ಸಿನಿಮಾ

ವೃತ್ತಿಪರ ಕಾನೂನು ಕ್ಷೇತ್ರಕ್ಕೆ ಜಾಗತಿಕ ಮಾನ್ಯತೆ: ಪ್ರೊ.ಬಸವರಾಜು

ಉಡುಪಿ: ವೃತ್ತಿಪರ ಕಾನೂನು ಕ್ಷೇತ್ರಕ್ಕೆ ಜಾಗತಿಕ ಮಾನ್ಯತೆ ಇದೆ. ಇದರೊಂದಿಗೆ ಸ್ಪರ್ಧೆಯೂ ತೀವ್ರವಾಗಿದ್ದು, ಕಾನೂನು ವಿದ್ಯಾರ್ಥಿಗಳು ಸಮಗ್ರ ತರಬೇತಿ, ಪ್ರಾಯೋಗಿಕ ಅನುಭವ, ಕೌಶಲ್ಯದ ಜತೆಗೆ ಪಠ್ಯೇತರ ಜ್ಞಾನವನ್ನು ಹೊಂದುವುದು ಅವಶ್ಯ ಎಂದು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜು ಹೇಳಿದರು.

ಶುಕ್ರವಾರ ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನ್ಯಾಯವಾದಿ ಪಿ. ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರಮಟ್ಟದ ಏಳನೇ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶೇ. 8ರಿಂದ 10ಜನರಿಗಷ್ಟೇ ಸಂವಿಧಾನದ ಅರಿವಿದೆ. ಅನ್ಯರಿಗೆ ಕಾನೂನಿನ ನೆರವು, ಅರಿವಿನ ಅಗತ್ಯವಿದೆ. ಶೇ. 70ರಷ್ಟು ಜನರು ನ್ಯಾಯ ವ್ಯವಸ್ಥೆಯ ಮುಖ್ಯವಾಹಿನಿಗೆ ಬಂದಿಲ್ಲ. ಶೇ. 72ರಷ್ಟು ಕಕ್ಷಿಗಾರರು ಬಡವರಾಗಿದ್ದು, ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳೇ ಸಂದರೂ ಈ ಅಸಮಾನತೆ ಜೀವಂತವಾಗಿದೆ. ನ್ಯಾಯಾಂಗ ಕ್ಷೇತ್ರದ ವೃತ್ತಿಪರರು ದುರ್ಬಲ ವರ್ಗಕ್ಕೆ ನ್ಯಾಯ ಸಿಗುವಂತೆ ಶ್ರಮಿಸದಿದ್ದರೆ ಸಂವಿಧಾನ ನಿರ್ಮಾತೃಗಳ ಆಶಯ, ಶ್ರಮ ನಿರರ್ಥಕವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ನಿರ್ದೇಶಕಿ ಡಾ. ನಿರ್ಮಲಾ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಜಯಂತಿ ಪಿ. ಶಿವಾಜಿ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀಧರ ಪಿ. ಎಸ್., ಸುರೇಖಾ ಕೆ., ಅಭಯ ಶ್ರೀಕುಮಾರ್, ನಯನಾ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ರಘುನಾಥ್ ಕೆ. ಎಸ್. ಸ್ವಾಗತಿಸಿದರು. ಮರಿಯಾ ಥೆರೇಸಾ ನಿರೂಪಿಸಿದರು. ಅಸಿಸ್ಟೆಂಟ್ ಪ್ರೊೆಸರ್ ಪ್ರೀತಿ ಹರೀಶ್‌ರಾಜ್ ವಂದಿಸಿದರು.

Latest Posts

ಲೈಫ್‌ಸ್ಟೈಲ್