More

    ಜಿಲ್ಲಾಕೇಂದ್ರ ಘೋಷಣೆ, ಕಾವೇರಿದ ಪರ-ವಿರೋಧ: ಹೋರಾಟಕ್ಕೆ ಸಂಘ-ಸಂಸ್ಥೆಗಳು ಸಜ್ಜು

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿಘೋಷಿಸಲಾಗುವುದು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಹೇಳಿಕೆಗೆ ಜಿಲ್ಲೆಯಾದ್ಯಂತ ಪರ ವಿರೋಧದ ಬಿಸಿಬಿಸಿ ಚರ್ಚೆ ಶುರುವಾಗಿದೆ.


    ದಶಕಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ‘ಜಿಲ್ಲಾಕೇಂದ್ರ’ದ ವಿಷಯ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಭುಗಿಲೆದ್ದಿದೆ. ದೇವನಹಳ್ಳಿ ಜಿಲ್ಲಾ ಕೇಂದ್ರವಾದರೆ ದೊಡ್ಡಬಳ್ಳಾಪುರಕ್ಕೆ ಅನ್ಯಾಯವಾಗುತ್ತದೆ ಎಂಬ ವಾದ ಕೇಳಿಬರುತ್ತಿದ್ದರೆ, ಎಲ್ಲದಕ್ಕೂ ದೇವನಹಳ್ಳಿಯೇ ಸೂಕ್ತ ಎಂಬ ವಾದ ಮಂಡನೆಯಾಗುತ್ತದೆ. ಏತನ್ಮಧ್ಯೆ ಯಾವೂದಕ್ಕೂ ಜಿಲ್ಲಾ ಕೇಂದ್ರ ಬೇಡ, ಜಿಲ್ಲೆಯ ಹೆಸರು ಹಾಗೆಯೇ ಇರಲಿ ಎಂಬ ಒತ್ತಾಯ ನೆಲಮಂಗಲ ಹಾಗೂ ಹೊಸಕೋಟೆ ಕಡೆಯಿಂದ ಕೇಳಿಬರುತ್ತಿದೆ. ಈ ವಿಷಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷದ ಮುಖಂಡರು ತಳಮಳಗೊಂಡಿದ್ದರೆ, ವಿವಿಧ ಸಂಘಟನೆಗಳ ಪರ-ವಿರೋಧದ ಚರ್ಚೆಗಳು ಕಾವೇರತೊಡಗಿದೆ.

    ಯಾವ ತಾಲೂಕಿಗೆ ಪಟ್ಟ?; 2013ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡರ ಸಮ್ಮುಖದಲ್ಲಿ ಇದೇ ವಿಷಯವಾಗಿ ದೊಡ್ಡಮಟ್ಟದ ಸಭೆ ಕರೆಯಲಾಗಿತ್ತು. ಕೆಲವೊಂದು ಮಾನದಂಡಗಳ ಪ್ರಕಾರ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವುದು, ಹಾಗೆಯೇ ಹೆಚ್ಚಿನ ಸೌಲಭ್ಯವನ್ನು ದೊಡ್ಡಬಳ್ಳಾಪುರಕ್ಕೆ ತಲುಪಿಸುವುದು ಎಂಬರ್ಥದ ಮಾತುಕತೆ ನಡೆದಿತ್ತು. ಬಳಿಕ ಬದಲಾದ ರಾಜಕೀಯ ವಾತಾವರಣಲ್ಲಿ ಚರ್ಚೆಯ ಸದ್ದಡಗಿತ್ತು. ಈಗ ಉಸ್ತುವಾರಿ ಸಚಿವರ ಹೇಳಿಕೆ ಮತ್ತೊಮ್ಮೆ ಪರ ವಿರೋಧದ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಈಗಾಗಲೇ ಜಿಲ್ಲಾಡಳಿತ ಭವನವಿರುವ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಹಾಗೂ ನಾಲ್ಕೂ ತಾಲೂಕಿಗೆ ಮಧ್ಯ ಭಾಗ ಎಂದು ಗುರುತಿಸಲಾಗಿರುವ ದೇವನಹಳ್ಳಿ ಹೆಚ್ಚು ಸೂಕ್ತ ಎಂಬ ಕಾರಣ ನೀಡುತ್ತಿದ್ದರೂ, ಎಸಿ ಕಚೇರಿ, ತಾಯಿ,ಮಗು ಆಸ್ಪತ್ರೆ, ಪೊಲೀಸ್ ಉಪವಿಭಾಗ, ವ್ಯಾಪ್ತಿ ಕೈಗಾರಿಕಾ ಪ್ರದೇಶ, ದೊಡ್ಡಮಟ್ಟದ ಕಂದಾಯಭೂಮಿ ಇರುವ ದೊಡ್ಡಬಳ್ಳಾಪುರಕ್ಕೆ ಜಿಲ್ಲಾ ಕೇಂದ್ರದ ಪಟ್ಟ ದೊರಕಬೇಕೆಂಬ ವಾದ ತೀವ್ರಗೊಂಡಿದೆ. ಸಚಿವರ ಭರವಸೆಯಂತೆ ಇನ್ನೊಂದು ತಿಂಗಳಲ್ಲಿ ಯಾವ ತಾಲೂಕು ಜಿಲ್ಲಾಕೇಂದ್ರದ ಪಟ್ಟ ಅಲಂಕರಿಸಲಿದೆ ಎಂಬುದು ಕುತೂಹಲ ಹುಟ್ಟುಹಾಕಿದೆ.

    ರಾಜಕೀಯ ಮೇಲಾಟ: ಹೊಸಕೋಟೆ ಹೊರತುಪಡಿಸಿದರೆ ಮೂರು ತಾಲೂಕುಗಳಲ್ಲೂ ಬಿಜೆಪಿ ಕಣ್ಣರಳಿಸುತ್ತಿದ್ದು, ಜಿಲ್ಲಾ ಕೇಂದ್ರದ ವಿಷಯವನ್ನು ರಾಜಕೀಯ ಲಾಭಕ್ಕಷ್ಟೇ ಬಳಸಲಾಗುತ್ತಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಪ್ರಸ್ತುತ ನಾಲ್ಕೂ ತಾಲೂಕುಗಳಲ್ಲಿ ಬಿಜೆಪಿ ಶಾಸಕರಿಲ್ಲ, ಮುಂದಿನ ಚುನಾವಣೆಯಲ್ಲಿ ಕನಿಷ್ಠ 3 ತಾಲೂಕನ್ನಾದರೂ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಜಿಲ್ಲೆಯ ಜನರ ಗಮನ ಸೆಳೆಯಲು ಇದೊಂದು ವಿಷಯವನ್ನು ತೇಲಿಬಿಡಲಾಗಿದೆ ಎಂಬ ವಾದವೂ ಕೇಳಿಬರುತ್ತಿದೆ. ಹೊಸಕೋಟೆಯಲ್ಲಿ ಸಚಿವ ಎಂಟಿಬಿ ಪ್ರಭಾವವಿದೆ. ದೊಡ್ಡಬಳ್ಳಾಪುರದಲ್ಲಿ ಜನೋತ್ಸವದ ಮೂಲಕ ಗಮನ ಸೆಳೆಯಬಹುದು, ಉಳಿದ ಇನ್ನೆರಡು ತಾಲೂಕಿನ ಪೈಕಿ ನೆಲಮಂಗಲದಲ್ಲೂ ಬಿಜೆಪಿ ಹವಾ ಇದೆ, ಬಾಕಿ ಇರುವ ದೇವನಹಳ್ಳಿಯಲ್ಲಿ ಮತದಾರರ ಗಮನ ಸೆಳೆಯಲು ಮೈಂಡ್ ಗೇಮ್ ಶುರುಮಾಡಲಾಗಿದೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತುಗಳಾಗಿವೆ.

    ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರವಾಗಿ ಗ್ರಾಮಾಂತರ ಜಿಲ್ಲೆಯೇ ಇರಲಿ, ಯಾವುದೋ ಒಂದು ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿ ಆ ತಾಲೂಕಿಗೆ ಸವಲತ್ತು ಕಲ್ಪಿಸುವುದಕ್ಕಿಂತ ನಾಲ್ಕು ತಾಲೂಕುಗಳಿಗೂ ಸಮನಾಗಿ ಸವಲತ್ತುಗಳನ್ನು ತಲುಪಿಸಲಿ. ಆಸ್ಪತ್ರೆ, ಶಿಕ್ಷಣ, ನ್ಯಾಯಾಲಯ ಸೇರಿ ಯಾವುದೇ ಹೊಸ ಯೋಜನೆಗಳು ನಾಲ್ಕು ತಾಲೂಕಿಗೂ ಸಮನಾಗಿ ಹಂಚಲಿ. ಇದರಲ್ಲಿ ಯಾವುದೇ ರಾಜಕೀಯ ಮಾಡದಿರುವುದು ಉತ್ತಮ.
    | ಶರತ್‌ಬಚ್ಚೇಗೌಡ ಶಾಸಕ ಹೊಸಕೋಟೆ

    ಗ್ರಾಮಾಂತರ ಜಿಲ್ಲೆ ಹೆಸರು ಬದಲಾವಣೆ ಮಾಡುವುದೇ ಅವೈಜ್ಞಾನಿಕ, ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಜಿಲ್ಲೆಯಾಗಿರುವುದರಿಂದ ಗ್ರಾಮಾಂತರ ಜಿಲ್ಲೆ ಎಂಬ ಹೆಸರೇ ಇರುವುದು ಸೂಕ್ತ, ಜಿಲ್ಲೆಯ ಯಾವುದೋ ಒಂದು ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವ ಬದಲು, ಜಿಲ್ಲಾ ಕೇಂದ್ರಕ್ಕೆ ದೊರಕಿಸಿಕೊಡಬೇಕಾದ ಸೌಲಭ್ಯಗಳನ್ನು ಎಲ್ಲ ತಾಲೂಕುಗಳಿಗೂ ಸಮನಾಗಿ ವಿಸ್ತರಿಸುವುದು ಲೇಸು. ರಾಜಕೀಯ ಬದಿಗಿರಿಸಿ ಜಿಲ್ಲೆಯ ಅಭಿವೃದ್ಧಿಗೆ ಚಿಂತಿಸಬೇಕು.
    | ಡಾ.ಶ್ರೀನಿವಾಸಮೂರ್ತಿ ಶಾಸಕ ನೆಲಮಂಗಲ

    ಈ ಹಿಂದಿನಿಂದಲೂ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಬೇಕು ಎಂದು ಹೋರಾಡುತ್ತ ಬಂದಿದ್ದೇವೆ, ದೇವನಹಳ್ಳಿಗೆ ಹೋಲಿಸಿದರೆ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಲು ಹೆಚ್ಚು ಸೂಕ್ತವಾಗಿದೆ. ಬಿಜೆಪಿಯವರು ರಾಜಕೀಯ ಮಾಡುವುದನ್ನು ಬಿಟ್ಟು ಈ ಹಿಂದೆ ನಡೆದ ಮಾತುಕತೆ, ಚರ್ಚೆ, ಸಾಧಕ ಬಾಧಕಗಳನ್ನು ಗಮನಿಸಿ ಮುಂದಿನ ಹೆಜ್ಜೆ ಇಡಬೇಕು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದೇ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಅಕ್ಷಮ್ಯ. ಈ ಬಗ್ಗೆ ಹೋರಾಟ ತೀವ್ರಗೊಳಿಸಲಾಗುವುದು.

    | ವೆಂಕಟರಮಣಯ್ಯ ಶಾಸಕ ದೊಡ್ಡಬಳ್ಳಾಪುರ

    ದೇವನಹಳ್ಳಿ ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಹಿಂದಿನಿಂದಲೂ ಹೋರಾಟ ಮಾಡಿದ್ದೇವೆ. ಭೌಗೋಳಿಕವಾಗಿಯೂ ದೇವನಹಳ್ಳಿ ಯೋಗ್ಯ ಸ್ಥಳದಲ್ಲಿದ್ದು ಜಿಲ್ಲಾಕೇಂದ್ರವಾಗಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕಿನ ಜನತೆಗೆ ಅನುಕೂಲವಾಗಲಿದೆ. ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿರುವುದು ವೈಯಕ್ತಿಕವಾಗಿ ಸಂತಸವುನ್ನುಂಟುಮಾಡಿದೆ.
    | ನಿಸರ್ಗ ನಾರಾಯಣಸ್ವಾಮಿ ಶಾಸಕ ದೇವನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts