More

    ಮುದ್ದೇಬಿಹಾಳ ಪುರಸಭೆಗೆ ಜೆಡಿಎಸ್-ಕಾಂಗ್ರೆಸ್ ಸಾರಥ್ಯ?

    ಶಂಕರ ಈ.ಹೆಬ್ಬಾ, ಮುದ್ದೇಬಿಹಾಳ

    ತೀವ್ರ ಕುತೂಹಲ ಕೆರಳಿಸಿರುವ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಅ.28 ರಂದು ನೂತನ ಸದಸ್ಯರ ಎರಡೂವರೆ ವರ್ಷದ ವನವಾಸ ಅಂತ್ಯವಾಗಲಿದೆ.
    ಏತನ್ಮಧ್ಯೆ ಮೀಸಲಾತಿ ಆಟದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಹೊಂದಾಣಿಕೆಗೆ ಜಯ ಲಭಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗಿದ್ದು, ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಪಕ್ಕಾ ಆಗಿದೆ.
    ಮುದ್ದೇಬಿಹಾಳ ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಬಲವಿದೆ. 8 ಕಾಂಗ್ರೆಸ್, 8 ಬಿಜೆಪಿ , ಇಬ್ಬರು ಜೆಡಿಎಸ್ ಹಾಗೂ ಐವರು ಪಕ್ಷೇತರರು ಆಯ್ಕೆಯಾಗಿದ್ದರಿಂದ ಅತಂತ್ರ ಸ್ಥಿತಿ ಇದೆ. ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹಾಗೂ ಹಿಂದುಳಿದ ಅ-ವರ್ಗಕ್ಕೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಲಾಗಿದೆ.

    ಪುರಸಭೆಯಲ್ಲಿ ತಾಪಂ ಮಾದರಿ

    ಮುದ್ದೇಬಿಹಾಳ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಅವಕಾಶಗಳಿದ್ದರೂ ಮೀಸಲಾತಿ ಕಾರಣದಿಂದ ಅಧಿಕಾರದಿಂದ ವಂಚಿತವಾಗಬೇಕಾಯಿತು. ಆದರೆ, ಪುರಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಹೊಂದಿದ್ದು, ಎರಡೂ ಪಕ್ಷಗಳಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶಗಳಿವೆ. ಆದರೆ, ಪಕ್ಷೇತರ ಸದಸ್ಯರಲ್ಲಿ ಐವರು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಮನಸ್ಸು ಮಾಡದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಜೈ ಎಂದಿರುವುದು ಈಗಾಗಲೇ ಅಜ್ಞಾತ ಸ್ಥಳದಲ್ಲಿರುವ ಸದಸ್ಯರ ಸಂಖ್ಯಾ ಬಲದ ಮೇಲೆ ನಿಚ್ಚಳವಾಗಿದೆ.

    ಕಡಿಮೆ ಸದಸ್ಯ ಬಲದ ಜೆಡಿಎಸ್‌ಗೆ ಗದ್ದುಗೆ!

    23 ಸ್ಥಾನಗಳಲ್ಲಿ ಎರಡೇ ಸ್ಥಾನಗಳಲ್ಲಿ ಜಯ ಗಳಿಸಿರುವ ಜೆಡಿಎಸ್ ಸದಸ್ಯರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನಕ್ಕೇರುವ ಅವಕಾಶ ಒದಗಿ ಬಂದಿರುವುದು ಕಾಕತಾಳಿಯವೇ ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷೇತರ ಐವರು ಸದಸ್ಯರು, ಕಾಂಗ್ರೆಸ್‌ನ ಎಂಟು ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗಳಿಸಿದ್ದರೂ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಪಕ್ಷದ ಸದಸ್ಯೆ ಕೂಡಿಸಲಾಗಲಿಲ್ಲವೆಂಬ ಕೊರಗು ಪಕ್ಷದ ಹಿರಿಯ ನಾಯಕರಲ್ಲಿ ಕಾಡುತ್ತಿದೆ.

    ಉಪಾಧ್ಯಕ್ಷ ಸ್ಥಾನ ಯಾರಿಗೆ?

    ಪಕ್ಷೇತರರು ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಪಕ್ಷೇತರರಲ್ಲಿ ಹಾಗೂ ಕಾಂಗ್ರೆಸ್‌ನಲ್ಲಿ ಉಪಾಧ್ಯಕ್ಷ ಸ್ಥಾನ ಯಾರಿಗೆ ಬಿಟ್ಟುಕೊಡಬಹುದು ಎಂಬುದು ತೀವ್ರ ಕುತೂಹಲ ಮೂಡಿಸಿದೆ.

    ಬಿಜೆಪಿ ಪಾಳಯದಲ್ಲಿ ಮೌನ

    ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಜತೆಗೂಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಬಿಜೆಪಿ ಪಾಳಯವನ್ನು ಮೌನವಾಗುವಂತೆ ಮಾಡಿದೆ. ಅಭಿವೃದ್ಧಿಪರ ಆಡಳಿತವನ್ನು ಬೆಂಬಲಿಸುವವರು ತಮ್ಮ ಜತೆಗೆ ಕೈಜೋಡಿಸುತ್ತಾರೆ ಎಂದು ಹೇಳಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಕೊನೆ ಕ್ಷಣದವರೆಗೂ ಬಿಜೆಪಿಗೆ ಅಧಿಕಾರ ದೊರಕಿಸಿಕೊಡಲು ಪ್ರಯತ್ನಗಳನ್ನು ಮುಂದುವರೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಬಿಜೆಪಿಗೆ ಅಧ್ಯಕ್ಷ ಸ್ಥಾನ ಕಷ್ಟ ಎನ್ನಲಾಗುತ್ತಿದೆ.

    ಡಿಕೆಶಿ ಭೇಟಿಯಾದ ಸದಸ್ಯರು

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪುರಸಭೆಯಲ್ಲಿ ಅಧಿಕಾರ ಸ್ಥಾಪನೆ ಕುರಿತು ಅವರಿಗೆ ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ ಅದನ್ನು ಅವರ ಪತಿ ರುದ್ರಗೌಡ ಅಂಗಡಗೇರಿ ತಳ್ಳಿ ಹಾಕಿದ್ದಾರೆ. ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ನಮಗೆ ಬೆಂಬಲ ನೀಡಲು ಕೋರಿದ್ದು, ಅದಕ್ಕೆ ಕಾಂಗ್ರೆಸ್, ಪಕ್ಷೇತರ ಸದಸ್ಯರು ಒಪ್ಪಿದ್ದಾರೆ ಎಂದು ಹೇಳಿದ್ದಾರೆ.

    28 ರಂದು ಅಧ್ಯಕ್ಷ ,ಉಪಾಧ್ಯಕ್ಷ ಆಯ್ಕೆ

    ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅ.28 ರಂದು ಸಭೆ ನಡೆಸುವುದಾಗಿ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಜಿ.ಎಸ್.ಮಳಗಿ ತಿಳಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ 11ರವರೆಗೆ ನಾಮಪತ್ರ ಸಲ್ಲಿಸುವುದು, 1 ಗಂಟೆಯಿಂದ ನಾಮಪತ್ರ ಪರಿಶೀಲನೆ, ಬಳಿಕ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಲು 10 ನಿಮಿಷ ಅವಕಾಶ, ನಂತರ ಅಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿದೆ. ಈ ಪ್ರಕ್ರಿಯೆ ನಂತರ ಉಪಾಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts