More

    ಸಹಬಾಳ್ವೆ ಬೆಳಗುವ ಪ್ರೀತಿಯ ಬಕ್ರೀದ್ | ತ್ಯಾಗ, ಬಲಿದಾನದ ಮಹತ್ವ ಸಾರುವ ಹಬ್ಬ

    ಪವಿತ್ರ ಇಸ್ಲಾಂ ಧರ್ಮದಲ್ಲಿ ತ್ಯಾಗ ಮತ್ತು ಬಲಿದಾನದ ಮಹತ್ವ ಸಾರುವ ಹಬ್ಬ ಬಕ್ರೀದ್. ಇದಕ್ಕೆ ‘ಈದ್-ಉಲ್-ಅಧಾ’ ಎಂದೂ ಕರೆಯಲಾಗುತ್ತದೆ. ಕರೊನಾ ವೈರಸ್ ಸೃಷ್ಟಿಸಿದ ಆತಂಕದಿಂದಾಗಿ ಈ ಬಾರಿ ಸರಳವಾಗಿ ಹಬ್ಬ ಆಚರಿಸಿ, ಅಲ್ಲಾಹ್​ನ ಕೃಪೆಗೆ ಪಾತ್ರರಾಗೋಣ. ಎಲ್ಲರಿಗೂ ಈದ್-ಮುಬಾರಕ್.

    ಉತ್ತಮ ವ್ಯಕ್ತಿತ್ವದಿಂದಲೇ ಸರ್ವಶಕ್ತ ‘ಅಲ್ಲಾಹ್’ನ ಪ್ರೀತಿಗೆ ಪಾತ್ರರಾದವರು ಪ್ರವಾದಿ ಇಬ್ರಾಹಿಂ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರಿಗಿಂತಲೂ ಮೊದಲೇ ಪ್ರವಾದಿಯಾಗಿದ್ದ ಅವರು, ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದರು. ಮುಸ್ಲಿಮರ ಪವಿತ್ರ ಕ್ಷೇತ್ರ ‘ಮಕ್ಕಾ’ದಲ್ಲಿ ಖಾಬಾ ಕಟ್ಟಡ ನಿರ್ಮಾಣ ಪ್ರಕ್ರಿಯೆ ಆರಂಭಿಸಿದ್ದರು. ಅಲ್ಲಿ ನೂರಾರು ಕಾರ್ವಿುಕರು ದಿನವಿಡೀ ಬೆವರು ಹರಿಸಿ ದುಡಿಯುತ್ತಿದ್ದರು. ಬೆಳಗ್ಗೆಯಿಂದ ನಿರ್ವಿುಸಿದ ಕಟ್ಟಡ ಸಂಜೆಯಾಗುತ್ತಲೇ ನೆಲಸಮವಾಗುತ್ತಿತ್ತು!

    ಸಹಬಾಳ್ವೆ ಬೆಳಗುವ ಪ್ರೀತಿಯ ಬಕ್ರೀದ್ | ತ್ಯಾಗ, ಬಲಿದಾನದ ಮಹತ್ವ ಸಾರುವ ಹಬ್ಬಇದರಿಂದ ಅಚ್ಚರಿಗೊಂಡ ಪ್ರವಾದಿ ಇಬ್ರಾಹಿಂ, ಶ್ರದ್ಧೆಯಿಂದ 2 ರಕಾತ್ ‘ನಮಾಜ್’ ಮಾಡಿದರು. ‘ನಾವು ನಿತ್ಯವೂ ನಿರ್ವಿುಸುವ ಖಾಬಾ ಕಟ್ಟಡ ಸಂಜೆಯಾಗುತ್ತಲೇ ಬೀಳಲು ಕಾರಣವೇನು?’ ಎಂದು ‘ಅಲ್ಲಾಹ್’ನಲ್ಲಿ ಕೇಳಿಕೊಂಡರು. ‘ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಮನ್ನಿಸು’ ಎಂದು ಪ್ರಾರ್ಥಿಸಿದರು. ಆಗ, ಅಲ್ಲಾಹ್​ನಿಂದ ದೇವವಾಣಿ ಮೂಲಕ ‘ನೀವು ನನ್ನ ಹೆಸರಿನಲ್ಲಿ ಪ್ರಾಣಿಬಲಿ ನೀಡಬೇಕು’ ಎಂದು ಆಜ್ಞೆಯಾಯಿತು. ಅದನ್ನು ಪಾಲಿಸಿದ ಇಬ್ರಾಹಿಂ ಅವರು, ನೂರಾರು ಒಂಟೆಗಳ ಬಲಿದಾನ ನೀಡಿ ಕಟ್ಟಡ ನಿರ್ಮಾಣ ಆರಂಭಿಸಿದರು. ಆದರೂ, ಮತ್ತೆ ಅದು ಬೀಳಲಾರಂಭಿಸಿತು. ಇದರಿಂದ ಆತಂಕಗೊಂಡ ಇಬ್ರಾಹಿಂ, ‘ನಿನ್ನ ಆಜ್ಞೆ ಪಾಲಿಸಿದರೂ ಕಟ್ಟಡ ಬೀಳುತ್ತಿದೆಯಲ್ಲ. ಇದಕ್ಕೊಂದು ಪರಿಹಾರ ಕೊಡು’ ಎಂದು ಮತ್ತೆ ಅಲ್ಲಾಹ್​ನಲ್ಲಿ ನಿವೇದಿಸಿಕೊಂಡರು. ಆಗ, ಅಲ್ಲಾಹ್​ನಿಂದ ದೇವವಾಣಿ ಮೂಲಕ ‘ನೀವು ಜಗತ್ತಿನಲ್ಲಿ ಹೆಚ್ಚಾಗಿ ಪ್ರೀತಿಸುವವರನ್ನು ನನಗೆ ಬಲಿದಾನ ನೀಡಬೇಕು’ ಎಂಬ ಆಜ್ಞೆಯಾಯಿತು.

    80ನೇ ವಯಸ್ಸಿನ ನಂತರ ಇಬ್ರಾಹಿಂ ಅವರಿಗೆ ಏಕೈಕ ಪುತ್ರ ಜನಿಸಿದ್ದ. ಆತನ ಹೆಸರು ಇಸ್ಮಾಯಿಲ್. ಇಬ್ರಾಹಿಂ ಆತನನ್ನೇ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಹಾಗಾಗಿ, ದೇವರ ಆಜ್ಞೆಯಂತೆ ಮಗನ ಬಲಿದಾನವನ್ನೇ ನೀಡಬೇಕೆಂದು ಚಿಂತನೆ ನಡೆಸಿದರು. ಮಗನ ಬಲಿದಾನ ನೀಡುವುದಕ್ಕಾಗಿ ಆತನನ್ನು ಕರೆದುಕೊಂಡು ಹೊರಟರು. ಮಾರ್ಗಮಧ್ಯದಲ್ಲಿ ಎದುರಾದ ಸೈತಾನ್ (ದೆವ್ವ) ಇಸ್ಮಾಯಿಲ್​ನನ್ನು ಮಾತನಾಡಿಸಿತು. ‘ಬಲಿದಾನ ನೀಡಲು ನಿನ್ನನ್ನು ಕರೆದೊಯ್ಯುತ್ತಿದ್ದಾರೆ. ನಿನ್ನ ತಂದೆಯೊಂದಿಗೆ ಏಕೆ ಹೋಗುತ್ತೀಯಾ’ ಎಂದು ಪ್ರಶ್ನಿಸಿತು. ಇದಕ್ಕೆ ಕಿವಿಗೊಡದ ಇಸ್ಮಾಯಿಲ್ ತಮ್ಮ ತಂದೆಯೊಂದಿಗೆ ಹೆಜ್ಜೆ ಹಾಕಿದ. ನಿರ್ದಿಷ್ಟ ಸ್ಥಳ ತಲುಪಿದ ಇಬ್ರಾಹಿಂ, ‘ನಿನ್ನನ್ನು ಬಲಿದಾನ ನೀಡಬೇಕು ಎಂದು ‘ಅಲ್ಲಾಹ್’ನಿಂದ ಆಜ್ಞೆಯಾಗಿದೆ. ನೀನು ಅಪ್ಪಣೆ ಕೊಟ್ಟರೆ ಮಾತ್ರ ಅದನ್ನು ಈಡೇರಿಸುವೆ’ ಎಂದು ಮಗನಲ್ಲಿ ಕೇಳಿಕೊಂಡರು. ಇದಕ್ಕೆ ಇಸ್ಮಾಯಿಲ್ ಪ್ರೀತಿಯಿಂದಲೇ ಸಮ್ಮತಿ ಸೂಚಿಸಿದ. ‘ನನ್ನನ್ನು ದೇವರಿಗೆ ಅರ್ಪಿಸಿ ಕೃತಜ್ಞತೆಗೆ ಒಳಗಾಗಿರಿ’ ಎಂದು ತಂದೆಗೆ ಧೈರ್ಯ ತುಂಬಿದ.

    ‘ನನ್ನ ಕುತ್ತಿಗೆಗೆ ಚೂರಿ ಹಾಕುವಾಗ, ನಿಮಗೆ ಕನಿಕರ ಹುಟ್ಟಬಹುದು. ಹಾಗಾಗಿ ಎರಡೂ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಳ್ಳಿ’ ಎಂದು ವಿನಂತಿಸಿಕೊಂಡ. ಇದನ್ನು ಅನುಸರಿಸಿದ ಇಬ್ರಾಹಿಂ, ಮಗನ ಕುತ್ತಿಗೆ ಮೇಲೆ ಹರಿತವಾದ ಚೂರಿ ಹಾಕಿದರು. ಆದರೆ, ಕುತ್ತಿಗೆ ಕೊಯ್ಯಲಿಲ್ಲ. ಎರಡು-ಮೂರು ಬಾರಿ ಪ್ರಯತ್ನಿಸಿದರೂ ಇದೇ ಅನುಭವವಾಯಿತು. ಇದರಿಂದ ಮತ್ತೆ ಗೊಂದಲಕ್ಕೆ ಒಳಗಾದ ಇಬ್ರಾಹಿಂ, ‘ದೇವರೇ ನನ್ನ ಮಗನ ಬಲಿದಾನ ಸ್ವೀಕರಿಸು. ತಪ್ಪಾಗಿದ್ದರೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರು. ಆಗ ಅಲ್ಲಾಹ್​ನಿಂದ ಮತ್ತೆ ದೇವವಾಣಿ ಮೂಲಕ, ‘ನನ್ನ ಪರೀಕ್ಷೆಯಲ್ಲಿ ನೀವು ಗೆದ್ದಿರುವಿರಿ. ನಿಮ್ಮ ಭಕ್ತಿ ಮತ್ತು ತ್ಯಾಗಕ್ಕೆ ಮೆಚ್ಚಿರುವೆ. ನನಗೆ ನಿಮ್ಮ ಮಗನ ಬದಲಿಗೆ, ದೇವದೂತ ಜಿಬ್ರಾಯಿಲ್ ಮೂಲಕ ಕಳುಹಿಸಿರುವ ಸಾಕುಪ್ರಾಣಿ ಬಲಿದಾನ ನೀಡಿ’ ಎಂದು ಆಜ್ಞೆಯಾಯಿತು. ಆಗ ಇಬ್ರಾಹಿಂ ಅವರು ಪ್ರಾಣಿಯ ಬಲಿದಾನ ನೀಡಿ ಅಲ್ಲಾಹ್​ನ ಕೃಪೆಗೆ ಪಾತ್ರರಾದರು. ದೇವರ ಆಶೀರ್ವಾದದೊಂದಿಗೆ ಖಾಬಾ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿದರು. ಈ ಘಟನೆ ಸವಿನೆನಪಿಗಾಗಿ ಪ್ರತಿವರ್ಷವೂ ‘ಬಕ್ರೀದ್’ ಹಬ್ಬ ಆಚರಿಸಲಾಗುತ್ತದೆ.

    ಸಾಮೂಹಿಕ ಪ್ರಾರ್ಥನೆ: ಈ ಹಬ್ಬದ ದಿನದಂದು ಬೆಳಗ್ಗೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ಸಶಕ್ತ ಮುಸ್ಲಿಮರು ಪ್ರಾಣಿಬಲಿ ನೀಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಇದು ಕಡ್ಡಾಯವಾಗಿದ್ದು, ಪ್ರಾಣಿಬಲಿ ನೀಡುವ ಪದ್ಧತಿಗೆ ‘ಕುರ್ಬಾನಿ’ ಎನ್ನಲಾಗುತ್ತದೆ. ಬಲಿ ನೀಡಿದ ಪ್ರಾಣಿಯ ಮಾಂಸವನ್ನು 3 ಭಾಗಗಳಾಗಿ ವಿಂಗಡಿಸುತ್ತಾರೆ. ಒಂದು ಭಾಗ ಬಡವರಿಗೆ, ಮತ್ತೊಂದು ಭಾಗ ಹಿತೈಷಿಗಳಿಗೆ ಹಂಚಿದರೆ, 3ನೇ ಭಾಗವನ್ನು ತಮ್ಮ ಮನೆಯಲ್ಲೇ ಉಪಯೋಗಿಸುತ್ತಾರೆ. ಇದರಿಂದಾಗಿ ‘ಅಲ್ಲಾಹ್’ನ ಆಜ್ಞೆ ಪಾಲಿಸಿದ ತೃಪ್ತಿ ದೊರೆಯುವ ಜತೆಗೆ, ಬಡವರ ಹಸಿವು ನೀಗುತ್ತದೆ.

    ಸಹಬಾಳ್ವೆ ಬೆಳಗುವ ಪ್ರೀತಿಯ ಬಕ್ರೀದ್ | ತ್ಯಾಗ, ಬಲಿದಾನದ ಮಹತ್ವ ಸಾರುವ ಹಬ್ಬಹಜ್ ಯಾತ್ರೆ ಮೊಟಕು: ಇಸ್ಲಾಂ ಧರ್ಮದಲ್ಲಿ ಕಲ್ಮಾ, ನಮಾಜ್, ರೋಜಾ, ಜಕಾತ್ ಮತ್ತು ಹಜ್ ಯಾತ್ರೆ ಎನ್ನುವ ಐದು ಕಡ್ಡಾಯ ನಿಯಮಗಳಿವೆ. ವಿಶ್ವಾದ್ಯಂತ ನೆಲೆಸಿರುವ ಮುಸ್ಲಿಮರು, ಬಕ್ರೀದ್ ಸಂದರ್ಭದಲ್ಲಿ ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಕರ್ಮಭೂಮಿಯಾಗಿರುವ ಸೌದಿ ಅರೇಬಿಯಾ ದೇಶದಲ್ಲಿರುವ ಮಕ್ಕಾ ಮತ್ತು ಮದೀನಾ ದರ್ಶನ ಪಡೆದು, ಸರ್ವಶಕ್ತ ಅಲ್ಲಾಹ್​ನ ಪ್ರೀತಿಗೆ ಪಾತ್ರರಾಗುತ್ತಾರೆ. ತಾವು ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡು, ಮನಃಪರಿವರ್ತನೆಯೊಂದಿಗೆ ತಾಯ್ನಾಡಿಗೆ ಮರಳುತ್ತಾರೆ. ಕರೊನಾ ವೈರಸ್ ಆತಂಕದಿಂದಾಗಿ ಈ ಸಲ ಅನೇಕ ಜನರ ಹಜ್ ಯಾತ್ರೆ ಕನಸು ಭಗ್ನಗೊಂಡಿದೆ. ಹಾಗಾಗಿ ನಾವೆಲ್ಲರೂ ಮನೆಯಲ್ಲೇ ಹೃದಯವೈಶಾಲ್ಯದಿಂದ ಅಲ್ಲಾಹ್​ನನ್ನು ಸ್ಮರಿಸೋಣ. ಸಮಾಜದಲ್ಲಿ ಸಹಬಾಳ್ವೆಯಿಂದ ಬಾಳುತ್ತ, ಎಲ್ಲರಿಗೂ ಪ್ರೀತಿ ಹಂಚೋಣ.
    | ಹಜರತ್ ಸೈಯದ್ ಷಾ ಮುಸ್ತಫಾ ಖಾದ್ರಿ,
    ಧರ್ಮಗುರುಗಳು, ಮಳಖೇಡ ದರ್ಗಾ, ಕಲಬುರಗಿ ಜಿಲ್ಲೆ

    ಸಹಬಾಳ್ವೆ ಬೆಳಗುವ ಪ್ರೀತಿಯ ಬಕ್ರೀದ್ | ತ್ಯಾಗ, ಬಲಿದಾನದ ಮಹತ್ವ ಸಾರುವ ಹಬ್ಬಸರ್ಕಾರಿ ಮಾರ್ಗಸೂಚಿ ಅನುಸರಿಸಿ: ಪ್ರತಿವರ್ಷ ಬಕ್ರೀದ್ ಹಬ್ಬದ ದಿನದಂದು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಪ್ರವಾದಿ ಇಬ್ರಾಹಿಂ ಅವರ ಬದುಕು ಮತ್ತು ತ್ಯಾಗ-ಬಲಿದಾನದ ಕುರಿತು ಧರ್ಮಗುರುಗಳು ಸಂದೇಶ ನೀಡುತ್ತಿದ್ದರು. ಪ್ರಾರ್ಥನೆ ನಂತರ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಈ ಸಲ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಮಸೀದಿಗಳಲ್ಲೇ ದೈಹಿಕ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಬ್ಬದ ಶುಭಾಶಯ ಕೋರಲು ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ತೆರಳಬಾರದು. ಗಣ್ಯರನ್ನು ಮನೆಗೆ ಊಟಕ್ಕೆ ಆಹ್ವಾನಿಸಬಾರದು. ಕರೊನಾ ನಿಯಂತ್ರಣ ದೃಷ್ಟಿಯಿಂದ ಸರ್ಕಾರ ಪ್ರಕಟಿಸಿದ ಮಾರ್ಗಸೂಚಿ ಪಾಲಿಸಿ, ಸಾಮುದಾಯಿಕ ಆರೋಗ್ಯ ಕಾಪಾಡಲು ಸಹಕರಿಸಬೇಕು.
    | ಅಮೀರಸಾಬ್ ಮೆಹಬೂಬ್​ಸಾಬ್ ಥರಥರಿ. ಧರ್ಮಗುರುಗಳು, ಮೂಡಲಗಿ (ಬೆಳಗಾವಿ ಜಿಲ್ಲೆ)

    ಸಹಬಾಳ್ವೆ ಬೆಳಗುವ ಪ್ರೀತಿಯ ಬಕ್ರೀದ್ | ತ್ಯಾಗ, ಬಲಿದಾನದ ಮಹತ್ವ ಸಾರುವ ಹಬ್ಬಪ್ರಾಣ ರಕ್ಷಣೆಗೆ ಒತ್ತು ನೀಡಿ: ಜೀವ ಇದ್ದರೆ ಜೀವನ. ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರಾಣ ರಕ್ಷಣೆಗೆ ಒತ್ತು ನೀಡಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅಗತ್ಯ ಸುರಕ್ಷತಾ ಕ್ರಮ ಅನುಸರಿಸಬೇಕು. ಬಕ್ರೀದ್ ಹಬ್ಬವನ್ನು ಸಾಧ್ಯವಾದಷ್ಟು ಮನೆಗೇ ಸೀಮಿತವಾಗಿ ಆಚರಿಸಬೇಕು. ಹಬ್ಬದ ಹೆಸರಿನಲ್ಲಿ ಅನಗತ್ಯವಾಗಿ ವ್ಯಯಿಸುವ ಹಣವನ್ನು ಬಡವರಿಗೆ ನೀಡಿ ಮಾನವೀಯತೆ ಮೆರೆಯಬೇಕು. ತಮ್ಮ ಜೀವದ ಹಂಗು ತೊರೆದು, ಕರೊನಾ ವಿರುದ್ಧ ಸೆಣಸುತ್ತಿರುವ ಸೇನಾನಿಗಳನ್ನು ಗೌರವಿಸಬೇಕು. ಆಗ ಸಮಾಜದಲ್ಲಿ ಪರಸ್ಪರರ ಮಧ್ಯೆ ಬಾಂಧವ್ಯ ವೃದ್ಧಿಸುತ್ತದೆ.
    | ಮುಹಮ್ಮದ್ ನಜೀರ್ ಅಶ್ರಫಿ. ಧರ್ಮಗುರುಗಳು, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts