ್ ಮತ್ತೆರಡರಲ್ಲಿ ಜೆಡಿಎಸ್ ಅಧಿಕಾರಕ್ಕೆ ಅನುವು ಮಾಡಿಕೊಟ್ಟಿದ್ದ ಮತದಾರರು ಈ ಬಾರಿ ಜೆಡಿಎಸ್ ನೆಲೆ ಕಸಿದುಕೊಂಡು ಮೂರರಲ್ಲಿ ಕಾಂಗ್ರೆಸ್‌ಗೆ ಪಟ್ಟ ಕಟ್ಟಿದ್ದಾರೆ. ಜಿಲ್ಲೆಯಲ್ಲಿ ನೆಲೆಗಾಗಿ ತಿಣುಕಾಡುತ್ತಿದ್ದ ಬಿಜೆಪಿಗೆ ಈ ಬಾರಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆೆ. ಕಳೆದೆರಡು ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಹೊಸಕೋಟೆಯಲ್ಲಿ ಕಮಲ ಅರಳಿಸುವ ಕಸರತ್ತಿಗೆ ಬ್ರೇಕ್ ಹಾಕಿದ್ದಾರೆ.

    ದೊಡ್ಡಬಳ್ಳಾಪುರದಲ್ಲಿ ಕಮಲ ಕಮಾಲ್: ಪ್ರಭಾವಿ ಶಾಸಕ ಕಾಂಗ್ರೆಸ್‌ನ ವೆಂಕಟರಮಣ್ಯ ಹಾಗೂ ಮೂರು ಬಾರಿ ಪರಾಭವಗೊಂಡು ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದ ಜೆಡಿಎಸ್‌ನ ಮುನೇಗೌಡರ ವಿರುದ್ಧ ಸೆಣಸಾಟದಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಧೀರಜ್ ಮುನಿರಾಜು ಜಿಲ್ಲೆಯ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸ್ವ ಪಕ್ಷೀಯದವರ ವಿರೋಧದ ನಡುವೆಯೂ ಟಿಕೆಟ್ ದಕ್ಕಿಸಿಕೊಂಡು ಅಖಾಡಕ್ಕಿಳಿದ ಧೀರಜ್ ಮುನಿರಾಜು ವರ್ಚಸ್ಸು ಕ್ಷೇತ್ರದ ಮತದಾರರನ್ನು ಸೆಳೆಯುವಲ್ಲಿ ಕಮಾಲ್ ಮಾಡಿದೆ. ಮೂಲ ಹಾಗೂ ವಲಸಿಗ ಎಂಬ ತಿಕ್ಕಾಟದ ನಡುವೆಯೂ ಪಕ್ಷ ಸಂಘಟನೆಯಲ್ಲಿ ಯಶ ಕಂಡ ಬಿಜೆಪಿ ಅಭ್ಯರ್ಥಿ ಎರಡೂ ಪ್ರಬಲ ಎದುರಾಳಿಗಳ ಎದುರು ಸುಲಭವಾಗಿ ವಿಜಯ ಸಾಧಿಸುವ ಮೂಲಕ ದಾಖಲೆ ಮಾಡಿದ್ದಾರೆ.

    ನೆಲಮಂಗಲದಲ್ಲಿ ಕಾಂಗ್ರೆಸ್ ಪಟ್ಟು: ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎದುರಾದಂತೆ ಕಂಡುಬಂದರೂ ಬಿಜೆಪಿ ಹಾಗೂ ಜೆಡಿಎಸ್‌ಗೆ ಸೋಲಿನ ರುಚಿ ತೋರಿಸಿದ ಕಾಂಗ್ರೆಸ್ ಅಭ್ಯರ್ಥಿ ಎನ್.ಶ್ರೀನಿವಾಸ್ ಭರ್ಜರಿ ಗೆಲವು ಸಾಧಿಸಿದ್ದಾರೆ. 10 ವರ್ಷದ ಜೆಡಿಎಸ್ ಅಧಿಕಾರವನ್ನು ಕೊನೆಗಾಣಿಸಿ, ಕಮಲಕ್ಕೂ ಒಳೇಟು ನೀಡುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

    ದೇವನಹಳ್ಳಿಯಲ್ಲಿ ಮುನಿಯಪ್ಪ ಶೋ: ಸ್ವಪಕ್ಷೀಯರ ವಿರೋಧದ ನಡುವೆ ದಿಢೀರ್ ಬದಲಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಲಿಟ್ಟ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಪ್ರಬಲ ಪ್ರತಿಸ್ಪರ್ಧಿಯಾದ ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿಗೆ ಸುಲಭವಾಗಿ ನೀರು ಕುಡಿಸಿದ್ದಾರೆ. ಇಲ್ಲಿ ಬಿಜೆಪಿಯ ಪಿಳ್ಳ ಮುನಿಶಾಮಪ್ಪ ಯಾವುದೇ ಪ್ರತಿರೋಧ ತೋರಿಸದಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಕುತೂಹಲ ಕಾಯ್ದುಕೊಂಡಿದ್ದವು. ಹೊರಗಿನಿಂದ ಬಂದ ಅಭ್ಯರ್ಥಿಯ ಕೈ ಹಿಡಿಯುವ ಮೂಲಕ ದಶಕದ ಜೆಡಿಎಸ್ ಆಡಳಿತಕ್ಕೆ ಬ್ರೇಕ್ ಹಾಕಿದ್ದಾರೆ.

    ಹೊಸಕೋಟೆಯಲ್ಲಿ ಮತ್ತೆ ಕೈ ಹಿಡಿತ: ಪಕ್ಷಕ್ಕಿಂತ ವ್ಯಕ್ತಿ ವರ್ಚಸ್ಸಿನ ಮೇಲೆ ನಡೆಯುವ ಹೊಸಕೋಟೆ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಕಾಂಗ್ರೆಸ್ ಶಾಸಕರಿಗೆ ಮರು ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿಯೇ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರಾನೇರ ಹಣಾಹಣಿಯಲ್ಲಿ ಕ್ಷೇತ್ರದ ಮತದಾರ ಕಾಂಗ್ರೆಸ್‌ಗೆ ಜೈ ಎಂದಿದ್ದಾನೆ. ಮೂರು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದ ಎಂಟಿಬಿ ನಾಗರಾಜ್ ಅವರಿಗೆ ಸೋಲಿನ ಕಹಿ ಅನುಭವ ನೀಡಿರುವ ಮತದಾರ ಮತ್ತೆ ಹೊಸಕೋಟೆಯನ್ನು ಕಾಂಗ್ರೆಸ್ ತೆಕ್ಕೆಗೆ ನೀಡಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts