More

    ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ಖಚಿತ

    ಪ್ರಭಾಕರ ಗೂಳಿಪಾಟೀಲ ಚಡಚಣ

    ಪಟ್ಟಣದ ಸ್ಥಳೀಯ ಪಪಂನ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ. 6ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಅವಿರೋಧ ಆಯ್ಕೆ ಖಚಿತಗೊಂಡಿದೆ.
    ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಾತಿ ನಿಗದಿಗೊಳಿಸಲಾಗಿದ್ದು, ನ. 6ರ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಮಧ್ಯಾಹ್ನ 1 ಗಂಟೆಗೆ ನಾಮಪತ್ರಗಳ ಪರಿಶೀಲನೆಯ ನಂತರ ಅವಶ್ಯವಿದ್ದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ಚಡಚಣ ತಹಸೀಲ್ದಾರ್ ಸುರೇಶ ಚವಲರ ತಿಳಿಸಿದ್ದಾರೆ.
    ಓರ್ವ ಪಪಂ ಸದಸ್ಯನ ನಿಧನದ ಹಿನ್ನೆಲೆಯಲ್ಲಿ ಪಪಂನಲ್ಲಿ ಒಟ್ಟು 15 ಸದಸ್ಯರಿದ್ದು, ಗೆಲುವು ಸಾಧಿಸಲು 8 ಸದಸ್ಯರ ಬೆಂಬಲ ಬೇಕು. ಆದರೆ, ಬಿಜೆಪಿಯಲ್ಲಿ 10 ಸದಸ್ಯರಿದ್ದು, ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಅಲ್ಲದೆ, ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು, ಪಪಂನಲ್ಲಿರುವ ಆರಕ್ಕೆ ಆರೂ ಮಹಿಳಾ ಸದಸ್ಯರು ಬಿಜೆಪಿ ಪಕ್ಷದ ಚುನಾಯಿತ ಸದಸ್ಯರಾಗಿರುವುದರಿಂದ ಇನ್ನುಳಿದ ಬೇರೆ ಪಕ್ಷದಲ್ಲಿ ಮಹಿಳಾ ಸದಸ್ಯೆಯರು ಇಲ್ಲದಿರುವುದರಿಂದ ಈ ಚುನಾವಣೆಯಲ್ಲಿ ಆ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

    ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.8ರ ಸದಸ್ಯೆ ಕವಿತಾ ಬಾಬುರಾಯ ಬಿರಾದಾರ ಹಾಗೂ ವಾರ್ಡ್ ನಂ. 13ರ ಸದಸ್ಯೆ ಬಾಳವ್ವ ಪೀರಪ್ಪ ಅಗಸರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ. 2ರ ಸದಸ್ಯೆ ಶರಣವ್ವ ಶಿವಪ್ಪ ಕಟ್ಟಿ ಹಾಗೂ ವಾರ್ಡ್ ನಂ. 14ರ ಸದಸ್ಯೆ ಸಾವಿತ್ರಿ ಕುಬೇರ ಸಿಂಧೆ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾಯದರ್ಶಿಗಳಾದ ಮಲ್ಲಿಕಾರ್ಜುನ ಜೋಗುರ, ಸುರೇಶ ಬಿರಾದಾರ, ಬಸವರಾಜ ಬಿರಾದಾರ ಹಾಗೂ ನಾಗಠಾಣ ಮಂಡಲ ಅಧ್ಯಕ್ಷ ರಾಮ ಅವಟಿ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಎಲ್ಲ ಚುನಾಯಿತ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ. 13ರ ಬಾಳವ್ವ ಅಗಸರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ. 2ರ ಶರಣವ್ವ ಕಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಿ ಇಬ್ಬರೂ ಸದಸ್ಯರಿಗೆ ಮತ ಚಲಾಯಿಸುವಂತೆ ಪಕ್ಷದ ಎಲ್ಲ ಸದಸ್ಯರಿಗೆ ವಿಪ್ ಕೂಡ ಜಾರಿ ಮಾಡಲಾಗಿದೆ.

    ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಕವಿತಾ ಬಿರಾದಾರ ಹಾಗೂ ಸಾವಿತ್ರಿ ಸಿಂಧೆ ಅವರು ‘ವಿಜಯವಾಣಿ’ಯೊಂದಿಗೆ ಮಾತನಾಡಿ, ನಾವು ಆಕಾಂಕ್ಷಿಗಳಾಗಿದ್ದು ನಿಜ. ಆದರೆ, ಪಕ್ಷದ ವರಿಷ್ಠರ ಸೂಚನೆಯಿಂದಾಗಿ ನಾವು ಪಕ್ಷಕ್ಕೆ ಬದ್ಧರಾಗಿ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇವೆ. ಪಕ್ಷ ವಿಪ್ ಕೂಡ ಜಾರಿಗೊಳಿಸಿದ್ದು, ಯಾವುದೇ ಕಾರಣಕ್ಕೂ ಮಾತೃ ಸಮಾನವಾದ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts