More

    ಬಾಮೈದುನ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ

    ಎಚ್.ಡಿ.ಕೋಟೆ: ಪಟ್ಟಣ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್‌ನಲ್ಲಿ ಬುಧವಾರ ಕುಟುಂಬ ವೈಷಮ್ಯದಿಂದ ಅಳಿಯ ತನ್ನ ಅತ್ತೆ ಹಾಗೂ ಮದುವೆಯಾಗುವ ಸಂಭ್ರಮದಲ್ಲಿದ್ದ ಬಾಮೈದುನನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

    ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಬಸವಶೆಟ್ಟಿ ಅವರ ಮಗ, ಹ್ಯಾಂಡ್‌ಪೋಸ್ಟ್‌ನ ಅಶ್ವಿನಿ ಟೆಕ್ಸ್‌ಟೈಲ್ಸ್‌ನ ಕ್ಯಾಷಿಯರ್ ಮನೋಜ್ ಹಾಗೂ ಈತನ ತಾಯಿ ಹೇಮಾವತಿ ತೀವ್ರ ಹಲ್ಲೆಗೊಳಗಾದವರು.

    ಇವರಿಬ್ಬರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ಹೆಬ್ಬಲಗುಪ್ಪೆ ಗ್ರಾಮದ ಚೌಡಪ್ಪಶೆಟ್ಟಿ ಅವರ ಮಗ ಕೆಂಡಗಣ್ಣಶೆಟ್ಟಿಯನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದುವೆ ಸಂಭ್ರದಲ್ಲಿದ್ದ ಮನೆಯಲ್ಲೀಗ ಆತಂಕ ಮಡುಗಟ್ಟಿದ್ದು, ಮದುವೆ ಸಮಾರಂಭ ಅನಿಶ್ಚಿತವಾಗಿದೆ.

    ಕೆಂಡಗಣ್ಣಶೆಟ್ಟಿ 8 ವರ್ಷಗಳ ಹಿಂದೆ ಹೇಮಾವತಿ ಅವರ ಪುತ್ರಿ ತನುಜಾಳನ್ನು ಮದುವೆಯಾಗಿದ್ದ. ಇವರಿಗೆ 6 ವರ್ಷದ ಮಗಳು ಇದ್ದಾಳೆ. 4 ವರ್ಷದ ಹಿಂದೆ ತನುಜಾಳಿಗೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ಗ್ರಾಮಲೆಕ್ಕಿಗರಾಗಿ ಕೆಲಸ ಸಿಕ್ಕಿ ಗಂಡ- ಹೆಂಡತಿ ಹಾಗೂ ಮಗಳು ಮಧುಗಿರಿಯಲ್ಲಿ ಒಟ್ಟಿಗೆ ವಾಸವಾಗಿದ್ದರು.

    ತನುಜಾಳಿಗೆ ಸರ್ಕಾರಿ ಕೆಲಸ ಸಿಕ್ಕಿದ ನಂತರ ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಕಡಿಮೆಯಾಗಿದೆ. ಇದರ ನಡುವೆ ಪತ್ನಿ ವೇತನವನ್ನು ಗಂಡನಿಗೆ ನೀಡದೆ ತಾನೇ ಬಳಸಿಕೊಳ್ಳುತ್ತಿದ್ದರು. ಇದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಮಧ್ಯೆ ತನುಜಾ ತನ್ನ ಗಂಡನಿಗೆ ಗೊತ್ತಾಗದಂತೆ ತನ್ನ ತಾಯಿಯ ಬ್ಯಾಂಕ್ ಖಾತೆಗೆ 2 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಗಂಡ ತನ್ನ ಹೆಂಡತಿಯನ್ನು ಕೊಲೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದ. ಈ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಗೆ ದೂರು ಹೋಗಿ ಗಂಡ-ಹೆಂಡತಿಗೆ ಬುದ್ಧಿವಾದ ಹೇಳಿ ಕಳಿಸಿದ್ದರು.

    ಇದಾದ ನಂತರ ಕೆಂಡಗಣ್ಣಶೆಟ್ಟಿ ಪತ್ನಿ, ಅತ್ತೆ ಮತ್ತು ಬಾಮೈದುನ ಮೇಲೆ ದ್ವೇಷ ಸಾಧಿಸುತ್ತಿದ್ದ. ಎರಡು ತಿಂಗಳಿಂದಲೂ ಇವರ ಕೊಲೆಗೆ ಸಂಚು ಮಾಡುತ್ತಿದ್ದ ಎನ್ನಲಾಗಿದೆ. 2 ತಿಂಗಳ ಹಿಂದೆ ತನ್ನ ಬಾಮೈದುನ ಮದುವೆ ನಿಶ್ಚಯವಾಗಿತ್ತು. ಆ ಸಂದರ್ಭದಲ್ಲಿ ಕೊಲೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದ. ಕಾರಣಾಂತರದಿಂದ ಮದುವೆ ರದ್ದಾದ ಕಾರಣ ಆತನ ಪ್ರಯತ್ನ ವಿಫಲವಾಯಿತು ಎಂದು ತಿಳಿದು ಬಂದಿದೆ.

    ಗುರುವಾರ ಸರಗೂರಿನ ತೊಗಟವೀರ ಸಮುದಾಯ ಭವನದಲ್ಲಿ ಮನೋಜ್‌ನ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕೆಂಡಗಣ್ಣಶೆಟ್ಟಿ ಪತ್ನಿ ಮತ್ತು ಮಗುವಿನ ಜತೆ ಮಧುಗಿರಿಯಿಂದ ಹ್ಯಾಂಡ್‌ಪೋಸ್ಟ್‌ನ ಅತ್ತೆ ಮನೆಗೆ ಬಂದಿದ್ದ. ಬುಧವಾರ ಬೆಳಗಿನ ಜಾವ 4 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಪೂರ್ವ ನಿಯೋಜಿತದಂತೆ ಕಾರಿನಲ್ಲಿ ತಂದಿದ್ದ ಮಚ್ಚನ್ನು ತೆಗೆದುಕೊಂಡು ಬಂದು ಮದುವೆ ಸಂಭ್ರಮದಲ್ಲಿ ಇದ್ದ ಬಾಮೈದುನ ಮತ್ತು ಅತ್ತೆಯ ಮೇಲೆ ಏಕಾಏಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

    ಮದುವೆ ಮನೆಗೆ ಬಂದಿದ್ದ ಬಂಧು- ಬಳಗದವರು ಘಟನೆಯನ್ನು ಕಣ್ಣಾರೆ ಕಂಡು ದಿಗ್ಭ್ರಮೆಗೊಂಡು ಹಲ್ಲೆ ಮಾಡಿದ ಕೆಂಡಗಣ್ಣ ಶೆಟ್ಟಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ತೀವ್ರವಾಗಿ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ-ಮಗನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts