More

    ಹೆಬ್ಬಾಳ ಕೈ ಅಭ್ಯರ್ಥಿ ಬೈರತಿ ಸುರೇಶ್‌ ಬಿರುಸಿನ ಪ್ರಚಾರ

    ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ | ಮತ್ತೊಮ್ಮೆ ಗೆದ್ದರೆ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಮಾಡುವ ಭರವಸೆ

    ಹೆಬ್ಬಾಳ: ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬೈರತಿ ಸುರೇಶ್ , ಸಮ್ಮುಖದಲ್ಲಿ ಗುರುವಾರ ಮನೋರಾಯನಪಾಳ್ಯ ವಾರ್ಡ್ ವ್ಯಾಪ್ತಿಯ ದೊಡ್ಡಮ್ಮ ಲೇಔಟ್‌ನಲ್ಲಿ ವಿವಿಧ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್‌ ಸೇರ್ಪಡೆಯಾದರು.

    ಕಾರ್ಯಕ್ರಮದ ನಂತರ ಬೈರತಿ ಸುರೇಶ್‌ ಮನೋರಾಯನ ಪಾಳ್ಯ ವಾರ್ಡ್ ವ್ಯಾಪ್ತಿಯ ತುಳಸಮ್ಮ ಲೇಔಟ್, ನಾಗೇನಹಳ್ಳಿ ವಾರ್ಡ್‌ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿ, ಕಾಂಗ್ರೆಸ್‌ ಪಕ್ಷದ ಪರ ಮತಯಾಚನೆ ಮಾಡಿದರು. ಬೈರತಿ ಸುರೇಶ್‌ ಚುನಾವಣಾ ಪ್ರಚಾರಕ್ಕೆ ತೆರಳಿದ ಎಲ್ಲೆಡೆ ಅಭೂತಪೂರ್ವ ಸ್ಪಂದನೆ, ಬೆಂಬಲ ವ್ಯಕ್ತವಾಯಿತು.

    ನಂತರ ಮಾತನಾಡಿದ ಬೈರ, ಈ ಬಾರಿ ಶಾಸಕನಾಗಿ ಆಯ್ಕೆ ಯಾದರೆ, ಕ್ಷೇತ್ರದಲ್ಲಿ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, 15 ವರ್ಷಗಳಿಂದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಶಾಶ್ವತ ಹಕ್ಕುಪತ್ರ ವಿತರಣೆ ಸೇರಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ರಾಜ್ಯದಲ್ಲಿರುವ ಸರ್ಕಾರ ಕೇವಲ ಹೆಸರಿಗಷ್ಟೇ ಡಬಲ್ ಇಂಜಿನ್, ವಾಸ್ತವದಲ್ಲಿ ಇದು ಶೇ.40 ಸರ್ಕಾರ ಎಂದು ಬಿಜೆಪಿ ಆಡಳಿತ ಕ್ರಮವನ್ನು ಲೇವಡಿ ಮಾಡಿದರು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ಮನೆಗಳಿಗೂ 200 ಯೂನಿಟ್‌’ ಉಚಿತ ವಿದ್ಯುತ್‌, ಪ್ರತಿ ಮನೆಯ ಮನೆಯೊಡತಿಗೆ ಮನೆಯ ನಿರ್ವಹಣೆಗಾಗಿ ಪ್ರತಿ ತಿಂಗಳು 2,000 ರೂ. ಸಹಾಯಧನ, ಪ್ರತಿ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ, ನಿರುದ್ಯೋಗ ಪದವೀಧರರಿಗೆ 3,000 ರೂ. ಭತ್ಯೆ ನೀಡಲಾಗುವುದು ಎಂದರು.

    ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತಿ ನಂತೆ ನಾವು ಮಾಡುವ ಕೆಲಸ ನಮ್ಮನ್ನು ಕೈಹಿಡಿಯುತ್ತದೆ. ಎಂಬುದಕ್ಕೆ ಇಂದು ನಾನು ಮತಯಾಚನೆಗೆ ತೆರಳಿದೆಲ್ಲೆಡೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲ, ಜನಸ್ಪಂದನೆಯೇ ಸಾಕ್ಷಿ. ಕಳೆದ ಐದು ವರ್ಷಗಳಲ್ಲಿ ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿ ಶೇ.90 ಅಭಿವೃದ್ಧಿ ಕಾರ್ಯಗಳಾಗಿವೆ. ಈ ಬಾರಿ ಅಯ್ಕೆಯಾದರೆ ಉಳಿದ ಅಭಿವೃದ್ಧಿ ಕಾರ್ಯಗಳ ಜೊತೆಗೆ, ಹೆಬ್ಬಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಇತರರು ಹಿಂತಿರುಗಿ ನೋಡುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಪತ್ನಿ-ಪುತ್ರನಿಂದಲೂ ಮತಯಾಚನೆ

    ಕಾಂಗ್ರೆಸ್‌ ಅಭ್ಯರ್ಥಿ ಬೈರತಿ ಸುರೇಶ್ ಪರವಾಗಿ ಪತ್ನಿ ಪದ್ಮಾವತಿ ಜೆ.ಸಿ.ನಗರ ವಾರ್ಡ್ ವ್ಯಾಪ್ತಿಯ ಮಠದಹಳ್ಳಿ, ಕಬೀರ ಆಶ್ರಮದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಕಾರ್ಯ ಕೈಗೊಂಡರು. ಪುತ್ರ ಸಂಜಯ್ ವಾರ್ಡ್ ವ್ಯಾಪ್ತಿಯ ಸೆಂಟ್ರಲ್ ಎಕ್ಸೆಸ್‌ ಬಡಾವಣೆ ಹಾಗೂ ಮನೋರಾಯನಪಾಳ್ಯ ವಾರ್ಡ್ ವ್ಯಾಪ್ತಿಯ ಚಾಮುಂಡಿನಗರದಲ್ಲಿ ತಂದೆ ಬೈರತಿ ಸುರೇಶ್‌ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.

    ಮಾದರಿ ಹೆಬ್ಬಾಳ ಕ್ಷೇತ್ರ ನಿರ್ಮಾಣ ನನ್ನ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ತಂದು ಅದರ ಅರ್ಥಪೂರ್ಣ ವಿನಿಯೋಗಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ.
    | ಬೈರತಿ ಸುರೇಶ್ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts