More

    ಕಳಂಕಿತ ಅದಿರು ಮುಕ್ತಿ ಕಾಣುವ ಹಂತದಲ್ಲಿ

    ಕಾರವಾರ: ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರು ಪ್ರದೇಶದಲ್ಲಿ 13 ವರ್ಷಗಳಿಂದ ಬಿದ್ದಿರುವ ಕೋಟ್ಯಂತರ ರೂ. ಮೌಲ್ಯದ ಕಳಂಕಿತ ಅದಿರು ವಿಲೇವಾರಿಯಾಗುವ ಹಂತಕ್ಕೆ ಬಂದಿದೆ.

    ಶೀಘ್ರ ವಿಲೇವಾರಿ ಸತತ 6 ಬಾರಿ ಇ-ಹರಾಜು ನಡೆಸಿದ ನಂತರ ಗುತ್ತಿಗೆದಾರರು ಅದಿರು ಖರೀದಿಸಿದ್ದು, ಶೀಘ್ರ ಅವುಗಳ ವಿಲೇವಾರಿ ಪ್ರಕ್ರಿಯೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2020 ರಿಂದ ಸತತವಾಗಿ ಹರಾಜು ಕರೆದು ಅಕ್ರಮ ಅದಿರನ್ನು ವಿಲೇವಾರಿ ಮಾಡಲು ಯತ್ನ ನಡೆಸಿತ್ತು.

    ಆರನೇ ಬಾರಿ ಹರಾಜಾಯ್ತು ಅದಿರು

    6 ನೇ ಬಾರಿಯ ಇ-ಹರಾಜಿನಲ್ಲಿ ವಾಣಿಜ್ಯ ಬಂದರಿನ ವ್ಯಾಪ್ತಿಯಲ್ಲಿರುವ ಒಟ್ಟು 18 ಅದಿರು ರಾಶಿಗಳ ಸುಮಾರು 30 ಸಾವಿರ ಮೆಟ್ರಿಕ್ ಟನ್ ಅದಿರನ್ನು ಕಂಪನಿಯೊಂದು ಖರೀದಿಸಿ ಹಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಭರಣ ಮಾಡಿದೆ.

    ಅದನ್ನು ಕಾರವಾರ ಜೆಎಂಎ್ಸಿ ನ್ಯಾಯಾಲಯದಲ್ಲಿ ಜಮಾ ಮಾಡಿ, ಅದಿರು ಸಾಗಣೆಗೆ ಅನುಮತಿ ಪಡೆಯಬೇಕಿದೆ.

    ಕಂಪನಿಗಳಿಗೆ ಅದಿರು ಸಾಗಣೆಗೆ 3 ತಿಂಗಳು ಅವಕಾಶ ನೀಡಲಾಗಿದೆ ಎಂದು ಗಣಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಜ್ಯದಲ್ಲಿ ನಡೆದ ಅತಿ ದೊಡ್ಡ ಭ್ರಷ್ಟಾಚಾರ ಎಂಬ ಆರೋಪ ಹೊತ್ತ ಪ್ರಕರಣವೊಂದರ ಕತೆಯದು

    ಆಗ ಬಳ್ಳಾರಿಯಿಂದ ಕಾರವಾರ ಬಂದರಿನ ಮೂಲಕ ವಿದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಅದಿರಿನ ರ್ತು ನಡೆಯುತ್ತಿತ್ತು.

    ಅಕ್ರಮವಾಗಿ ಅದಿರು ಸಾಗಣೆ ಮಾಡುತ್ತಿರುವ ಆರೋಪದ ಮೇಲೆ ಲೋಕಾಯುಕ್ತ ಸೂಚನೆ ಮೇರೆಗೆ ಕಾರವಾರದಲ್ಲಿ ಸುಮಾರು 60 ಸಾವಿರ ಟನ್ ಅದಿರನ್ನು ಅರಣ್ಯ ಇಲಾಖೆಯು 2010 ರ ಮಾರ್ಚ್ 20 ರಂದು ವಶಕ್ಕೆ ಪಡೆದಿತ್ತು.

    ಆದರೆ, ಬಂದರು ಇಲಾಖೆಯ ಸಂರಕ್ಷಣೆಯಲ್ಲಿದ್ದ ಒಂದಿಷ್ಟು ಅದಿರು ನಾಪತ್ತೆಯಾಗಿದೆ ಎಂದು ಅದೇ ವರ್ಷ ಜೂನ್ 8 ರಂದು ಕಾರವಾರ ಪೊಲೀಸ್ ಠಾಣೆಗಳಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು.

    ಪ್ರಕರಣ ಮೊದಲು ಸಿಐಡಿಗೆ ಹಸ್ತಾಂತರವಾಗಿತ್ತು. ಅಕ್ರಮ ಅದಿರು ಸಾಗಣೆ ಹಾಗೂ ವಶಪಡಿಸಿಕೊಂಡ ಅದಿರು ಕಳ್ಳಸಾಗಣೆ ಸಂಬಂಧ ಸಿಐಡಿ, ಸಿಬಿಐ ವಿಚಾರಣೆ ನಡೆಸಿವೆ.

    ಪ್ರಕರಣ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇವೆ.

    ಅರಣ್ಯ ಇಲಾಖೆ ಅದನ್ನು ಸಂರಕ್ಷಿಸಲು ಪ್ರತಿ ವರ್ಷ ಲಕ್ಷಾಂತರ ರೂ. ಖರ್ಚು ಮಾಡಿ ಹೆಣಗಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅದನ್ನು ವಿಲೇವಾರಿ ಮಾಡಲು ಅರಣ್ಯ ಇಲಾಖೆ ಹಲವು ಬಾರಿ ನ್ಯಾಯಾಲಯಕ್ಕೆ ಅನುಮತಿ ಕೋರಿತ್ತು.

    ಹಿಂದೆ ಕಾರವಾರ ಬಂದರಿನಲ್ಲಿ ದಾಸ್ತಾನಿದ್ದ ಅದಿರನ್ನು ಹರಾಜು ಹಾಕಲು ಸಿಬಿಐ ವಿಶೇಷ ನ್ಯಾಯಾಲಯ ಅರಣ್ಯ ಇಲಾಖೆಗೆ ಅನುಮತಿ ನೀಡಿತ್ತು.

    ಆದರೆ, ಹರಾಜಿಗೆ ಅದಿರು ಕಂಪನಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ಆ ಪ್ರಕ್ರಿಯೆ ಅರ್ಧಕ್ಕೇ ನಿಂತಿತ್ತು.

    2020 ರ ಜೂನ್‌ನಲ್ಲಿ ಅಂತಿಮವಾಗಿ ಈ ಅದಿರಿನ ಹರಾಜಿಗೆ ಹೈಕೋರ್ಟ್ ಹಾಗೂ ಕಾರವಾರ ಜೆಎಂಎ್ಸಿ ನ್ಯಾಯಾಲಯ ಅನುಮತಿ ನೀಡಿತ್ತು.

    ಅದರಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅದಿರಿನ ಮೌಲ್ಯಮಾಪನ ನಡೆಸಿ ಹರಾಜು ಪ್ರಕ್ರಿಯೆ ನಡೆಸುವ ಜವಾಬ್ದಾರಿ ಪಡೆದುಕೊಂಡಿತ್ತು.

    ಬೇಲೆಕೇರಿಗೆ ಇನ್ನೂ ಅನುಮತಿ ಇಲ್ಲ

    ಬೇಲೆಕೇರಿ ಬಂದರಿನಲ್ಲಿ ಒಟ್ಟು 11 ಕಂಪನಿಗಳಿಗೆ ಸೇರಿದ ಸುಮಾರು 250 ಕೋಟಿ ರೂ. ಮೌಲ್ಯದ 8,05,991 ಮೆಟ್ರಿಕ್ ಟನ್ ಅದಿರನ್ನು ವಶಕ್ಕೆ ಪಡೆಯಲಾಗಿತ್ತು.

    ಅದರಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 5 ಲಕ್ಷ ಮೆಟ್ರಿಕ್ ಟನ್ ಕಳ್ಳಸಾಗಣೆಯಾಗಿದೆ ಎಂಬ ದೂರಿತ್ತು.

    ಉಳಿದ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಅದಿರು ಕಳೆದ 13 ವರ್ಷಗಳಿಂದ ಬಂದರಿನಲ್ಲೇ ಕೊಳೆಯುತ್ತಿದೆ. ಬೇಲೆಕೇರಿಯಲ್ಲಿರುವ ಅದಿರುಗಳನ್ನು ವಿಲೇವಾರಿ ಮಾಡಲು ಇನ್ನೂ ಅನುಮತಿ ದೊರೆತಿಲ್ಲ.

    ಬೈತಖೋಲ್ ಬಂದರಿನ ಅದಿರು ಹರಾಜು ಮಾಡಲಾಗಿದೆ. ಅದಿರನ್ನು ವಿಲೇವಾರಿ ಮಾಡಲು ಹರಾಜು ಪಡೆದ ಕಂಪನಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದೆ. ನ್ಯಾಯಾಲಯದ ಅನುಮತಿ ದೊರೆತ ಬಳಿಕ ಶೀಘ್ರ ಅದಿರನ್ನು ಬಂದರಿನಿಂದ ಖಾಲಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
    – ಆಶಾ ಎಸ್.ಜಿ., ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts