More

    ನಮಾಜ್​ನಲ್ಲಿ 50 ಜನರಿಗೆ ಮಾತ್ರ ಅವಕಾಶ

    ಕಾರವಾರ: ಬಕ್ರೀದ್ ಹಬ್ಬವನ್ನು ಅತ್ಯಂತ ಸುರಕ್ಷಿತವಾಗಿ ಆಚರಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು, ಮುಸ್ಲಿಂ ಹಾಗೂ ಹಿಂದು ಮುಖಂಡರೊಂದಿಗೆ ಶಾಂತಿಪಾಲನಾ ಸಭೆ ನಡೆಸಿ ಅವರು ಮಾತನಾಡಿದರು. ಧಾರ್ವಿುಕ ಆಚರಣೆಗಳು ಜನ ಹಕ್ಕು. ಆದರೆ, ಅದರ ಜತೆಗೆ ಅಷ್ಟೆ ಸಾಮಾಜಿಕ ಜವಾಬ್ದಾರಿಯೂ ಇರುತ್ತದೆ. ಕೋವಿಡ್-19ನಂತಹ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚು ಜನ ಸೇರದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬಹುದಾಗಿರುತ್ತದೆ. ಒಂದು ವೇಳೆ ಅಧಿಕ ಜನರು ಆಗಮಿಸಿದ್ದಲ್ಲಿ 2 ಅಥವಾ 3 ಬ್ಯಾಚ್​ನಂತೆ ಆಯಾ ಮಸೀದಿಗಳಲ್ಲಿ ನಮಾಜ್ ನಿರ್ವಹಿಸಲು ಸರ್ಕಾರ ನಿರ್ದೇಶನ ನೀಡಿದ್ದು, ಸರ್ಕಾರದ ಈ ಆದೇಶ ಪಾಲನೆ ಆಗಬೇಕೆಂದು ತಿಳಿಸಿದರು.

    ಎಸ್​ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಈ ಬಾರಿ ಹಿಂದು ಅಥವಾ ಮುಸ್ಲಿಂ ಧಾರ್ವಿುಕ ಹಬ್ಬಗಳನ್ನು ಮೊದಲಿನಂತೆ ಆಚರಿಸಲು ಸಾಧ್ಯವಾಗುವುದಿಲ್ಲ, ಇದಕ್ಕೆ ಜನರ ಸಹಕಾರ ಅತ್ಯಗತ್ಯ. ಧಾರ್ವಿುಕ ಮುಖಂಡರು ಜನರಲ್ಲಿ ಮುಂಚಿತವಾಗಿ ತಿಳುವಳಿಕೆ ನೀಡುವ ಮೂಲಕ ಆರೋಗ್ಯಕರ ಹಬ್ಬ ಆಚರಿಸುವಂತಾಗಬೇಕು. ರಾಜ್ಯ ವಕ್ಪ್ ಮಂಡಳಿ ಬಕ್ರೀದ್ ಹಬ್ಬವನ್ನು ಆಚರಿಸಲು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಅದರನ್ವಯ ಜನರು ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್​ನ್ನು ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಪ್ರಾರ್ಥನೆಗೆ ಬರುವವರು ತಮ್ಮ ಮನೆಗಳಿಂದಲೇ ಮ್ಯಾಟ್ ಅನ್ನು ಕಡ್ಡಾಯವಾಗಿ ತರಬೇಕು. ಮಸೀದಿಗಳಿಗೆ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ತಿಳಿಸಬೇಕು. ಅಪರಿಚಿತರು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಬಂದಲ್ಲಿ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಒಂದು ನೋಂದಣಿ ಪುಸ್ತಕವನ್ನು ನಿರ್ವಹಿಸುವುದು ಸೂಕ್ತವಾಗಿರುತ್ತದೆ ಎಂದರು.

    ಸೂಚನೆ ಉಲ್ಲಂಘಿಸಿದರೆ ಪ್ರಕರಣ ದಾಖಲು: ಶಿರಸಿ: 5ಕ್ಕಿಂತ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸಬಾರದು. ಹಾಗೊಮ್ಮೆ ಸೂಚನೆ ಉಲ್ಲಂಘಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ ಹೇಳಿದರು. ಶಾಂತಿ ಪಾಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುರುಬಾನಿ ಹೆಸರಿನಲ್ಲಿ ಬಡವರಿಗೆ ಆಹಾರ ಹಂಚಬಾರದು. ಅದಕ್ಕೆ ಮೀಸಲಿಟ್ಟ ಮೊತ್ತವನ್ನು ಬೇರೆ ಸಂದರ್ಭದಲ್ಲಿ ನೀಡಬೇಕು. ಸಂಪ್ರದಾಯ ಹೆಸರಿನಲ್ಲಿ ಕರೊನಾ ವಿಸ್ತರಣೆಗೆ ಯಾರೂ ಅವಕಾಶ ನೀಡಬಾರದು ಎಂದ ಅವರು, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯ ಸೂಚನೆ ಮೀರಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಮಸೀದಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಬಳಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 60 ವರ್ಷದ ಮೇಲ್ಪಟ್ಟವರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಹೋಂ ಕ್ವಾರಂಟೈನ್​ನಲ್ಲಿರುವವರು, ಜ್ವರದ ಲಕ್ಷಣ ಇರುವವರಿಗೆ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಹೇಳಿದರು. ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಮಸೀದಿಗಳಿಂದ ಫರ್ವನು ಹೊರಡಿಸಬೇಕು. ಪವಿತ್ರ ಹಬ್ಬವನ್ನು ಕರೊನಾ ಹೆಸರಲ್ಲಿ ಅಪವಿತ್ರ ಮಾಡಬಾರದು ಎಂದರು. ನಗರಸಭೆ ಸದಸ್ಯ ಖಾದರ್ ಆನವಟ್ಟಿ. ರೇವಣಕಟ್ಟಾದ ಮಹಮ್ಮದ್ ರಿಯಾಜ್ ಮಾತನಾಡಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಸಿಪಿಐ ಪ್ರದೀಪ ಬಿ.ಯು., ಪಿಎಸ್​ಐಗಳಾದ ನಾಗಪ್ಪ ಬಿ., ಶಿವಾನಂದ ನಾವಲಗಿ, ಮೊಹಮ್ಮದ್ ಇಲಿಯಾಸ್ ರೇವಣಕಟ್ಟಾ, ಖಾದರ್ ಆನವಟ್ಟಿ, ಅಬೂಜರ್ ಹೆಗಡೆಕಟ್ಟಾ, ಎ. ರೆಹಮಾನ್ ಹಾಗೂ ತಾಲೂಕಿನ ಎಲ್ಲ ಮಸೀದಿ ಸಮಿತಿಗಳ ಮುಖ್ಯಸ್ಥರು, ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts