More

    Web Exclusive| ಕಾಳ್ಗಿಚ್ಚಿನಿಂದ ಬಂಡೀಪುರ ರಕ್ಷಿಸಲು ಬರಲಿದೆ ವಾಯುಪಡೆ!

    | ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
    ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರ ಕಾಡನ್ನು ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಈ ಬಾರಿ ವಾಯುಪಡೆ ಸಹಾಯ ಪಡೆಯಲಿದೆ.

    ಇತ್ತೀಚೆಗೆ ಬೆಂಗಳೂರಿನಲ್ಲಿ ವಾಯುಪಡೆ ಉನ್ನತಾಧಿಕಾರಿಗಳ ಜತೆ ಪಿಸಿಸಿಎಫ್​ಗಳ ಸಭೆ ನಡೆಸಲಾಗಿದೆ. ಬಂಡೀಪುರ ಪ್ರದೇಶವನ್ನು ಸ್ಯಾಟಲೈಟ್ ಮೂಲಕ ಗಮನಿಸಲಾಗುತ್ತದೆ. ಬೆಂಕಿ ಅವಘಡಗಳಂತಹ ಸೂಚನೆ ಸಿಕ್ಕಲ್ಲಿ ಕೂಡಲೇ ಮಾಹಿತಿ ತಿಳಿಸಲಾಗುತ್ತದೆ. ಅಗತ್ಯಬಿದ್ದಲ್ಲಿ ವಾಯುಸೇನೆ ಹೆಲಿಕಾಪ್ಟರ್​ಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್.ನಟೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

    ಈಗಾಗಲೇ ಎಲ್ಲ 13 ವಲಯಗಳಲ್ಲಿ ಫೈರ್​ಲೈನ್ ಕಾಮಗಾರಿ ಆರಂಭವಾಗಿದೆ. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಂಡಮಾರುತದಿಂದ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆ ಆದ ಹಿನ್ನೆಲೆಯಲ್ಲಿ ಹುಲ್ಲು ಪೂರ್ಣವಾಗಿ ಒಣಗಿಲ್ಲ. ಆದರೂ ನಿಗದಿತ ಸ್ಥಳಗಳಲ್ಲಿ 4874 ಕಿ.ಮೀ. ಫೈರ್​ಲೈನ್ ಮಾಡುವ ಮೂಲಕ ಅರಣ್ಯ ಇಲಾಖೆಯು ಬೆಂಕಿಯಿಂದ ಅರಣ್ಯ ರಕ್ಷಿಸಲು ಕ್ರಮಕೈಗೊಂಡಿದೆ.

    ಡ್ರೋನ್ ಬಳಕೆ: ಡ್ರೋನ್ ಕ್ಯಾಮರಾಗಳ ಮೂಲಕ ಬೆಂಕಿಯನ್ನು ಗುರುತಿಸಿ ಕೂಡಲೇ ನಂದಿಸಲು ಸಿದ್ಧತೆ ನಡೆಸಲಾಗಿದೆ. ಇತ್ತೀಚಿಗೆ ಅಗ್ನಿಶಾಮಕ ಅಧಿಕಾರಿಗಳು, ಕೇರಳ ಹಾಗೂ ತಮಿಳುನಾಡಿನ ಅರಣ್ಯಾಧಿಕಾರಿಗಳ ಜತೆ ಸಮನ್ವಯ ಸಮಿತಿಯ ಸಭೆ ನಡೆಸಿ ಸಹಕಾರ ನೀಡುವ ಬಗ್ಗೆ ಚರ್ಚಿಸಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ತರಬೇತಿ ಗಾರ್ಡ್​ಗಳನ್ನು ಸೇವೆಗೆ ಕರೆಸಿಕೊಳ್ಳಲಾಗುತ್ತದೆ. ಎಲ್ಲ ವಲಯಗಳಿಂದ 1 ಸಾವಿರ ಫೈರ್ ವಾಚರ್ ನೇಮಕ ಮಾಡಿ ಹಗಲು-ರಾತ್ರಿ ಗಸ್ತು ನಡೆಸಲಾಗುವುದು. ಜಂಗಲ್ ಲಾಡ್ಜ್ ರೆಸಾರ್ಟ್ ಹಾಗೂ ಖಾಸಗಿ ರೆಸಾರ್ಟ್​ನವರ ಜತೆ ಸಭೆ ನಡೆಸಿ ಅವರಿಂದ ತುರ್ತುಸಹಾಯಕ್ಕೆ ವಾಹನ ಹಾಗೂ ಸಿಬ್ಬಂದಿ ಸಹಾಯ ಪಡೆಯಲಾಗುತ್ತದೆ.

    ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಡಿಆರ್​ಎಫ್​ಒ, ಆರ್​ಎಫ್​ಒ, ಎಸಿಎಫ್​ಗಳ ಸಭೆ ನಡೆಸಲಾಗಿದೆ. ಬೆಂಕಿ ಅವಘಡ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸಾರ್ವಜನಿಕರ ನೆರವನ್ನೂ ಕೋರಿದೆ. ಆಗಾಗ್ಗೆ ಮಳೆ ಬಿದ್ದ ಪರಿಣಾಮ ಹುಲ್ಲು ಇನ್ನೂ ಹಸಿರಾಗಿದೆ. ಹಾಗಾಗಿ ಫೈರ್ ಲೈನ್ ನಿರ್ಮಾಣ ವಿಳಂಬವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts